
India
oi-Pragathi S
ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಏಪ್ರಿಲ್ 1, 2026 ರಿಂದ ಬಹುನಿರೀಕ್ಷಿತ ‘ಇಪಿಎಫ್‌ಒ 3.0’ (EPFO 3.0) ವ್ಯವಸ್ಥೆ ಜಾರಿಗೆ ಬರಲಿದ್ದು, ಇನ್ಮುಂದೆ ಪಿಎಫ್ ಖಾತೆಯು ಬಹುತೇಕ ಬ್ಯಾಂಕ್ ಖಾತೆಯಂತೆಯೇ ಕಾರ್ಯನಿರ್ವಹಿಸಲಿದೆ. ಈ ಹೊಸ ಅಪ್‌ಡೇಟ್‌ನೊಂದಿಗೆ ಯುಪಿಐ ಮತ್ತು ಎಟಿಎಂ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಪರಿಚಯಿಸಲಾಗುತ್ತಿದ್ದು, ದೇಶಾದ್ಯಂತ ಇರುವ ಸುಮಾರು 8 ಕೋಟಿಗೂ ಹೆಚ್ಚು ಪಿಎಫ್ ಚಂದಾದಾರರಿಗೆ ಇದರ ನೇರ ಲಾಭವಾಗಲಿದೆ.
ಹೊಸ ಇಪಿಎಫ್‌ಒಗೆ ಮೊಬೈಲ್ ಆ್ಯಪ್
ಇಪಿಎಫ್‌ಒ 3.0 ಅಪ್‌ಡೇಟ್ ಜೊತೆಗೆ, ಸರ್ಕಾರವು ಹೊಸದೊಂದು ‘ಇಪಿಎಫ್‌ಒ ಮೊಬೈಲ್ ಆ್ಯಪ್’ ಅನ್ನು ಕೂಡ ಬಿಡುಗಡೆ ಮಾಡುತ್ತಿದೆ. ಈ ಆ್ಯಪ್ ಮೂಲಕವೇ ಬಳಕೆದಾರರು ತಮ್ಮ ಪಿಎಫ್ ಖಾತೆಯ ಹಣವನ್ನು ನಿರ್ವಹಣೆ ಮಾಡಬಹುದಾಗಿದೆ. ಆಧಾರ್ ಆಧಾರಿತ ಒಟಿಪಿ (OTP) ಮತ್ತು ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಈ ಆ್ಯಪ್ ಕಾರ್ಯನಿರ್ವಹಿಸಲಿದ್ದು, ಭದ್ರತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಪಿಎಫ್ ಹಣಕ್ಕಾಗಿ ಕಚೇರಿಗಳಿಗೆ ಅಲೆಯುವುದು, ಭೌತಿಕವಾಗಿ ಕಾಗದಪತ್ರಗಳನ್ನು ಸಲ್ಲಿಸುವುದು ಹಾಗೂ ಉದ್ಯೋಗದಾತರ ಅನುಮೋದನೆಗಾಗಿ ಕಾಯುವ ದೀರ್ಘ ಪ್ರಕ್ರಿಯೆಗಳಿಗೆ ಇದರಿಂದ ಬ್ರೇಕ್ ಬೀಳಲಿದೆ. ಆ್ಯಪ್ ಮೂಲಕವೇ ಬ್ಯಾಲೆನ್ಸ್ ಚೆಕ್ ಮಾಡುವುದು, ಕ್ಲೇಮ್ ಸ್ಟೇಟಸ್ ನೋಡುವುದು ಮತ್ತು ಹಣ ಹಿಂಪಡೆಯಲು ಆನ್‌ಲೈನ್‌ನಲ್ಲೇ ಮನವಿ ಸಲ್ಲಿಸುವುದು ಇನ್ಮುಂದೆ ಬೆರಳ ತುದಿಯಲ್ಲೇ ನಡೆಯಲಿದೆ.

ಯುಪಿಐ ಮತ್ತು ಎಟಿಎಂ ಮೂಲಕ ತ್ವರಿತ ಹಣ ವಿತ್‌ಡ್ರಾಗೆ ಅವಕಾಶ
ಹೊಸ ವ್ಯವಸ್ಥೆಯಲ್ಲಿ ಅತಿ ದೊಡ್ಡ ಅವಕಾಶವೆಂದರೆ ಯುಪಿಐ ಮತ್ತು ಎಟಿಎಂ ಮೂಲಕ ಹಣ ಹಿಂಪಡೆಯುವ ಸೌಲಭ್ಯ. ಉದ್ಯೋಗಿಗಳು ತಮ್ಮ ತುರ್ತು ಅಗತ್ಯಗಳಿಗಾಗಿ ತಮ್ಮ ಒಟ್ಟು ಪಿಎಫ್ ಉಳಿತಾಯದಲ್ಲಿ ಶೇ. 75 ರಷ್ಟು ಅಥವಾ ನಿಗದಿತ ಅರ್ಹತೆಯ ಮಿತಿಯವರೆಗಿನ ಹಣವನ್ನು ತಕ್ಷಣವೇ ಅಥವಾ 24 ಗಂಟೆಗಳ ಒಳಗೆ ಪಡೆಯಬಹುದು. ಈ ಹಿಂದೆ ಪಿಎಫ್ ಹಣ ಕೈಸೇರಲು ಕನಿಷ್ಠ 15-20 ದಿನಗಳು ಬೇಕಾಗುತ್ತಿತ್ತು. ಆದರೆ, ಇಪಿಎಫ್‌ಒ 3.0 ಕೋರ್ ಬ್ಯಾಂಕಿಂಗ್ ಮಾದರಿಯ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರುವುದರಿಂದ, ಆಟೋಮ್ಯಾಟಿಕ್ ವೆರಿಫಿಕೇಶನ್ ಮೂಲಕ ಕೆಲವೇ ಗಂಟೆಗಳಲ್ಲಿ ಹಣವು ನೇರವಾಗಿ ಉದ್ಯೋಗಿಯ ಬ್ಯಾಂಕ್ ಖಾತೆ ಅಥವಾ ಯುಪಿಐ ಐಡಿಗೆ ಜಮೆಯಾಗಲಿದೆ.
