ಖಾಸಗಿ ಬಸ್‌ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ | NWKRTC Hubballi to Mumbai Bus Controversy: Passengers Question Private Lobby Influence on Routes

Karnataka

oi-Pragathi S

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಮುಂಬೈಗೆ ಏಕೆ ಬಸ್ ಸೇವೆಗಳನ್ನು ಒದಗಿಸುತ್ತಿಲ್ಲ ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಲಾಭದಾಯಕ ಮಾರ್ಗದಲ್ಲಿ ಖಾಸಗಿ ಬಸ್ ನಿರ್ವಾಹಕರು ಪ್ರೀಮಿಯಂ ಸೇವೆಗಳು ಸೇರಿದಂತೆ ಪ್ರತಿದಿನ ಬರೋಬ್ಬರಿ 94 ಬಸ್‌ಗಳನ್ನು ಓಡಿಸುತ್ತಿದ್ದಾರೆ. ಆದರೆ, ರಾಜ್ಯ ಸಾರಿಗೆ ಸಂಸ್ಥೆಯು ಒಂದೇ ಒಂದು ಬಸ್ಸನ್ನು ಸಹ ಓಡಿಸುತ್ತಿಲ್ಲ ಎಂಬುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಮಸ್ಯೆಯು ಹೊಸದೇನಲ್ಲ. ಆಗಸ್ಟ್ 2024 ರಲ್ಲಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾದ ನಂತರ ಎಚ್ಚೆತ್ತುಕೊಂಡಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮುಂಬೈ ಮಾರ್ಗದ ಬಸ್ ಸೇವೆಗಳನ್ನು ಸ್ವಲ್ಪ ಸಮಯದವರೆಗೆ ಪುನರಾರಂಭಿಸಿತ್ತು. ಆದರೆ, ಕೇವಲ ಕೆಲವೇ ತಿಂಗಳುಗಳಲ್ಲಿ ಈ ಬಸ್‌ಗಳ ಸಂಚಾರವನ್ನು ದಿಢೀರನೆ ರದ್ದುಗೊಳಿಸಲಾಯಿತು. ಪ್ರಮುಖ ಮಾರ್ಗಗಳಲ್ಲಿ ಐಷಾರಾಮಿ ಬಸ್‌ಗಳ ಕೊರತೆಯ ಬಗ್ಗೆ ಈಗ ಆನ್‌ಲೈನ್‌ನಲ್ಲಿ ಸಾರ್ವಜನಿಕರು ಸಾರಿಗೆ ಸಂಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

