ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಲಕ್ಷದ್ವೀಪದ ಮೀನುಗಾರ ಯುವಕ ಅಬ್ದುಲ್ ಫತ್ತಾ | Fisherman Abdul Fattah Claims Historic Long Jump Gold For Lakshadweep At Khelo India Tribal Games

India

oi-Pragathi S

ಜಗದಾಲ್ಪುರ (ಛತ್ತೀಸ್‌ಗಢ): ರಾತ್ರಿಯಿಡೀ ಸಮುದ್ರದಲ್ಲಿ ಮೀನುಗಾರಿಕೆ ಮಾಡಿ ಕುಟುಂಬಕ್ಕೆ ಆಧಾರವಾಗಿರುವ ಯುವಕನೊಬ್ಬ, ಹಗಲಿನಲ್ಲಿ ಕ್ರೀಡಾ ಮೈದಾನದಲ್ಲಿ ಬೆವರು ಸುರಿಸಿ ಇದೀಗ ಇಡೀ ದೇಶವೇ ತಿರುಗಿ ನೋಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾನೆ. ಛತ್ತೀಸ್‌ಗಢದ ಜಗದಾಲ್ಪುರದಲ್ಲಿ ನಡೆಯುತ್ತಿರುವ ‘ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ’ದಲ್ಲಿ (KITG – 2026) ಲಕ್ಷದ್ವೀಪದ 18 ವರ್ಷದ ಯುವಕ ಅಬ್ದುಲ್ ಫತ್ತಾ ಉದ್ದ ಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ತಮ್ಮ ಪುಟ್ಟ ದ್ವೀಪಕ್ಕೆ ಚೊಚ್ಚಲ ಪದಕ ತಂದುಕೊಟ್ಟಿದ್ದಾರೆ.

ಲಕ್ಷದ್ವೀಪದ ರಾಜಧಾನಿ ಕವರಟ್ಟಿ ಮತ್ತು ಕದ್ಮತ್‌ ದ್ವೀಪಗಳ ನಡುವೆ ಇರುವ, ಕೇವಲ 2.60 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಅತ್ಯಂತ ಕುಗ್ರಾಮ ‘ಅಮೀನಿ’ ದ್ವೀಪದ ನಿವಾಸಿಯಾಗಿರುವ ಫತ್ತಾ, 7.03 ಮೀಟರ್ ದೂರ ಜಿಗಿಯುವ ಮೂಲಕ ತಮ್ಮ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. “ಅಬ್ದುಲ್ ಫತ್ತಾ 7 ಮೀಟರ್ ಗಡಿ ದಾಟಿದ ಲಕ್ಷದ್ವೀಪದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ, ಇದು ನಿಜಕ್ಕೂ ನಮಗೆಲ್ಲಾ ಅತ್ಯಂತ ವಿಶೇಷವಾದ ಕ್ಷಣ” ಎಂದು ಯೂನಿಯನ್ ಟೆರಿಟರಿಯ ಕ್ರೀಡಾ ಅಧಿಕಾರಿ ಅಹ್ಮದ್ ಜಾವೇದ್ ಹಸನ್ ಹರ್ಷ ವ್ಯಕ್ತಪಡಿಸಿದ್ದಾರೆ.

Abdul Fattah

ಬಡತನದ ಬೇಗೆಯಲ್ಲೂ ಕಮರದ ಕ್ರೀಡಾಸ್ಫೂರ್ತಿ

ಮೀನುಗಾರ ಕುಟುಂಬದಲ್ಲಿ ಜನಿಸಿದ ಫತ್ತಾ, ನಾಲ್ವರು ಒಡಹುಟ್ಟಿದವರಲ್ಲಿ ಹಿರಿಯವರು. ಕುಟುಂಬದ ಆರ್ಥಿಕ ಸಂಕಷ್ಟಗಳಿಂದಾಗಿ 12ನೇ ತರಗತಿಯ ನಂತರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು. ಶಾಲಾ ದಿನಗಳಿಂದಲೂ ತಂದೆಯೊಂದಿಗೆ ಮೀನುಗಾರಿಕೆಗೆ ತೆರಳುತ್ತಿದ್ದ ಅವರು, ಬೆಳಗಾಗುತ್ತಿದ್ದಂತೆ ಮೈದಾನಕ್ಕೆ ಓಡುತ್ತಿದ್ದರು. “ನಮಗೆ ಮೀನುಗಾರಿಕೆಯೇ ಆದಾಯದ ಏಕೈಕ ಮೂಲ. ಹಾಗಾಗಿ ಜವಾಬ್ದಾರಿಗಳನ್ನು ನಿಭಾಯಿಸಲೇಬೇಕು. ನಾನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ನನ್ನ ಕುಟುಂಬಕ್ಕೆ ತಿಳಿದಿದೆ, ಆದರೆ ಅವರಿಗೆ ಆಟದ ಬಗ್ಗೆ ಹೆಚ್ಚಿನ ಅರಿವಿಲ್ಲ” ಎಂದು ಫತ್ತಾ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.

ಆಸಕ್ತಿದಾಯಕ ವಿಚಾರವೆಂದರೆ, ಫತ್ತಾ ಆರಂಭದಲ್ಲಿ ಫುಟ್ಬಾಲ್ ಆಟಗಾರರಾಗಿದ್ದರು. ಸ್ಥಳೀಯ ಕ್ರೀಡಾಕೂಟವೊಂದರಲ್ಲಿ ಇವರ ಓಟದ ವೇಗವನ್ನು ಗಮನಿಸಿದ ಕೋಚ್ ಮೊಹಮ್ಮದ್ ಕಾಸೀಮ್, ಅಥ್ಲೆಟಿಕ್ಸ್ ಕಡೆ ಗಮನ ಹರಿಸಲು ಸಲಹೆ ನೀಡಿದರು. ಇದೇ ಸಮಯದಲ್ಲಿ ‘ಅಮೀನಿ ಅಥ್ಲೆಟಿಕ್ಸ್ ಅಸೋಸಿಯೇಷನ್’ ಅಸ್ತಿತ್ವಕ್ಕೆ ಬಂದಿದ್ದು ಕ್ರೀಡಾಪಟುಗಳಿಗೆ ವರದಾನವಾಯಿತು. ಲಕ್ಷದ್ವೀಪದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಥವಾ ಯಾವುದೇ ಸುಸಜ್ಜಿತ ಕ್ರೀಡಾಂಗಣದ ವ್ಯವಸ್ಥೆ ಇಲ್ಲ. ಹೀಗಾಗಿ ಫತ್ತಾ ಅವರು ಲಾಂಗ್ ಜಂಪ್ ತರಬೇತಿಗಾಗಿ ಮಣ್ಣಿನ ಗುಂಡಿಗಳನ್ನು (Mud Pits) ಮತ್ತು ಓಟದ ಅಭ್ಯಾಸಕ್ಕಾಗಿ ಫುಟ್ಬಾಲ್ ಮೈದಾನವನ್ನೇ ಅವಲಂಬಿಸಿದ್ದರು.

ಭಾರತದ ಕ್ರೀಡಾ ಭೂಪಟದಲ್ಲಿ ಲಕ್ಷದ್ವೀಪ

ಈ ಹಿಂದೆ ಲಕ್ಷದ್ವೀಪದ 19 ವರ್ಷದ ಮುಬಸ್ಸಿನಾ ಮೊಹಮ್ಮದ್ ಎಂಬ ಯುವತಿ, ಕುವೈತ್‌ನಲ್ಲಿ ನಡೆದ 2022ರ ಏಷ್ಯನ್ U18 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ದ್ವೀಪದ ಮೊದಲ ಅಂತರರಾಷ್ಟ್ರೀಯ ಪದಕ ವಿಜೇತೆ ಎನಿಸಿಕೊಂಡಿದ್ದರು. ಇದೀಗ ಅಬ್ದುಲ್ ಫತ್ತಾ ಅವರ ಸಾಧನೆಯಿಂದ ಲಕ್ಷದ್ವೀಪ ನಿಧಾನವಾಗಿ ಭಾರತದ ಕ್ರೀಡಾ ಭೂಪಟದಲ್ಲಿ ಮುನ್ನೆಲೆಗೆ ಬರುತ್ತಿದೆ. “ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಬರುವ ಮುನ್ನ 7.15 ಮೀಟರ್ ಗುರಿ ಹೊಂದಿದ್ದೆ. ಈಗ 7 ಮೀಟರ್ ಗಡಿ ದಾಟಿರುವುದು ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ. ನಮ್ಮ ಈ ಸಾಧನೆಗಳಿಂದ ಮುಂದಿನ ದಿನಗಳಲ್ಲಿ ದ್ವೀಪದಲ್ಲಿ ಕ್ರೀಡಾ ಮೂಲಸೌಕರ್ಯಗಳು ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂಬ ವಿಶ್ವಾಸವಿದೆ” ಎಂದು ಫತ್ತಾ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ ಸರ್ಕಾರದ ಪ್ರತಿಷ್ಠಿತ ಖೇಲೋ ಇಂಡಿಯಾ ಯೋಜನೆಯಡಿ ಆಯೋಜಿಸಲಾಗಿರುವ ಈ ಚೊಚ್ಚಲ ‘ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ’ವು ಬುಡಕಟ್ಟು ಸಮುದಾಯದ ಪ್ರತಿಭೆಗಳನ್ನು ಗುರುತಿಸುವ ಮಹತ್ವದ ವೇದಿಕೆಯಾಗಿದೆ. ಮಾರ್ಚ್ 25 ರಿಂದ ಏಪ್ರಿಲ್ 3 ರವರೆಗೆ ನಡೆಯುವ ಈ ಕ್ರೀಡಾಕೂಟದಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಫುಟ್ಬಾಲ್ ಸೇರಿದಂತೆ ಒಟ್ಟು 9 ಕ್ರೀಡೆಗಳನ್ನು ರಾಯ್‌ಪುರ, ಜಗದಾಲ್ಪುರ ಮತ್ತು ಅಂಬಿಕಾಪುರದಲ್ಲಿ ಆಯೋಜಿಸಲಾಗಿದೆ. ಫತ್ತಾ ಅವರ ಈ ಚಿನ್ನದ ಪದಕ ಕೇವಲ ಅವರೊಬ್ಬರ ಸಾಧನೆಯಲ್ಲ, ಬದಲಾಗಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಸಾಧಿಸಿ ತೋರಿಸಬಲ್ಲ ಲಕ್ಷದ್ವೀಪದ ಯುವಜನತೆಯ ಅಚಲ ಆತ್ಮವಿಶ್ವಾಸದ ಸಂಕೇತವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/fisherman-abdul-fattah-claims-historic-long-jump-gold-for-lakshadweep-at-khelo-india-tribal-games-449309.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo