
India
oi-Hitesh Y
Political Trends: ಯಾವ ಮನೆಯ ಸಾಸಿವೆ ತರಹೊರಟಿದ್ದೀರಿ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ವ್ಯಕ್ತಿಗಳನ್ನು ಟೀಕೆ ಮಾಡಿ, ನಿಂದಿಸಿ, ಗೇಲಿ ಮಾಡಿ ಪ್ರಜಾತಂತ್ರವನ್ನು, ಸಂವಿಧಾನವನ್ನು ಉಳಿಸಿಕೊಳ್ಳುತ್ತೇವೆ ಎಂದು ಹೊರಟರೆ, ಪರಸ್ಪರ ನಿಂದಾ ಕ್ರೀಡೆಯಿಂದಾಚೆಗೆ (ನಾನದನ್ನು ಡ್ರಿಬ್ಲಿಂಗ್ ಎಂದು ಗುರುತಿಸುತ್ತೇನೆ) ಯಾವುದೂ ಎಲ್ಲಿಗೂ ತಲುಪಲಾರದು. ಕಳೆದೊಂದು ದಶಕದಿಂದ ಕಾಣಿಸುತ್ತಿರುವ ಈ ಟ್ರೆಂಡ್ ಬಗ್ಗೆ ಇನ್ನೂ ಅರ್ಥ ಆಗಿರದಿದ್ದರೆ, ಅದು ನಮ್ಮ ವೈಫಲ್ಯ, ಕೊರತೆ.

ರಾಜಕಾರಣದಲ್ಲಿ ಇಂದು ಸಭ್ಯರು, ಸದ್ಗ್ರಹಸ್ಥರು, ನ್ಯಾಯವಂತರು ಯಾರೂ ಉಳಿದಿಲ್ಲ. ನಾವು ಯಾರನ್ನು ಆರಿಸುತ್ತಿದ್ದೇವೆ, ಏಕೆ, ಹೇಗೆ ಆರಿಸುತ್ತಿದ್ದೇವೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ನಮ್ಮಲ್ಲೂ ಇಲ್ಲ. ಸಂವಿಧಾನದ ಅಕ್ಷರಗಳನ್ನು ಅಲ್ಲಿಗೇ ಸೀಮಿತಗೊಳಿಸಿ ಅದರ “ಸ್ಪಿರಿಟ್” ಅನ್ನು ಮರೆತು, ಸಮಾಜದಲ್ಲಿ ಕೆಡುಕರು ಮತ್ತು ಬಲಾಢ್ಯರನ್ನೇ, ಯಾವುದೋ ಸಮ್ಮೋಹಿನಿಗೆ ಸಿಕ್ಕವರಂತೆ ಆರಿಸುತ್ತಾ ಬರುತ್ತಿದ್ದೇವೆ. ಗಾಳಿ ಬಂದತ್ತ ತೂರಿಕೊಳ್ಳುವುದಷ್ಟೇ ಆಗಿದೆ ಮತದಾರರ ಸ್ಥಿತಿ.
ಕೆಲವು ಮಂದಿ ಕಾಲಕಾಲಕ್ಕೆ ನಮ್ಮನ್ನೆಲ್ಲ ದಿಕ್ಕುತಪ್ಪಿಸಲು ಏನೇನು ಬೇಕೋ ಅದನ್ನೆಲ್ಲ ಮಾಡುತ್ತಾ ಬರುತ್ತಿರುತ್ತಾರೆ. ಈಗ ದೇಶದ ಚುಕ್ಕಾಣಿ ಹಿಡಿದಿರುವವರ ಖಾಸಗಿ ಸಂಗತಿಗಳ ಕುರಿತು ವೈಯಕ್ತಿಕ ನಿಂದೆ ಶುರು ಆಗಿದೆ. ಸರ್ಕಾರದ ವಿರೋಧ ಮಾಡುತ್ತಾ ಬಂದವರು, ಈ ಟ್ರ್ಯಾಪ್‌ಗೆ ಸುಲಭವಾಗಿ ಸಿಕ್ಕಿಹಾಕಿಕೊಂಡು ಅದೇ ಹಳೆಯ ಡ್ರಿಬ್ಲಿಂಗ್ ಆರಂಭಿಸಿದ್ದಾರೆ.
ನಿಜಕ್ಕೂ ಅಂತಹದೇನಾದರೂ ಇದ್ದರೆ, ಅದು ಅಪರಾಧ ಆಗಿದ್ದರೆ, ಅದಕ್ಕೆ ಕಾನೂನು-ನ್ಯಾಯಾಂಗದ ಹಾದಿ ಇದೆ. ಅದನ್ನು ಅನುಸರಿಸುವುದು ಬಿಟ್ಟು ಹಾದಿ ಬೀದಿಯಲ್ಲಿ ಕಥೆ ಹೇಳಿದರೆ, ಅದೂ “ಲೂಸ್ ಕ್ಯಾನನ್”ಗಳ ಮೂಲಕ – ಗುಂಡುಗಳು ತಲುಪಬೇಕಾದಲ್ಲಿ ತಲುಪುವುದಿಲ್ಲ. ಕಳೆದ ಹದಿನೈದು ವರ್ಷಗಳಿಂದ ಇಂತಹವೆಲ್ಲ ಏನೂ ಪರಿಣಾಮ ಮಾಡಿಲ್ಲ, ಬದಲಾಗಿ ಆರ್ಕೆಸ್ಟ್ರೇಟೆಡ್ ವಿಭಜನೆಯ ರಾಜಕೀಯಕ್ಕೆ ಬಲ ತಂದುಕೊಟ್ಟಿದೆ ಎಂಬುದು ಅರ್ಥ ಆಗದಿದ್ದರೆ, ಅಂತಹವರಿಗೆ ಇವತ್ತಿನ ರಾಜಕೀಯದ ಬಾಲಪಾಠವೂ ಇಲ್ಲ ಎಂದೇ ಪರಿಗಣಿಸಬೇಕು.
ಹಾಲೀ ಸರ್ಕಾರದ ಕಾರ್ಯವೈಖರಿ, ಅದರ ನೀತ್ಯಾತ್ಮಕ ಲೋಪಗಳು, ಆತ್ಮಘಾತಕ ತೀರ್ಮಾನಗಳು, ದುಷ್ಟ ಒಡನಾಟಗಳು, ಘೋರ ವೈಫಲ್ಯಗಳನ್ನೂ ಸಮರ್ಥಿಸಿಕೊಳ್ಳುವ ಭಂಡತನಗಳು… ಇಂತಹ ಸಾವಿರಾರು ವಸ್ತುನಿಷ್ಠ ಸಂಗತಿಗಳು ಕಣ್ಣು ತೆರೆದರೆ ಕಾಣಸಿಗುತ್ತವೆ. ಹಾಲಿ ಪ್ರಭುತ್ವ ಕೆಲವು ಹೆಜ್ಜೆಗಳನ್ನಾದರೂ ಹಿಂದಡಿ ಇಟ್ಟದ್ದು ಅಂತಹ ಸಂಗತಿಗಳಿಗೆ ಮುಖಾಮುಖಿ ಆದಾಗ ಮಾತ್ರ. ಈ ಚರಿತ್ರೆ ನೆನಪಿಟ್ಟುಕೊಳ್ಳದೇ ಅದೇ ಹಾಡಿದ್ದೇ ಹಾಡಿದರೆ ಮುಂದಿನಬಾರಿ (2029) ಮತ್ತೆ ಯಥಾಸ್ಥಿತಿ ಮುಂದುವರಿಯಲಿದೆ; ಅಥವಾ ಬಾಣಲೆಯಿಂದ ಬೆಂಕಿಗೆ ದೇಶ ಬೀಳಲಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/political-trends-democracy-lost-in-blame-game-politics-which-house-s-mustard-are-you-from-writes-ra-448507.html. xn--babytilbehr-pgb.com does not claim ownership of this content. All rights remain with the original publisher.