NWKRTC

ನೆಟ್ಟಿಗರ ಆಕ್ರೋಶ

ಈ ಚರ್ಚೆ ಮಂಗಳವಾರ ‘ಎಕ್ಸ್’ ಖಾತೆಯಾದ ‘ಹುಬ್ಬಳ್ಳಿ ಧಾರವಾಡ ಇನ್ಫ್ರಾ’ (Hubballi Dharwad Infra) ಮಾಡಿದ ಪೋಸ್ಟ್‌ನೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ. ಸಾರಿಗೆ ಸಂಸ್ಥೆಯು “ಖಾಸಗಿ ಬಸ್ ಲಾಬಿಗೆ ಮಣಿದಿದೆಯೇ?” ಎಂದು ಖಾತೆಯ ನಿರ್ವಾಹಕರು ನೇರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಧಾರವಾಡದ ನಿವಾಸಿ ವರುಣ್ ರಾವ್ ಎಂಬುವವರು, ಖಾಸಗಿ ನಿರ್ವಾಹಕರು ಈ ಮಾರ್ಗದಲ್ಲಿ ವೋಲ್ವೋ 9600 ಹಾಗೂ ಭಾರತ್‌ಬೆಂಜ್ ಎಸಿ ಮತ್ತು ನಾನ್-ಎಸಿ ಸ್ಲೀಪರ್ ಬಸ್‌ಗಳನ್ನು ಓಡಿಸುತ್ತಿದ್ದಾರೆ ಎಂಬುದನ್ನು ಬೆಟ್ಟು ಮಾಡಿದ್ದಾರೆ. ಹಳೆಯ ಕರೋನಾ ಬಸ್‌ಗಳ ಬದಲಿಗೆ ಹುಬ್ಬಳ್ಳಿ ಡಿಪೋಗೆ ಹೊಸ ‘ಉತ್ಸವ್’ ಬಸ್‌ಗಳನ್ನು ಖರೀದಿಸಿ ಲಾಂಗ್ ರೂಟ್‌ಗಳಲ್ಲಿ ಓಡಿಸಲು ಏಕೆ ಸಾಧ್ಯವಾಗಿಲ್ಲ? ರಾಜಹಂಸ ಅಥವಾ ರಾಜರಥ ಬಸ್‌ಗಳನ್ನು ಏಕೆ ಪರಿಚಯಿಸಲಿಲ್ಲ? ಮೊದಲು ಇದ್ದ ಏಕೈಕ ಸ್ಲೀಪರ್ ಸೇವೆಯನ್ನೂ ನಿಲ್ಲಿಸಲಾಗಿದೆ. ಇದು ಸಾರಿಗೆ ಸಂಸ್ಥೆಯ ಅಸಮರ್ಥತೆಯೋ ಅಥವಾ ಖಾಸಗಿ ಬಸ್ ಲಾಬಿಯ ಪ್ರಭಾವವೋ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಮತ್ತೊಬ್ಬ ಬಳಕೆದಾರರಾದ ಲವಿಂಗ್‌ಡ್ಯಾಡ್_7 (lovingdad_7) ಅವರು ಸಾರಿಗೆ ಸಂಸ್ಥೆಯ ಹಿಂದಿನ ವೈಭವವನ್ನು ನೆನಪಿಸಿಕೊಂಡಿದ್ದಾರೆ. 2012 ರಿಂದ 2016 ರ ನಡುವೆ ದಾವಣಗೆರೆಯಿಂದ ಪುಣೆ ಅಥವಾ ಮುಂಬೈಗೆ ಕನಿಷ್ಠ ಆರು ಐರಾವತ (Airavatha) ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇಂದು ಬೆಂಗಳೂರಿನಿಂದ ಪುಣೆಗೆ ಕೇವಲ ಒಂದು ಐರಾವತ ಬಸ್ ಮಾತ್ರ ಸಂಚರಿಸುತ್ತಿದೆ. ಇದು ಸಾರಿಗೆ ನಿಗಮದ ಗಂಭೀರ ಕುಸಿತವನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಪ್ರಶಾಂತ್ ಶೇಟ್ ಮತ್ತು ಪ್ರಣವ್ ಬಡಚಿಕರ್ ಸೇರಿದಂತೆ ಹಲವು ಬಳಕೆದಾರರು, ಬೆಂಗಳೂರು, ಮಂಗಳೂರು, ಕೊಲ್ಲಾಪುರ ಮತ್ತು ಇತರ ನಗರಗಳಿಗೂ NWKRTC ಸಾಕಷ್ಟು ಐಷಾರಾಮಿ ಬಸ್‌ಗಳನ್ನು ಒದಗಿಸುತ್ತಿಲ್ಲ ಎಂದು ದೂರಿಕೊಂಡಿದ್ದಾರೆ. ಮಹಾರಾಷ್ಟ್ರದ ಸಾರಿಗೆ ಸಂಸ್ಥೆ (MSRTC) ಮುಂಬೈ ಮತ್ತು ಪುಣೆಯಿಂದ ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ನಗರಗಳಿಗೆ ಹೆಚ್ಚಿನ ಸೇವೆಗಳನ್ನು ಪರಿಚಯಿಸುತ್ತಿದೆ. ಆದರೆ, ನಮ್ಮ ಸಂಸ್ಥೆ ಮಾತ್ರ ಹಿಂದೆ ಬಿದ್ದಿದೆ ಎಂದು ದಕ್ಷಿಣಾಪಥೇಶ್ವರ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಈ ಭಾರಿ ಟೀಕೆ ಮತ್ತು ಪ್ರಶ್ನೆಗಳಿಗೆ ಇದೀಗ NWKRTC ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಂಗಾ ಎಂ. ಅವರು ಪ್ರತಿಕ್ರಿಯಿಸಿದ್ದಾರೆ. ಈ ಸಮಸ್ಯೆಯ ಕುರಿತು ಅಧಿಕಾರಿಗಳ ಮಟ್ಟದಲ್ಲಿ ವಿವರವಾಗಿ ಚರ್ಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ನಮ್ಮಲ್ಲಿರುವ ಬಸ್‌ಗಳು ಮತ್ತು ಸಿಬ್ಬಂದಿಯ ಕೊರತೆಯಿಂದಾಗಿ, ನಾವು ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಸೇವೆ ಒದಗಿಸಲು ಸಾಧ್ಯವಾಗಲಿಲ್ಲ. ಇದು ನಮ್ಮ ಅನಿವಾರ್ಯತೆಯಾಗಿತ್ತು.

ಆದಾಗ್ಯೂ, ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಈ ಪೀಕ್ ಸೀಸನ್‌ನಲ್ಲಿ ಹುಬ್ಬಳ್ಳಿ-ಮುಂಬೈ ಸೇವೆಗಳನ್ನು ನಾವು ಮತ್ತೆ ಪುನರಾರಂಭಿಸುತ್ತಿದ್ದೇವೆ” ಎಂದು ಅವರು ಭರವಸೆ ನೀಡಿದ್ದಾರೆ. ಈ ಭರವಸೆಯು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/nwkrtc-hubballi-to-mumbai-bus-controversy-passengers-question-private-lobby-influence-on-routes-449241.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo