ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ದಕ್ಷಿಣ ಭಾರತದ ಧ್ವನಿ ಅಡಗಿಸುವ ಪಿತೂರಿ: ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ | Siddaramaiah Slams Narendra Modi Over Lok Sabha Delimitation Calls It Plot Against South India

Karnataka

oi-Manohara M

ಪ್ರಸ್ತಾವಿತ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಭರವಸೆಯ ಹೇಳಿಕೆಗಳು ಕೇವಲ ಚುನಾವಣಾ ಗಿಮಿಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ದಕ್ಷಿಣದ ರಾಜ್ಯಗಳನ್ನು ಸಮಾಧಾನಪಡಿಸುವ ಈ ಹಠಾತ್ ಕಾಳಜಿಯು ರಾಜತಾಂತ್ರಿಕತೆಗಿಂತ ಹೆಚ್ಚಾಗಿ ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿನ ರಾಜಕೀಯ ಲೆಕ್ಕಾಚಾರದಿಂದ ಪ್ರೇರಿತವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ಪ್ರಕ್ರಿಯೆಯು ಕೇವಲ ಸೀಟುಗಳ ಹೆಚ್ಚಳದ ಬಗ್ಗೆ ಅಲ್ಲ, ಬದಲಿಗೆ ಆ ಹೆಚ್ಚಳ ಯಾರಿಗೆ ಅಸಮಾನವಾಗಿ ಪ್ರಯೋಜನ ನೀಡುತ್ತದೆ ಎಂಬುದು ಮುಖ್ಯ ಎಂದಿದ್ದಾರೆ.

ಬಿಜೆಪಿ ಪ್ರಾಬಲ್ಯದ ರಾಜ್ಯಗಳಿಗೆ ಲಾಭ

ಪುನರ್‌ವಿಂಗಡಣೆ ಅಂಕಿಅಂಶಗಳನ್ನು ವಿಶ್ಲೇಷಿಸಿರುವ ಸಿದ್ದರಾಮಯ್ಯ, ಈ ಯೋಜನೆಯು ಸ್ಪಷ್ಟವಾಗಿ ಬಿಜೆಪಿ ಪ್ರಾಬಲ್ಯವಿರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ದೂರಿದ್ದಾರೆ. ಉದಾಹರಣೆಗೆ, ಉತ್ತರ ಪ್ರದೇಶದ ಸೀಟುಗಳು 80ರಿಂದ 120ಕ್ಕೆ (+40), ಮಹಾರಾಷ್ಟ್ರ 48ರಿಂದ 72ಕ್ಕೆ (+24) ಹಾಗೂ ಬಿಹಾರ 40ರಿಂದ 60ಕ್ಕೆ (+20) ಏರಿಕೆಯಾಗಲಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಕೂಡ ಭಾರಿ ಲಾಭ ಪಡೆಯಲಿವೆ. ಈ ಏಳು ರಾಜ್ಯಗಳಲ್ಲೇ ಸುಮಾರು 128ರಿಂದ 131 ಹೆಚ್ಚುವರಿ ಸೀಟುಗಳು ಸೃಷ್ಟಿಯಾಗಲಿವೆ. ಇದು ದಕ್ಷಿಣದ ಐದು ರಾಜ್ಯಗಳು ಪಡೆಯಲಿರುವ ಒಟ್ಟು ಸೀಟುಗಳಿಗಿಂತ (63-66) ಎರಡರಷ್ಟು ಹೆಚ್ಚಾಗಿದೆ ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.

Siddaramaiah

ದಕ್ಷಿಣ ಭಾರತಕ್ಕೆ ಅನ್ಯಾಯ

ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮತ್ತು ಉತ್ತಮ ಆಡಳಿತದಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿವೆ. ಆದರೆ, ಈಗ ಇದೇ ಸಾಧನೆಯೇ ನಮಗೆ ಮುಳುವಾಗುತ್ತಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟು 816 ಸೀಟುಗಳಿಗೆ ಲೋಕಸಭೆ ವಿಸ್ತರಣೆಯಾದರೂ, ದಕ್ಷಿಣದ ರಾಜ್ಯಗಳ ಪಾಲು ಶೇ.24ರಲ್ಲೇ ಸ್ಥಗಿತಗೊಳ್ಳಲಿದೆ. ರಾಷ್ಟ್ರದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿರುವ ಕರ್ನಾಟಕದಂತಹ ರಾಜ್ಯಗಳು ಈ ಪ್ರಕ್ರಿಯೆಯಿಂದ ಮೂಲೆಗುಂಪಾಗುವ ಭೀತಿ ಎದುರಿಸುತ್ತಿವೆ. ಉತ್ತರ ಪ್ರದೇಶ ಮತ್ತು ಕರ್ನಾಟಕದ ನಡುವಿನ ಸೀಟುಗಳ ಅಂತರ ಈಗಿರುವ 52ರಿಂದ 78ಕ್ಕೆ ಏರಿಕೆಯಾಗಲಿದ್ದು, ಇದು ಅಧಿಕಾರ ಕೇಂದ್ರೀಕರಣಕ್ಕೆ ದಾರಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ

ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲ, ಬದಲಿಗೆ ಒಕ್ಕೂಟ ತತ್ವದ ಮೇಲಿನ ನೇರ ದಾಳಿ ಎಂದು ಖಂಡಿಸಿದ್ದಾರೆ. ದಕ್ಷಿಣ ಭಾರತದ ಜನರ ವಿಶ್ವಾಸ ಗಳಿಸಲು ವಿಫಲವಾಗಿರುವ ಮೋದಿ ಸರ್ಕಾರ, ಈಗ ಪ್ರಾತಿನಿಧ್ಯದ ಪುನರ್ ರಚನೆಯ ಮೂಲಕ ನಮ್ಮ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ಆರ್ಥಿಕ ಮತ್ತು ಜಾಗತಿಕ ಸವಾಲುಗಳಿರುವ ಈ ಸಮಯದಲ್ಲಿ ಸರ್ಕಾರವು ರಾಷ್ಟ್ರೀಯ ಆದ್ಯತೆಗಳಿಗಿಂತ ರಾಜಕೀಯ ಅಂಕಗಣಿತಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಯಾವುದೇ ಸಾರ್ವಜನಿಕ ಚರ್ಚೆ ಅಥವಾ ಸಮಾಲೋಚನೆ ಇಲ್ಲದೆ ಇಂತಹ ಬದಲಾವಣೆಗಳನ್ನು ಹೇರಬಾರದು ಎಂದು ಆಗ್ರಹಿಸಿದ್ದಾರೆ. ಕರ್ನಾಟಕದ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಎಲ್ಲ ಜನರ ಧ್ವನಿಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/siddaramaiah-slams-narendra-modi-over-lok-sabha-delimitation-calls-it-plot-against-south-india-449447.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo