
Entertainment
oi-Manohara M
‘ಕಮಲಿ’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಕನ್ನಡಿಗರ ನೆಚ್ಚಿನ ನಟಿ ಅಮೂಲ್ಯ ಓಂಕಾರ್ ಸುದೀರ್ಘ ವಿರಾಮದ ನಂತರ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ತಮ್ಮ ಮುಗ್ಧ ನಟನೆ ಮತ್ತು ಕ್ಯೂಟ್ ಮುಖಭಾವದ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ಇವರು ಈಗ ಹೊಸ ಧಾರಾವಾಹಿಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಸನ್ ಉದಯ ಟಿವಿಯಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವ ‘ಮಹಾಲಕ್ಷ್ಮಿ ಮದುವೆ’ ಎಂಬ ನೂತನ ಧಾರಾವಾಹಿಯಲ್ಲಿ ಅಮೂಲ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿಯು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಮತ್ತೆ ಪರದೆಯ ಮೇಲೆ ತಮ್ಮ ನೆಚ್ಚಿನ ನಟಿಯನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸೀರಿಯಲ್ ಮೂಲಕ ಅಮೂಲ್ಯ ಓಂಕಾರ್ ಮತ್ತೊಮ್ಮೆ ಮೋಡಿ ಮಾಡುವುದು ಖಚಿತ ಎನ್ನಲಾಗುತ್ತಿದೆ.

ಏನಿದು ಕಥೆ?
ಅಮೂಲ್ಯ ಓಂಕಾರ್ ಗೌಡ ಈಗ ‘ಮಹಾಲಕ್ಷ್ಮಿ ಮದುವೆ’ ಎಂಬ ವಿಭಿನ್ನ ಕಥಾಹಂದರದ ಧಾರಾವಾಹಿಯ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಧಾರಾವಾಹಿಯು ತನ್ನ ತಾಯಿಯ ಏಳಿಗೆಗಾಗಿ ಮತ್ತು ಕುಟುಂಬದ ಹಿತದೃಷ್ಟಿಯಿಂದ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವ ಒಬ್ಬ ದಿಟ್ಟ ಯುವತಿಯ ಜೀವನದ ಸುತ್ತ ಸಾಗುತ್ತದೆ. ಧಾರಾವಾಹಿಯ ನಾಯಕಿ ಮಹಾಲಕ್ಷ್ಮಿಗೆ ಮದುವೆ ಮಾಡಬೇಕೆಂದು ಅವಳ ತಾಯಿ ಹರಸಾಹಸ ಪಡುತ್ತಿದ್ದಾರೆ. ಆದರೆ ಮಹಾಲಕ್ಷ್ಮಿ ವಿವಾಹವಾಗಲು ಒಂದು ಕಠಿಣ ಷರತ್ತು ವಿಧಿಸಿದ್ದಾಳೆ. ಮದುವೆಯ ನಂತರವೂ ನನ್ನ ದುಡಿಮೆಯ ಸಂಬಳ ನನ್ನ ತಾಯಿಯ ಕೈ ಸೇರಬೇಕು ಎನ್ನುವುದೇ ಆಕೆಯ ಅಚಲ ನಿರ್ಧಾರ. ಆದರೆ ಈ ಷರತ್ತನ್ನು ಕೇಳಿದ ಕೂಡಲೇ ಗಂಡಿನ ಕಡೆಯವರು ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸುತ್ತಾರೆ.
ಈ ಧಾರಾವಾಹಿಯ ಪ್ರೋಮೋ ಈಗಾಗಲೇ ಕುತೂಹಲ ಮೂಡಿಸಿದ್ದು, ಬರೋಬ್ಬರಿ 33 ಬಾರಿ ಗಂಡಿನ ಕಡೆಯವರು ಮನೆಗೆ ಬಂದು ಉಪ್ಪಿಟ್ಟು ತಿಂದು ಹೋಗಿದ್ದಾರೆಯೇ ಹೊರತು, ಮಹಾಲಕ್ಷ್ಮಿಯ ಷರತ್ತಿಗೆ ಒಪ್ಪಿ ಯಾರೂ ಮದುವೆಗೆ ಸಿದ್ಧರಾಗಿಲ್ಲ. ಸಮಾಜದ ಸಂಪ್ರದಾಯದ ಹೆಸರಲ್ಲಿ ಹೆಣ್ಣಿನ ದುಡಿಮೆ ಕೇವಲ ಗಂಡನ ಮನೆಗೆ ಸೀಮಿತ ಎಂಬ ನಂಬಿಕೆಯನ್ನು ಮಹಾಲಕ್ಷ್ಮಿ ಪ್ರಶ್ನಿಸುತ್ತಾಳೆ. ಇಷ್ಟೊಂದು ಬಾರಿ ತಿರಸ್ಕಾರ ಎದುರಿಸಿದರೂ ತನ್ನ ನಿರ್ಧಾರದಿಂದ ಆಕೆ ಕಿಂಚಿತ್ತೂ ಹಿಂದೆ ಸರಿದಿಲ್ಲ.
ತನ್ನ ತಾಯಿಯ ಬೆನ್ನಲುಬಾಗಿ ನಿಂತಿರುವ ಈ ಸ್ವಾಭಿಮಾನಿ ಹುಡುಗಿಯ ಷರತ್ತನ್ನು ಒಪ್ಪಿ, ಅವಳ ಕೈ ಹಿಡಿಯುವ ಆ ಗುಣವಂತ ಯಾರು? ಮಹಾಲಕ್ಷ್ಮಿಯ ಜೀವನದಲ್ಲಿ ಮದುವೆಯ ಕನಸು ನನಸಾಗುತ್ತಾ? ಎಂಬ ಪ್ರಶ್ನೆಗಳಿಗೆ ಧಾರಾವಾಹಿಯಲ್ಲಿ ಶೀಘ್ರದಲ್ಲೇ ಉತ್ತರ ಸಿಗಲಿದೆ. ಅಮೂಲ್ಯ ಅವರ ಈ ಹೊಸ ಅವತಾರವು ಕಿರುತೆರೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದು, ಕುಟುಂಬ ಮೌಲ್ಯಗಳ ನಡುವೆ ಹೆಣ್ಣಿನ ಸ್ವಾವಲಂಬನೆ ಗಮನ ಸೆಳೆಯುತ್ತಿದೆ.

ಪ್ರೋಮೋದಲ್ಲಿ ಹೊಸ ಲುಕ್ ರಿವೀಲ್
ಸನ್ ಉದಯ ಟಿವಿ ತನ್ನ ಅಧಿಕೃತ ಪುಟದಲ್ಲಿ ‘ಮಹಾಲಕ್ಷ್ಮಿ ಮದುವೆ’ ಧಾರಾವಾಹಿಯ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ‘ಕಮಲಿ’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಅಮೂಲ್ಯ ಅವರನ್ನು ಮತ್ತೆ ಕನ್ನಡ ಪರದೆಯ ಮೇಲೆ ನೋಡಿ ವೀಕ್ಷಕರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು “ನಮ್ಮ ನೆಚ್ಚಿನ ಕಮಲಿ ಮತ್ತೆ ಬಂದಳು” ಎಂದು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಹೊಸ ಪಾತ್ರದಲ್ಲಿ ಅಮೂಲ್ಯ ಅವರ ನಟನೆ ಮತ್ತು ದಿಟ್ಟತನದ ಷರತ್ತು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಸದ್ಯಕ್ಕೆ ವಾಹಿನಿಯು ಕೇವಲ ಪ್ರೋಮೋ ಮೂಲಕ ಧಾರಾವಾಹಿಯ ಕಥಾಹಂದರವನ್ನು ಪರಿಚಯಿಸಿದೆ. ಮೂಲಗಳ ಪ್ರಕಾರ, ಶೀಘ್ರದಲ್ಲೇ ಈ ಸೀರಿಯಲ್ ಪ್ರಸಾರವಾಗುವ ದಿನಾಂಕ ಮತ್ತು ಸಮಯವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ತಾಯಿಯ ಗೌರವಕ್ಕಾಗಿ ನಿಲ್ಲುವ ಮಗಳ ಈ ಕಥೆ ಉದಯ ಟಿವಿಯ ಪ್ರೈಮ್ ಟೈಮ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಅಮೂಲ್ಯ ಅವರ ಈ ಹೊಸ ಇನಿಂಗ್ಸ್ ಕಿರುತೆರೆಯಲ್ಲಿ ಮತ್ತೊಂದು ದಾಖಲೆ ಬರೆಯುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/kannada-kamali-serial-fame-actress-amulya-comeback-mahalakshmi-maduve-new-serial-on-udaya-tv-448943.html. xn--babytilbehr-pgb.com does not claim ownership of this content. All rights remain with the original publisher.
