
International
oi-Shiddalingesh S
54 ವರ್ಷಗಳ ನಂತರ ಮನುಷ್ಯನು ಮತ್ತೆ ಚಂದ್ರನತ್ತ ಪ್ರಯಾಣ ಪ್ರಾರಂಭಿಸಿರುವುದು ಮಾನವನ ಇತಿಹಾಸದಲ್ಲೆ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಅಂತರಾಷ್ಟ್ರೀಯ ಮಟ್ಟದ ಸಹಕಾರದಿಂದ ರೂಪುಗೊಂಡಿರುವ ಆರ್ಟೆಮಿಸ್-2 ಮಿಷನ್, ಇದು ಕೇವಲ ಒಂದು ಬಾಹ್ಯಾಕಾಶ ಯಾನವಲ್ಲಾ, ಇದು ಭವಿಷ್ಯದ ಚಂದ್ರನ ಮತ್ತು ಮಂಗಳ ಗ್ರಹದ ಕಡೆ ದಾರಿ ಮಾಡಿಕೊಡುವ ಕನಸಿನ ಒಂದು ಮಹತ್ವದ ಹೆಜ್ಜೆಯಾಗಿರುತ್ತದೆ. ಈ ಐತಿಹಾಸಿಕ ಪ್ರಯಾಣ ಹಿಂದೆ ಇರುವ ವೈಜ್ಞಾನಿಕ ಉದ್ದೇಶಗಳು, ಗಗನಯಾತ್ರಿಗಳ ಕಥೆಗಳು ಮತ್ತು ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಸ್ಪರ್ಧೆಯ ಒಂದು ನೋಟ ಇಲ್ಲಿದೆ.
54 ವರ್ಷಗಳ ನಂತರ ಮನುಷ್ಯ ಮತ್ತೆ ಚಂದ್ರನ ಕಡೆ
ಏಪ್ರಿಲ್ 1, 2026. ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಸಂಜೆ 6:35. ಅಂದರೆ, ಭಾರತೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಮನುಷ್ಯ ಮತ್ತೆ ಚಂದ್ರನತ್ತ ಹೊರಟಿದ್ದಾನೆ. ‘ಆರ್ಟೆಮಿಸ್-2’ ಮಿಷನ್ ನಾಲ್ಕು ಗಗನಯಾತ್ರಿಗಳನ್ನು ಹೊತ್ತು ಚಂದ್ರನ ಕಡೆಗೆ ಸಾಗಿದೆ.

ಇದು ಒಟ್ಟು ಹತ್ತು ದಿನಗಳ ಪ್ರಯಾಣ; ಚಂದ್ರನನ್ನು ಸುತ್ತಿ ಬರುವ ಯಾನವಿದು. ಚಂದ್ರನ ಮೇಲೆ ಇಳಿಯುವ ಕಾರ್ಯಕ್ರಮ ಇದಲ್ಲದಿದ್ದರೂ, ಇನ್ನು ಎರಡು ವರ್ಷಗಳಲ್ಲಿ ಕೈಗೊಳ್ಳಲಿರುವ ‘ಚಂದ್ರಸ್ಪರ್ಶ’ದ ಯೋಜನೆಗೆ ಇದೊಂದು ಮಹತ್ವದ ‘ಟೆಸ್ಟ್ ಫ್ಲೈಟ್’. ಈ ಯಾತ್ರೆಯಲ್ಲಿ ಗಗನಯಾತ್ರಿಗಳು ಭೂಮಿಯಿಂದ ಸುಮಾರು ನಾಲ್ಕು ಲಕ್ಷ ಕಿಲೋಮೀಟರ್ ದೂರ ಹೋಗಿ ಬರುತ್ತಾರೆ. ಹಿಂದೆ 1972ರಲ್ಲಿ ಅಪೋಲೊ-13 ನೌಕೆಯು ಎರಡು ಲಕ್ಷ ಕಿಲೋಮೀಟರ್ ದೂರ ಹೋಗಿತ್ತು, ಈಗ ಆರ್ಟೆಮಿಸ್ ಆ ದಾಖಲೆಯನ್ನು ಮುರಿಯಲಿದೆ. ಮನುಷ್ಯ ಅಂತರಿಕ್ಷದಲ್ಲಿ ಇದುವರೆಗೆ ತಲುಪಿದ ಅತ್ಯಂತ ದೂರದ ಬಿಂದು ಇದಾಗಲಿದೆ.
ಚಂದ್ರನ ಆಚೆ 7,600 ಕಿಲೋಮೀಟರ್ ದೂರ ಹೋಗಿ, ಚಂದ್ರನ ಗುರುತ್ವಾಕರ್ಷಣೆಯನ್ನೇ ಬಳಸಿಕೊಂಡು ಇದು ಭೂಮಿಯ ಕಡೆಗೆ ಹಿಂದಿರುಗುತ್ತದೆ. ವಿಜ್ಞಾನದ ಭಾಷೆಯಲ್ಲಿ ಇದನ್ನು “ಫ್ರೀ-ರಿಟರ್ನ್ ಟ್ರಜೆಕ್ಟರಿ” ಎನ್ನುತ್ತಾರೆ. ವಿಶೇಷವೆಂದರೆ, 1970ರಲ್ಲಿ ಅಪೋಲೊ-13 ಅಪಘಾತದ ಸಂದರ್ಭದಲ್ಲಿ ಬಳಸಿದ ಅದೇ ಮಾರ್ಗವನ್ನೇ ಇಲ್ಲಿಯೂ ಅನುಸರಿಸಲಾಗುತ್ತಿದೆ. ಏಪ್ರಿಲ್ 10ರಂದು ನೌಕೆಯು ಪೆಸಿಫಿಕ್ ಸಾಗರದಲ್ಲಿ ‘ಸ್ಪ್ಲಾಶ್ಡೌನ್’ ಆಗಲಿದೆ.

ಈ ಮಿಷನ್ನಲ್ಲಿ ಪಾಲ್ಗೊಳ್ಳುತ್ತಿರುವ ಯಾನಿಗಳು:
* ರೀಡ್ ವೈಸ್ಮ್ಯಾನ್ (ಕಮಾಂಡರ್): 50 ವರ್ಷದ ಇವರು, 2020ರಲ್ಲಿ ಪತ್ನಿ ಟೇಲರ್ ನಿಧನರಾದ ನಂತರ ಇಂದು ಇಬ್ಬರು ಹೆಣ್ಣುಮಕ್ಕಳ ‘ಸಿಂಗಲ್ ಪೇರೆಂಟ್’. ಬಾಹ್ಯಾಕಾಶ ಯಾನದ ಉಡಾವಣೆಗೆ ಮುಂಚೆ, ಕಮಾಂಡರ್ ಸೋಲುವವರೆಗೆ ಸಿಬ್ಬಂದಿ ಇಸ್ಪೀಟ್ ಆಡುವ ಒಂದು ಸಂಪ್ರದಾಯವಿದೆಯಂತೆ; ಹೀಗೆ ಮಾಡುವುದರಿಂದ ಕೆಟ್ಟ ಅದೃಷ್ಟ ಕಳೆದುಹೋಗುತ್ತದೆ ಎಂಬುದು ಅವರ ನಂಬಿಕೆ.
*ವಿಕ್ಟರ್ ಗ್ಲೋವರ್ (ಪೈಲಟ್): ಚಂದ್ರನ ಬಳಿ ಹೋಗುತ್ತಿರುವ ಮೊದಲ ಕಪ್ಪು ವರ್ಣದ ವ್ಯಕ್ತಿ. 40ಕ್ಕೂ ಹೆಚ್ಚು ವಿಧದ ವಿಮಾನಗಳಲ್ಲಿ 3,500 ಗಂಟೆಗಳ ಹಾರಾಟದ ಅನುಭವ ಇವರಿಗಿದೆ. ಅಲ್ಲದೆ 24 ಯುದ್ಧ ಕಾರ್ಯಾಚರಣೆಗಳಲ್ಲಿ ಇವರು ಭಾಗವಹಿಸಿದ್ದಾರೆ.
*ಕ್ರಿಸ್ಟೀನಾ ಕೋಚ್: ಡೀಪ್ ಸ್ಪೇಸ್ಗೆ ಹೋಗುತ್ತಿರುವ ಮೊದಲ ಮಹಿಳೆ. ಈಗಾಗಲೇ ಸತತ 328 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಮೊದಲ ಮಹಿಳೆ ಎಂಬ ದಾಖಲೆ ಇವರ ಹೆಸರಲ್ಲಿದೆ.
*ಜೆರೆಮಿ ಹ್ಯಾನ್ಸೆನ್: ಕೆನಡಾದ ಈ ಗಗನಯಾತ್ರಿಗೆ 50 ವರ್ಷ. ಅಂಟಾರಿಯೋದ ಫಾರ್ಮ್ನಲ್ಲಿ ಬೆಳೆದ ಇವರು CF-18 ಫೈಟರ್ ಪೈಲಟ್. ವಿಶೇಷವೆಂದರೆ, ಇದು ಇವರ ಮೊದಲ ಬಾಹ್ಯಾಕಾಶ ಯಾನ! ಮೊದಲ ಅವಕಾಶದಲ್ಲೇ ನೇರವಾಗಿ ಚಂದ್ರನ ಕಡೆಗೆ ಪ್ರಯಾಣಿಸುವ ಭಾಗ್ಯ ಇವರದ್ದು. ಅಮೆರಿಕದವರಲ್ಲದ ವ್ಯಕ್ತಿಯೊಬ್ಬ ಚಂದ್ರನ ಬಳಿ ಹೋಗುತ್ತಿರುವುದು ಇದೇ ಮೊದಲು. ಇವರು ತಮ್ಮ ಜೊತೆಗೆ ಕುಟುಂಬದವರ ಜನ್ಮದಿನಾಂಕಗಳನ್ನು ಕೆತ್ತಿರುವ ಪೆಂಡೆಂಟ್ ಒಂದನ್ನು ಒಯ್ಯುತ್ತಿದ್ದಾರೆ.
ಆರ್ಟೆಮಿಸ್-2 ಅಮೆರಿಕ, ಕೆನಡಾ ಮತ್ತು ಯುರೋಪ್ ರಾಷ್ಟ್ರಗಳ ಸಹಯೋಗದ ಯೋಜನೆಯಾಗಿದೆ. ಓರಿಯನ್ ಬಾಹ್ಯಾಕಾಶ ನೌಕೆಯ ಸರ್ವಿಸ್ ಮಾಡ್ಯೂಲ್ ಅನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ನಿರ್ಮಿಸಿದೆ. ಖಾಸಗಿ ಕಂಪನಿಗಳಾದ SpaceX ಮತ್ತು Blue Origin ಮುಂದಿನ ಮಿಷನ್ಗಳಿಗೆ ಬೇಕಾದ ಲ್ಯಾಂಡರ್ಗಳನ್ನು ಸಿದ್ಧಪಡಿಸುತ್ತಿವೆ. ಈ ಯೋಜನೆಗೆ ಇಲ್ಲಿಯವರೆಗೆ ಸುಮಾರು 7.8 ಲಕ್ಷ ಕೋಟಿ ರೂಪಾಯಿ ಖರ್ಚಾಗಿದ್ದು, ಪ್ರತಿ ಬಾರಿ ರಾಕೆಟ್ ಹಾರಿಸಲು ಸುಮಾರು 33,600 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ.
ಟ್ರಂಪ್ ಆಡಳಿತವು ಆರ್ಟೆಮಿಸ್-3 ರ ನಂತರ SLS ಮತ್ತು ಓರಿಯನ್ ಯೋಜನೆಯನ್ನು ರದ್ದು ಮಾಡುವ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಕಾಂಗ್ರೆಸ್ ಮಧ್ಯಪ್ರವೇಶಿಸಿ ಆರ್ಟೆಮಿಸ್-5 ವರೆಗೆ ಹಣ ಒದಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಸರ್ಕಾರಿ ಸಂಸ್ಥೆ ಮತ್ತು ಖಾಸಗಿ ನಾವೀನ್ಯತೆಗಳ ನಡುವಿನ ಸಂಘರ್ಷ. ಈ SLS ರಾಕೆಟ್ ಅನ್ನು ಹಳೆಯ ಸ್ಪೇಸ್ ಶಟಲ್ ತಂತ್ರಜ್ಞಾನದಿಂದಲೇ ನಿರ್ಮಿಸಲಾಗಿದೆ (ಈಗ ಹಾರಿಸಿರುವ ರಾಕೆಟ್ಟೂ ಅಂತಹದ್ದೇ). ಇವುಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ, ಪ್ರತಿ ಬಾರಿ ಹೊಸ ರಾಕೆಟ್ ಅನ್ನೇ ಕಟ್ಟಬೇಕು. ಆದರೆ ಇದೇ ಸಮಯದಲ್ಲಿ SpaceX ಕಂಪನಿಯು ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದೆ.
ಆರ್ಟೆಮಿಸ್ ಕಾರ್ಯಕ್ರಮದ ಮುಂದಿನ ಹಂತಗಳು:
*ಆರ್ಟೆಮಿಸ್-3 (2027): ಭೂಮಿಯ ಕಕ್ಷೆಯಲ್ಲಿ SpaceX ಅಥವಾ Blue Origin ಲ್ಯಾಂಡರ್ಗಳ ಪರೀಕ್ಷೆ ನಡೆಯಲಿದೆ. ಇದು ಚಂದ್ರನ ಮೇಲೆ ಇಳಿಯುವುದಿಲ್ಲ.
*ಆರ್ಟೆಮಿಸ್-4 (2028): 1972ರ ನಂತರ ಮೊದಲ ಬಾರಿಗೆ ಮಾನವ ಚಂದ್ರನ ಮೇಲೆ ಕಾಲಿಡಲಿದ್ದಾನೆ.
*ಆರ್ಟೆಮಿಸ್-5 (2028ರ ಅಂತ್ಯ): ಚಂದ್ರನ ಮೇಲೆ ಶಾಶ್ವತ ನೆಲೆ ನಿರ್ಮಾಣದ ಆರಂಭ. ಇದಾದ ನಂತರ ಪ್ರತಿ ವರ್ಷ ಒಂದೊಂದು ಮಿಷನ್ ನಡೆಯಲಿದ್ದು, ಅಂತಿಮ ಗುರಿ ಮಂಗಳ ಗ್ರಹವನ್ನು ತಲುಪುವುದಾಗಿದೆ.
