
Karnataka
oi-Pragathi S
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲಾಗಿ ಗ್ರೇಡಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರವು ಶೀಕ್ಷಣ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಡೆಗೆ ಪರ-ವಿರೋಧದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಸಂಬಂಧಪಟ್ಟ ಎಲ್ಲಾ ಪಾಲುದಾಋರ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿದ ನಂತರವಷ್ಟೇ ಈ ನಿರ್ಧಾರವನ್ನು ಕೈಗೊಳ್ಳಬೇಕಿತ್ತು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.
ರಾಜ್ಯ ಪಠ್ಯಕ್ರಮವನ್ನು ಅನುಸರಿಸುವ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಮತ್ತೊಂದೆಡೆ ಶಿಕ್ಷಣ ತಜ್ಞರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪರ ಹೋರಾಟಗಾರರು ಸರ್ಕಾರದ ಈ ಹೆಜ್ಜೆಯನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹಾಗೂ ಮೊದಲ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.

ಖಾಸಗಿ ಶಾಲೆಗಳು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಲು ಪ್ರಮುಖ ಕಾರಣ ಇತರ ಶಿಕ್ಷಣ ಮಂಡಳಿಗಳ, ವಿಶೇಷವಾಗಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) ನೀತಿಗಳು. ಸಿಬಿಎಸ್‌ಇ ಶಾಲೆಗಳು ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಪ್ರಮುಖ ಸ್ಪರ್ಧಿಗಳಾಗಿವೆ. “ರಾಜ್ಯದಲ್ಲಿ ಐಸಿಎಸ್‌ಇ (ICSE) ಮಂಡಳಿಗೆ ಸಂಯೋಜಿತವಾಗಿರುವ ಶಾಲೆಗಳ ಸಂಖ್ಯೆ ತೀರಾ ಕಡಿಮೆಯಿದೆ. ಆದರೆ, ಸಿಬಿಎಸ್‌ಇ ಶಾಲೆಗಳು ನಮಗೆ ನೇರ ಸ್ಪರ್ಧಿಗಳು. ಸರ್ಕಾರದ ಈ ದಿಢೀರ್ ನಿರ್ಧಾರದಿಂದ, ವಿಶೇಷವಾಗಿ ಹಿಂದಿ ಮಾತನಾಡುವ ವಲಸಿಗರು ಸಿಬಿಎಸ್‌ಇ ಶಾಲೆಗಳತ್ತ ಮುಖಮಾಡುವ ಸಾಧ್ಯತೆಗಳು ಹೆಚ್ಚಿರುವುದರಿಂದ, ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ದೊಡ್ಡ ಹೊಡೆತ ಬೀಳಲಿದೆ” ಎಂದು ಬೆಂಗಳೂರಿನ ಅನುದಾನರಹಿತ ಖಾಸಗಿ ಶಾಲೆಯ ಪ್ರತಿನಿಧಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದು, ಕೂಡಲೇ ಈ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿದೆ.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡಿ, “ರಾಜ್ಯದಲ್ಲಿ ಅನ್ಯ ಮಂಡಳಿಯ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ನಾಡಿನ ಭಾಷೆಗೆ ಯಾವುದೇ ರೀತಿಯ ಆತಂಕವಿಲ್ಲ. ಜಾಗತಿಕ ಭಾಷೆಯಾಗಿರುವ ಕಾರಣ ಇಂಗ್ಲೀಷ್ ಅನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. ಇದರ ಜೊತೆಗೆ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ತೃತೀಯ ಭಾಷೆ ಕೂಡ ಅತ್ಯಗತ್ಯವಾಗಿದೆ. ಗ್ರೇಡಿಂಗ್ ವ್ಯವಸ್ಥೆಗೆ ಬದಲಾಗುವ ಬದಲು, ಸಿಬಿಎಸ್‌ಇ ಮಾದರಿಯಂತೆ ತೃತೀಯ ಭಾಷೆಯನ್ನು ಬ್ಯಾಕ್-ಅಪ್ ವಿಷಯವನ್ನಾಗಿ ಇರಿಸಿಕೊಂಡು ಒಟ್ಟು ಅಂಕಗಳನ್ನು ಕಡಿತಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬಹುದಿತ್ತು” ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, “ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರ್ಕಾರವು ಯಾವುದೇ ಪಾಲುದಾರರೊಂದಿಗೆ ಚರ್ಚೆ ನಡೆಸಿಲ್ಲ. ಕೇವಲ ಒಂದು ನಿರ್ದಿಷ್ಟ ಗುಂಪಿನ ಬೇಡಿಕೆಗಳನ್ನು ಈಡೇರಿಸಲು ತೆಗೆದುಕೊಂಡ ಇಂತಹ ನಿರ್ಧಾರಗಳು ಭವಿಷ್ಯದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಲಿವೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಆದರೆ, ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಸರ್ಕಾರದ ನಿರ್ಧಾರವನ್ನು ಬಲವಾಗಿ ಬೆಂಬಲಿಸಿದ್ದಾರೆ. “ಇದೊಂದು ಅತ್ಯುತ್ತಮ ನಿರ್ಧಾರ. ದ್ವಿಭಾಷಾ ನೀತಿ ಅನುಷ್ಠಾನದತ್ತ ಇದೊಂದು ಪ್ರಮುಖ ಹೆಜ್ಜೆ. ಆದರೆ, ಗೊಂದಲ ನಿವಾರಿಸಲು ಸರ್ಕಾರ ಶೀಘ್ರವೇ ಸ್ಪಷ್ಟ ಮಾರ್ಗಸೂಚಿಗಳು ಮತ್ತು ಅಧಿಕೃತ ಆದೇಶವನ್ನು ಹೊರಡಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ. “ಸರ್ಕಾರವೇ ಪಠ್ಯಪುಸ್ತಕಗಳನ್ನು ಒದಗಿಸಿ, ಬೋಧನಾ ಪ್ರಕ್ರಿಯೆಯನ್ನು ಮುಂದುವರಿಸಿದಾಗ ವಿದ್ಯಾರ್ಥಿಗಳು ಭಾಷೆಯ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಶಾಲೆಗಳು ಹೇಗೆ ಹೇಳುತ್ತವೆ?” ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯ ಶಿಕ್ಷಣ ನೀತಿ (SEP) ಆಯೋಗ ಕೂಡ ವಿದ್ಯಾರ್ಥಿಗಳಿಗೆ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಲು ಶಿಫಾರಸು ಮಾಡಿತ್ತು ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-sslc-exam-controversy-over-shift-to-grading-system-for-third-language-schools-object-449485.html. xn--babytilbehr-pgb.com does not claim ownership of this content. All rights remain with the original publisher.