ಹಳೆಯ ನಿಯಮಗಳೇ ಮುಂದುವರಿಕೆ, ಆದರೆ ಪ್ರಕ್ರಿಯೆ ವೇಗ
ಹಣ ಹಿಂಪಡೆಯುವ ಪ್ರಕ್ರಿಯೆ ವೇಗವಾದರೂ, ಪಿಎಫ್ ವಿತ್‌ಡ್ರಾ ಮಾಡುವ ಮೂಲ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ, ವೈದ್ಯಕೀಯ ತುರ್ತು ಪರಿಸ್ಥಿತಿ, ಮನೆ ನಿರ್ಮಾಣ, ಮಕ್ಕಳ ಉನ್ನತ ಶಿಕ್ಷಣ, ವಿವಾಹ ಅಥವಾ ನಿರುದ್ಯೋಗದಂತಹ ನಿರ್ದಿಷ್ಟ ಕಾರಣಗಳಿಗಾಗಿ ಮಾತ್ರ ಹಣವನ್ನು ಪಡೆಯಲು ಅವಕಾಶವಿರುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ಮ್ಯಾನುವಲ್ ಆಗಿ ದಾಖಲೆಗಳನ್ನು ಪರಿಶೀಲಿಸುವ ಹಂತವನ್ನು ಕೈಬಿಟ್ಟು, ಸಂಪೂರ್ಣ ಡಿಜಿಟಲೀಕರಣಗೊಳಿಸಿರುವುದರಿಂದ ವಿಳಂಬ ತಪ್ಪಲಿದೆ.
ಉದ್ಯೋಗ ಬದಲಿಸಿದರೆ ಆಟೋಮ್ಯಾಟಿಕ್ ಪಿಎಫ್ ವರ್ಗಾವಣೆ
ಇಪಿಎಫ್‌ಒ 3.0 ಅಡಿಯಲ್ಲಿರುವ ಮತ್ತೊಂದು ಬಹುದೊಡ್ಡ ಅನುಕೂಲವೆಂದರೆ ಪಿಎಫ್ ಖಾತೆಯ ತಡೆರಹಿತ ವರ್ಗಾವಣೆ. ಯಾವುದೇ ಉದ್ಯೋಗಿ ಕೆಲಸ ಬದಲಿಸಿದರೆ, ಕೆವೈಸಿ (KYC) ಪರಿಶೀಲನೆ ಆಧಾರದ ಮೇಲೆ ಹಳೆಯ ಪಿಎಫ್ ಖಾತೆಯ ಬ್ಯಾಲೆನ್ಸ್ ತಾನಾಗಿಯೇ ಹೊಸ ಕಂಪನಿಯ ಪಿಎಫ್ ಖಾತೆಗೆ ವರ್ಗಾವಣೆಯಾಗುತ್ತದೆ. ಇದಕ್ಕಾಗಿ ಉದ್ಯೋಗಿಗಳು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅಥವಾ ಹಳೆಯ ಕಂಪನಿಯಿಂದ ಕಡ್ಡಾಯ ಅನುಮೋದನೆ ಪಡೆಯುವ ಅಗತ್ಯವಿರುವುದಿಲ್ಲ.
ಒಟ್ಟಾರೆಯಾಗಿ, ಏಪ್ರಿಲ್‌ನಿಂದ ಜಾರಿಗೆ ಬರುತ್ತಿರುವ ಈ ಹೊಸ ಇಪಿಎಫ್‌ಒ 3.0 ವ್ಯವಸ್ಥೆಯು ಕೋಟ್ಯಂತರ ನೌಕರರಿಗೆ ತಮ್ಮ ನಿವೃತ್ತಿ ಉಳಿತಾಯದ ಹಣವನ್ನು ಯಾವುದೇ ಅಡೆತಡೆಗಳಿಲ್ಲದೆ, ಅತ್ಯಂತ ತುರ್ತು ಅಗತ್ಯವಿದ್ದಾಗ ವೇಗವಾಗಿ ಮತ್ತು ಸುಲಭವಾಗಿ ಬಳಸಿಕೊಳ್ಳಲು ನೆರವಾಗಲಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/epfo-3-0-upgrade-provident-fund-withdrawals-via-upi-and-atm-to-begin-from-this-april-1-2026-448705.html. xn--babytilbehr-pgb.com does not claim ownership of this content. All rights remain with the original publisher.