ಒಂದು ಕುತೂಹಲಕಾರಿ ವಿಷಯವೆಂದರೆ, 1969ರಲ್ಲಿ ಅಪೋಲೊ-11 ಚಂದ್ರನ ಮೇಲೆ ಇಳಿದಾಗ ಇಸ್ರೋ (ISRO) ಅಸ್ತಿತ್ವದಲ್ಲೇ ಇರಲಿಲ್ಲ; ಅದು ಸ್ಥಾಪನೆಯಾಗಿದ್ದು ಅದರ ಒಂದು ತಿಂಗಳ ನಂತರ. ಆದರೆ 2023ರಲ್ಲಿ ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರವಾಗಿ ಇತಿಹಾಸ ನಿರ್ಮಿಸಿತು. ಈಗ ಭಾರತವೂ ಆರ್ಟೆಮಿಸ್ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು NASA-ISRO ಜಂಟಿಯಾಗಿ NISAR ಉಪಗ್ರಹ ಯೋಜನೆಯನ್ನು ಕೈಗೊಂಡಿವೆ. ಭಾರತವು 2040ರ ಹೊತ್ತಿಗೆ ಚಂದ್ರನ ಮೇಲೆ ಮಾನವನನ್ನು ಇಳಿಸುವ ಗುರಿ ಹೊಂದಿದ್ದರೆ, ಚೀನಾ 2030ಕ್ಕೆ ಗುರಿ ಇಟ್ಟುಕೊಂಡಿದೆ. ಈ ಎಲ್ಲ ಬೆಳವಣಿಗೆಗಳಿಂದ ನಾವು ಕಲಿಯಬಹುದಾದ ಪಾಠವೆಂದರೆ-ಅಪಾರ ವೆಚ್ಚ, ಖಾಸಗಿ ಸಹಭಾಗಿತ್ವ ಮತ್ತು ಅಂತರಾಷ್ಟ್ರೀಯ ಸಹಕಾರ ಈ ಮೂರೂ ಅನಿವಾರ್ಯ ಎಂಬುದು.
ಕೊನೆಯದಾಗಿ, ಈ ಮಿಷನ್ನ ‘ಝೀರೋ ಗ್ರಾವಿಟಿ ಇಂಡಿಕೇಟರ್’ (ಗುರುತ್ವಾಕರ್ಷಣೆ ಇಲ್ಲದಿದ್ದಾಗ ತೇಲುವ ಬೊಂಬೆ) ವಿನ್ಯಾಸಕ್ಕಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. 50ಕ್ಕೂ ಹೆಚ್ಚು ದೇಶಗಳಿಂದ 2,600 ಎಂಟ್ರಿಗಳು ಬಂದಿದ್ದವು. ಅದರಲ್ಲಿ ಕ್ಯಾಲಿಫೋರ್ನಿಯಾದ ಎಂಟು ವರ್ಷದ ಬಾಲಕ ಲೂಕಾಸ್ ಯೆ ಗೆಲುವು ಸಾಧಿಸಿದ್ದಾನೆ. ಅವನು ವಿನ್ಯಾಸಗೊಳಿಸಿದ ಬೊಂಬೆಯ ಹೆಸರು “ರೈಸ್” (Rise). ಚಂದ್ರನು ಭೂಮಿಯನ್ನು ಬೇಸ್ಬಾಲ್ ಕ್ಯಾಪ್ನಂತೆ ಧರಿಸಿರುವ ಚಿತ್ರವದು. ಇದು ಅಪೋಲೊ-8ರ ಐಕಾನಿಕ್ “ಅರ್ತ್ರೈಸ್” ಫೋಟೋದಿಂದ ಪ್ರೇರಿತವಾದುದು. NASA ಈ ವಿನ್ಯಾಸದ ಬೊಂಬೆಯನ್ನು ಥರ್ಮಲ್ ಬ್ಲಾಂಕೆಟ್ ಲ್ಯಾಬ್ನಲ್ಲಿ ನಿರ್ಮಿಸಿ ಓರಿಯನ್ ಕ್ಯಾಬಿನ್ ಒಳಗೆ ಇರಿಸಿದೆ. ಎಂಟು ವರ್ಷದ ಹುಡುಗನ ಕಲ್ಪನೆಯೊಂದು ಇಂದು ಚಂದ್ರನ ಕಡೆಗೆ ಹಾರುತ್ತಿದೆ.(ಬರಹ: ಮಧು ವೈ.ಎನ್.)
Disclaimer: This content was automatically imported from a third-party source via RSS feed. The original source is: https://kannada.oneindia.com/news/international/artemis-2-mission-humans-return-to-the-moon-after-54-years-full-details-and-crew-explained-449119.html. xn--babytilbehr-pgb.com does not claim ownership of this content. All rights remain with the original publisher.
