SSLC Hindi Exam: ಮಾರ್ಚ್‌ 30ರ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು | SSLC Hindi Exam Row: Fresh Trouble Ahead for March 30 Test Board Issues Key Security Measures and Clarification

Karnataka

oi-Hitesh Y

SSLC Hindi Exam: ಹಿಂದಿ ಹೇರಿಕೆ ಹಾಗೂ ಶಿಕ್ಷಣದಲ್ಲಿ ಹಿಂದಿ ಭಾಷೆಯನ್ನು ತೆಗೆಯಬೇಕು ಎನ್ನುವ ವಿಷಯವು ಇದೀಗ ಕರ್ನಾಟಕದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಕಳೆದ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ (ಕರ್ನಾಟಕದ ಬೋರ್ಡ್‌ ಪರೀಕ್ಷೆ – ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರಲ್ಲಿ) 1.42 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಇದೀಗ 2026ರ ಎಸ್‌ಎಸ್‌ಎಲ್‌ಸಿಯ ಹಿಂದಿ ಪರೀಕ್ಷೆಯನ್ನು ನಡೆಸಬಾರದು ಎಂದು ಹಲವರು ಆಗ್ರಹಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಯನ್ನು ರದ್ದುಪಡಿಸಲು ವಿವಿಧ ಕನ್ನಡ ಪರ ಸಂಘಟನೆಗಳು ದಿನಾಂಕ 30.03.2026 / ಮಾರ್ಚ್‌ 30ರಂದು ನಡೆಯುವ ತೃತೀಯ ಭಾಷಾ ವಿಷಯ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿ ಹೇಳಿವೆ. ಹೀಗಾಗಿ, ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಭದ್ರತೆ ಕಲ್ಪಿಸುವ ಕುರಿತು ಮಹತ್ವದ ಆದೇಶವನ್ನು ಮಾಡಲಾಗಿದೆ. ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಮಾರ್ಚ್ 11ರಂದು ಮನವಿ ಸಲ್ಲಿಸಿದ್ದವು.

SSLC Hindi Exam

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಹಾಗೂ ಹಿಂದಿ ವಿಷಯವನ್ನು ರದ್ದುಗೊಳಿಸಬೇಕು ಎಂಬ ವಿವಿಧ ಬೇಡಿಕೆಗಳ ಕುರಿತು ವಿವಿಧ ಕನ್ನಡ ಪರ ಸಂಘಟನೆಗಳು ಮಾರ್ಚ್‌ 11ರಂದು ಬೆಳಿಗ್ಗೆ 11ಗಂಟೆಗೆ ಮಂಡಳಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದ್ದರು. ಈ ಮನವಿಯಲ್ಲಿ ದಿನಾಂಕ 30-03-2026 / ಇದೇ 30ರಂದು ಹಿಂದಿ ಭಾಷಾ ಪರೀಕ್ಷೆ ನಡೆಯುವ ದಿನದಂದು ಎಲ್ಲಾ ಕನ್ನಡಪರ ದಲಿತ-ರೈತ-ಜನಪರ ಸಂಘಟನೆಗಳು ಸೇರಿ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ದಿನಾಂಕ 30-03-2026 ರಂದು ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷಾ ದಿನದಂದು ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ, ಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನೀಡಿ ಪರೀಕ್ಷೆಯು ಸುಸೂತ್ರವಾಗಿ ನಡೆಯಲು ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೂಡಲೇ ಮನವಿ ಸಲ್ಲಿಸಿ ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧ್ಯಕ್ಷರು ಸುತ್ತೋಲೆ ಹೊರಡಿಸಿದ್ದಾರೆ.

SSLC Hindi Exam: ಹಿಂದಿ ಹೇರಿಕೆಗೆ ವಿರೋಧ

ಇನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದಿ ಹೇರಿಕೆ ವಿರೋಧಿ ಅಭಿಯಾನವು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇನ್ನು ವಿವಿಧ ಪರೀಕ್ಷೆಗಳನ್ನು ಬರೆಯುವುದಕ್ಕೆ ಕನ್ನಡಿಗರಿಗೆ / ಕನ್ನಡ ಭಾಷೆಯಲ್ಲಿ ಅವಕಾಶ ನೀಡದೆ ಕೇವಲ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಅವಕಾಶ ನೀಡುತ್ತಿರುವುದು ಸಹ ವಿರೋಧಕ್ಕೆ ಕಾರಣವಾಗಿದೆ.

SSLC: ಹಿಂದಿ ಭಾಷೆಯಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಫೇಲ್

ಇನ್ನು 2024 – 2025ನೇ ಸಾಲಿನಲ್ಲಿ ಹಿಂದಿ ಭಾಷೆಯಲ್ಲಿ ಕರ್ನಾಟಕದಲ್ಲಿ ಒಟ್ಟು 1.42 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಹಿಂದಿ ಭಾಷಾ ಪರೀಕ್ಷೆಯಲ್ಲಿ ಶೇ.19.72 ರಷ್ಟು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹೀಗಾಗಿ, ಹಿಂದೆ ಭಾಷೆಯನ್ನು ಕೈಬಿಡಬೇಕು ಎಂದು ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/sslc-hindi-exam-row-fresh-trouble-ahead-for-march-30-test-board-issues-key-security-measures-and-cl-448423.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo