ಪ್ರಧಾನಿ ಕರೆದ ಸಭೆಗೆ ಹಾಜರಾಗದೇ ಸಿದ್ದರಾಮಯ್ಯ ಭಂಡತನ ಪ್ರದರ್ಶನ: ಬಸವರಾಜ ಬೊಮ್ಮಾಯಿ | Basavaraj Bommai Slams CM Siddaramaiah for Skipping PM’s Meeting and Mismanaging State Funds

Karnataka

oi-Shankrappa Parangi

ಬಾಗಲಕೋಟೆ: ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿರುವ ಅಪಖ್ಯಾತಿ ಸಿದ್ದರಾಮಯ್ಯ ಸರ್ಕಾರಕ್ಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ವಿಚಾರದಲ್ಲಿ ವಾರ್ಷಿಕ 18 ಸಾವಿರ ಕೋಟಿ ನೀಡುವುದಾಗಿ ಹೇಳಿ ಬಜೆಟ್‌ನಲ್ಲಿ ಕೇವಲ 3 ಸಾವಿರ ಕೋಟಿ ಮೀಸಲಿಟ್ಟು, ಈ ಭಾಗದ ಜನರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ. ಇದು ಕ್ಷಮೆಗೆ ಅರ್ಹವಲ್ಲ ಎಂದು ಮಾಜಿ ಮುಖ್ಯಮಂತಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಚುನಾವಣೆ ನಾವು ನಿರೀಕ್ಷೆ ಮಾಡಿರಲಿಲ್ಲ. ಎಚ್.ವೈ. ಮೇಟಿಯವರ ನಿಧನದಿಂದ ತೆರವಾದ ಸಂದರ್ಭದಲ್ಲಿ ನಾಲ್ಕು ರಾಜ್ಯಗಳ ಜೊತೆಗೆ ಈ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. 2023 ರ ಚುನಾವಣೆಗೂ ಈಗ ನಡೆಯುತ್ತಿರುವ ಚುನಾವಣೆಗೂ ಬಹಳಷ್ಟು ರಾಜಕೀಯ ಬದಲಾವಣೆ ಆಗಿದೆ. ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಹುಸಿಯಾಗಿದ್ದು, ಭ್ರಮ ನಿರಸನ ಆಗಿದೆ.

Basavaraj Bommai

ಸಭೆಗೆ ಗೈರಾಗಿ ಸಿಎಂ ಸಿದ್ದರಾಮಯ್ಯ ಉದ್ಧಟತನ

ತಾವು ಕೆಲವು ತಪ್ಪು ಮಾಡಿದ್ದಾರೆ. ಜಲ ಜೀವನ ಮಿಷನ್ ಸರಿಯಾಗಿ ಜಾರಿ ಮಾಡಿಲ್ಲ. ಅನೇಕ ಯೋಜನೆಗಳಿಗೆ ರಾಜ್ಯದ ಪಾಲಿನ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಯುದ್ಧದ ಪರಿಣಾಮವಾಗಿ ಅಬಕಾರಿ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಬೇರೆ ದೇಶಗಳಲ್ಲಿ ಆರ್ಥಿಕ ವ್ಯವಹಾರ ನಿಂತು ಹೋಗಿದೆ. ಭಾರತದಲ್ಲಿ ಯಾವುದೇ ತೊಂದರೆಯಾಗಿಲ್ಲ. ಎಲ್ಲರ ಸಹಕಾರ ಬೇಕು ಎಂದು ಸಿಎಂಗಳ ಸಭೆ ಕರೆದರೆ ಇವರು ಉದ್ದಟತನ ತೋರಿಸುತ್ತಾರೆ. ಆ ಸಭೆಗೆ ಹೋಗದೇ ಮಂತ್ರಿಗಳನ್ನು ಕಳುಹಿಸುತ್ತಾರೆ. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕೇರಳ ಸಿಎಂ ಹಾಗೂ ಪ್ರತಿಪಕ್ಷಗಳ ಸಿಎಂಗಳು ಪ್ರಧಾನಿ ಸಭೆಗೆ ಹೋಗಿದ್ದಾರೆ. ಸಿದ್ದರಾಮಯ್ಯ ನೀತಿ ಆಯೋಗದ ಸಭೆಗೂ ಹೋಗುವುದಿಲ್ಲ. ರಾಜ್ಯದ ಹಿತ ಕಾಯುವ ಜವಾಬ್ದಾರಿ ಇರುವವರು ತಮ್ಮ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ಕಾಲದಲ್ಲಿ ಆರ್ಥಿಕತೆ ನಿಯಂತ್ರಣ

