
Entertainment
oi-Manohara M
ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು ಎಸ್ಎಸ್ಎಲ್ಸಿ (SSLC) ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ಮುಂದೆ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸದಿರಲು ಸರ್ಕಾರ ನಿರ್ಧರಿಸಿದೆ. ಈ ಕ್ರಾಂತಿಕಾರಿ ಬದಲಾವಣೆಯನ್ನು ಸ್ಯಾಂಡಲ್ವುಡ್ ನಟಿ, ಮುಂಗಾರುಮಳೆ ಖ್ಯಾತಿಯ ಪೂಜಾ ಗಾಂಧಿ ಶ್ಲಾಘಿಸಿದ್ದಾರೆ.
ಏನಿದು ಹೊಸ ನಿಯಮ?
2026ರ ಎಸ್ಎಸ್ಎಲ್ಸಿ ಪರೀಕ್ಷೆಯಿಂದಲೇ ಅನ್ವಯವಾಗುವಂತೆ ಈ ಹೊಸ ನಿಯಮ ಜಾರಿಗೆ ಬರಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಈ ಕುರಿತು ಮಾಹಿತಿ ನೀಡಿದ್ದು, ತೃತೀಯ ಭಾಷಾ ವಿಷಯಗಳಿಗೆ (ಹೆಚ್ಚಾಗಿ ಹಿಂದಿ) ಅಂಕ ನೀಡುವ ಪದ್ಧತಿಯನ್ನು ಕೈಬಿಡಲಾಗಿದೆ. ಹಿಂದಿನ ವರ್ಷಗಳಂತೆಯೇ ತೃತೀಯ ಭಾಷೆಗೆ 100 ಅಂಕಗಳ ಪ್ರಶ್ನೆ ಪತ್ರಿಕೆ ಇರುತ್ತದೆ.

ಅಂಕದ ಬದಲು ಗ್ರೇಡ್ ಇರಲಿದ್ದು, ಮೌಲ್ಯಮಾಪನದ ನಂತರ ಅಂಕಪಟ್ಟಿಯಲ್ಲಿ ಒಟ್ಟು ಅಂಕಗಳ ಬದಲಿಗೆ ಎ, ಬಿ, ಸಿ ಅಥವಾ ಡಿ ಗ್ರೇಡ್ಗಳನ್ನು ಮಾತ್ರ ನಮೂದಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ವಿಷಯದ ಅಂಕಗಳು ವಿದ್ಯಾರ್ಥಿಯ ಒಟ್ಟು ಶೇಕಡಾವಾರು (Percentage) ಅಥವಾ ರ್ಯಾಂಕ್ ನಿರ್ಧರಿಸಲು ಬಳಕೆಯಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ.
ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಪೂಜಾ ಗಾಂಧಿ
ಈ ನಿರ್ಧಾರ ಹೊರಬೀಳುತ್ತಿದ್ದಂತೆ ನಟಿ ಪೂಜಾ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ಇಂದು ನಿಜವಾಗಿಯೂ ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಅದ್ಭುತ ನಿರ್ಧಾರಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಮಧು ಬಂಗಾರಪ್ಪ ಅವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದಿದ್ದಾರೆ.
ಸರ್ಕಾರ ಇಂದು ತೆಗೆದುಕೊಂಡಿರುವ ತೀರ್ಪು ಕೇಳಿ ತುಂಬಾ ಖುಷಿ ಆಯ್ತು. ಹಿಂದಿ ಒಂದು ಭಾಷೆಯಾಗಿ ಕಲಿಯುವುದು ಮುಖ್ಯ. ಆದರೆ ಹಿಂದಿ ಕನ್ನಡದ ಮಕ್ಕಳ ಮೇಲೆ ಹೇರಿಕೆ ಆಗಬಾರದು. ಈ ಸಂದರ್ಭದಲ್ಲಿ ಎಲ್ಲ ಕನ್ನಡಪರ ಹೋರಾಟಗಾರರು, ಸಂಘಟನೆಗಳು, ಯಾರೆಲ್ಲ ಹೋರಾಟ ಮಾಡಿದ್ದಾರೋ ಅವರಿಗೆಲ್ಲ ಜಯ ಸಿಕ್ಕಿದೆ. ಅವರೆಲ್ಲರಿಗೂ ಅಭಿನಂದನೆಗಳನ್ನು ಹೇಳೋಕೆ ಇಷ್ಟಪಡುತ್ತೇನೆ. ಜೈ ಹಿಂದ್ ಜೈ ಕರ್ನಾಟಕ ಮಾತೆ” ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಕನ್ನಡಿಗರ ದಶಕಗಳ ಹೋರಾಟಕ್ಕೆ ಸಂದ ಜಯ
ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ತೃತೀಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕಾದ ಮತ್ತು ಅದರಲ್ಲಿ ಹೆಚ್ಚು ಅಂಕ ಗಳಿಸಬೇಕಾದ ಅನಿವಾರ್ಯತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೊರೆಯಾಗಿತ್ತು. ಈಗ ಸರ್ಕಾರದ ಈ ನಿರ್ಧಾರದಿಂದಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಕಲಿಕೆಗೆ ಹೆಚ್ಚಿನ ಒತ್ತು ನೀಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/pooja-gandhi-supports-karnataka-government-decision-on-kannada-hindi-in-sslc-marks-card-relief-448729.html. xn--babytilbehr-pgb.com does not claim ownership of this content. All rights remain with the original publisher.