ಇನ್ನೂ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿರುವ ಅಪಖ್ಯಾತಿ ಸಿದ್ದರಾಮಯ್ಯ ಸರ್ಕಾರಕ್ಕೆ ಇದೆ. ಕೊವಿಡ್ ಇದ್ದರೂ ಸಹ ಕೂಡ ನಾವು ಆರ್ಥಿಕ ಸ್ಥಿತಿಯನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟಿದ್ದೆವು. ಈಗಾಗಲೇ ನಾಲ್ಕು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇನ್ನು ಮೂರು ಬಜೆಟ್ ಮಂಡಿಸಿದರೆ ಹೊಸದಾಗಿ ಆರರಿಂದ ಏಳು ಲಕ್ಷ ಕೋಟಿ ಸಾಲವನ್ನು ರಾಜ್ಯದ ಜನರ ಮೇಲೆ ಹೊರಿಸುತ್ತಾರೆ. ಅದನ್ನು ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ

14ನೇ ಹಣಕಾಸು ಆಯೋಗದ ಸಂದರ್ಭದಲ್ಲಿ ಯುಪಿಎ ಅವಧಿಯಲ್ಲಿ ಕೊಟ್ಟ ಹಣಕ್ಕಿಂತ 15 ನೇ ಹಣಕಾಸು ಆಯೋಗದ ಸಂದರ್ಭದಲ್ಲಿ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟಿದೆ. ರೈಲ್ವೆಗೆ ಅತಿ ಹೆಚ್ಚು ಹಣ ಕೊಟ್ಟಿದೆ. ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ 700 ಕೋಟಿ ರೂ. ಬರುತ್ತಿತ್ತು. ಈಗ 7 ಸಾವಿರ ಕೋಟಿ ರೂ. ಬರುತ್ತಿದೆ. ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಮಾಡಲಾಗಿದೆ. ಜಿಎಸ್‌ಟಿ ದರ ಇಳಿಸಿರುವುದು ಜನ ಸಾಮಾನ್ಯರಿಗೆ ಅನುಕುಲವಾಗಿದೆ. ಜನ ಸಾಮಾನ್ಯರು ಆರ್ಥಿಕ ಭಾರ ಕಡಿಮೆ ಮಾಡಿ ಅಂತ ಮನವಿ ಮಾಡಿದ್ದರು. ಜನರ ಮೇಲಿನ ತೆರಿಗೆ ಕಡಿಮೆ ಮಾಡಿದರೆ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹೇಳುತ್ತಿರುವುದು ಇದ್ಯಾವ ನ್ಯಾಯವೆಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮುಳುಗಡೆ ಪ್ರದೇಶದ ಮನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಸುಮಾರು 400 ಕೋಟಿ ರೂ. ಹಂಚಿದ್ದೇವೆ ಎಂದು ಹೇಳಿದ್ದಾರೆ. ಇವರೇ ಮೂರು ತಿಂಗಳ ಹಿಂದೆ 2025 ಅಕ್ಟೋಬರ್ 9 ರಂದು ಆದೇಶ ಮಾಡಿದ್ದರು. ಅದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತದ ಭೂಸ್ವಾಧೀನ ಕೈ ಅಗತ್ಯವಿರುವ ಸುಮಾರು 75 ಸಾವಿರ ಕೋಟಿ ರೂ. ಮುಂದಿನ ನಾಲ್ಕು ವರ್ಷ ಭರಿಸಲು ವಾರ್ಷಿಕ 18 ಸಾವಿರ ಕೋಟಿ ರೂ. ಒದಗಿಸಲು ಸಚಿವ ಸಂಪುಟದಲ್ಲಿ ಅನುಮೋದಿಸಲಾಗಿದೆ.

ರಾಜ್ಯ ಬಜೆಟ್‌ನಲ್ಲಿ 3 ಸಾವಿರ ಕೋಟಿ ಇಟ್ಟಿದ್ದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಅದರ ಹಿಂದಿನ ವರ್ಷ ಭೂಸ್ವಾಧಿನಕ್ಕೆ ಪರಿಹಾರ ಕೊಡಬೇಕೆಂದು ರೈತರು ಕೋರ್ಟ್‌ಗೆ ಹೋದರೆ, ನೀರಾವರಿ ಇಲಾಖೆ ಸೆಕೆಟರಿ ಕೋರ್ಟ್‌ಗೆ ಪರಿಹಾರ ಕೊಡಲು ತಮ್ಮ ಬಳಿ ಹಣ ಇಲ್ಲ ಎಂದು ಅಪಿಡವಿಟ್ ಕೊಡುತ್ತಾರೆ. ಜನರ ಕಣ್ಣಿಗೆ ಮಣ್ಣು ಹಾಕಲು 18 ಸಾವಿರ ಕೋಟಿ ಪ್ರತಿ ವರ್ಷ ಕೊಡುತ್ತೇವೆ ಎಂದು ಹೇಳಿ 3 ಸಾವಿರ ಕೋಟಿ ಬಜೆಟ್‌ ನಲ್ಲಿ ಇಟ್ಟರೆ ಹೇಗೆ ಪರಿಹಾರ ಹಂಚುತ್ತಾರೆ ಎಂದರು.

ಮುಳುಗಡೆ ಪ್ರದೇಶದಲ್ಲಿ ಜನರು ಪ್ರತಿ ವರ್ಷ ಮನೆ ಮಠ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜಮೀನು ಕಳೆದುಕೊಂಡಿದ್ದಾರೆ. ಊರಿಗೆ ಊರೆ ಮುಳುಗುತ್ತಿವೆ. ಎರಡನೇ ಹಂತದಲ್ಲಿಯೂ ಮುಳುಗುತ್ತವೆ. ನಗರ ಪ್ರದೇಶದಲ್ಲಿ ಎಂಟರಿಂದ ಹತ್ತು ವಾರ್ಡ್ ಮುಳುಗುತ್ತವೆ. ಈಗ ಮೂಗಿಗೆ ತುಪ್ಪ ಹಚ್ಚಲು ಆಜ್ಞೆ ಮಾಡಿ, ಈಗ 3 ಸಾವಿರ ಕೋಟಿ ಖರ್ಚು ಮಾಡಿ ಎಂದು ಹೇಳಿ, ಅಧಿಕಾರಿಗಳಿಗೆ ಅವನೂ ಖರ್ಚು ಮಾಡಬೇಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಹಿಂದೆ ಕೃಷ್ಣೆಯ ಮೇಲೆ ಆಣೆ ಮಾಡಿ 10 ಸಾವಿರ ಕೋಟಿ ಪ್ರತಿ ವರ್ಷ ಕೊಡುತ್ತೇವೆ ಎಂದು ಈ ಬಾಗದ ಜನರಗಿ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ಇದು ಕ್ಷಮೆಗೆ ಅರ್ಹವಲ್ಲ ಎಂದು ಹೇಳಿದರು.

ಬಾಗಲಕೋಟೆಗೆ ಕಾಂಗ್ರೆಸ್ ಕೊಟ್ಟ ಅನುದಾನವೆಷ್ಟು?

ಬಾಗಲಕೋಟೆ ನವನಗರಕ್ಕೆ ಕಾಂಗ್ರೆಸ್ ಕಾಲದಲ್ಲಿ ಎಷ್ಟು ಕೊಟ್ಟಿದ್ದೀರಿ ಸ್ಪಷ್ಟಪಡಿಸಿ, ಚರಂತಿಮಠ ಶಾಸಕರಾಗಿದ್ದಾಗ, ಕಾರಜೋಳ ನೀರಾವರಿ ಮಂತ್ರಿಯಾಗಿದ್ದಾಗ ನಾನು ಸಿಎಂ ಆಗಿದ್ದಾಗ ಬಾಗಲಕೋಟೆಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ಈಗ ಮೇಟಿಯವರ ಕೊನೆಯ ಆಸೆಯಂತೆ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಹೇಳುತ್ತಾರೆ. ಅವರು ಜೀವಂತ ಇದ್ದಾಗ ಯಾಕೆ ಮಾಡಲಿಲ್ಲ. ನಾವಿದ್ದಾಗ ನಾಲ್ಕು ಮೆಡಿಕಲ್ ಕಾಲೇಜು ಮಾಡಿದ್ದೇವು. ಇವರ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಎಂದು ಲೇವಡಿ ಮಾಡಿದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/basavaraj-bommai-slams-cm-siddaramaiah-for-skipping-pms-meeting-and-mismanaging-state-funds-448659.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo