
India
oi-Pragathi S
ಮಂತಾಲಯ: ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ದಿನವೆಂದೇ ಪರಿಗಣಿಸಲಾಗುವ ʼಅಕ್ಷಯ ತದಿಗೆʼ(ಅಕ್ಷಯ ತೃತೀಯ) ಆಚರಣೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಸಜ್ಜಾಗುತ್ತಿದೆ. 2026ನೇ ಸಾಲಿನ ಏಪ್ರಿಲ್ 20ರಂದು ಅಕ್ಷಯ ತದಿಗೆ ಹಬ್ಬವಿದ್ದು, ಈ ಶುಭ ಸಂದರ್ಭದಲ್ಲಿ ಮಂತ್ರಾಲಯದಲ್ಲಿ ನಡೆಯುವ ಅತ್ಯಂತ ವಿಶೇಷ ಹಾಗೂ ಸಾಂಪ್ರದಾಯಿಕ ಆಚರಣೆಯಾದ ‘ಗಂಧಲೇಪನ ಸೇವೆ’ಗೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಶ್ರೀ ಮಠದ ದೀರ್ಘಕಾಲದ ಸಂಪ್ರದಾಯದಂತೆ ಪ್ರತಿ ವರ್ಷ ಬೇಸಿಗೆಯ ಸುಡುಬಿಸಿಲಿನ ತಾಪವನ್ನು ತಣಿಸುವ ಉದ್ದೇಶದಿಂದ ಹಾಗೂ ರಾಯರ ಅನುಗ್ರಹ ಪ್ರಾಪ್ತಿಗಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಸುಗಂಧ ಭರಿತ ಗಂಧವನ್ನು ಲೇಪಿಸಲಾಗುತ್ತದೆ. ಇದನ್ನೇ ಗಂಧಲೇಪನ ಸೇವೆ ಎಂದು ಕರೆಯಲಾಗುತ್ತದೆ. ಅಕ್ಷಯ ತದಿಗೆಯ ಶುಭ ದಿನದಂದು ನಡೆಯುವ ಈ ಪವಿತ್ರ ಸೇವೆಯಲ್ಲಿ ಪಾಲ್ಗೊಳ್ಳುವುದು ಭಕ್ತರ ಪಾಲಿಗೆ ಅತ್ಯಂತ ಪುಣ್ಯದಾಯಕ ಎಂಬ ನಂಬಿಕೆಯಿದೆ. ಈ ಸೇವೆಯಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಹಾಗೂ ರಾಯರ ದಿವ್ಯ ಆಶೀರ್ವಾದ ದೊರೆಯುತ್ತದೆ ಎನ್ನುವುದು ಭಕ್ತರ ದೃಢವಾದ ನಂಬಿಕೆ.

ಈ ಬಾರಿ ಅಕ್ಷಯ ತದಿಗೆಯಂದು ಮಂತ್ರಾಲಯಕ್ಕೆ ಖುದ್ದಾಗಿ ಭೇಟಿ ನೀಡಲು ಸಾಧ್ಯವಾಗದ ದೂರದೂರಿನ ಭಕ್ತರಿಗಾಗಿ ಶ್ರೀ ಮಠವು ಆನ್ಲೈನ್ ಮೂಲಕ ಗಂಧಲೇಪನ ಸೇವೆಯನ್ನು ಬುಕ್ ಮಾಡುವ ವಿಶೇಷ ಸೌಲಭ್ಯವನ್ನು ಆರಂಭಿಸಿದೆ. ತಂತ್ರಜ್ಞಾನದ ನೆರವಿನಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ರಾಯರ ಭಕ್ತರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಗಂಧಲೇಪನ ಸೇವೆಗೆ ಶ್ರೀ ಮಠವು ಕೇವಲ 525 ರೂಪಾಯಿಗಳ ಸೇವಾ ಶುಲ್ಕವನ್ನು ನಿಗದಿಪಡಿಸಿದೆ.
ಭಕ್ತರು ತಮ್ಮ ಹೆಸರು, ಗೋತ್ರ ಹಾಗೂ ನಕ್ಷತ್ರದ ವಿವರಗಳನ್ನು ನೀಡಿ ಶ್ರೀ ಮಠದ ಅಧಿಕೃತ ವೆಬ್ಸೈಟ್ ಮೂಲಕ ಸೇವೆಯನ್ನು ಕಾಯ್ದಿರಿಸಬಹುದು. ಆನ್ಲೈನ್ ಮೂಲಕ ಸೇವೆ ಸಲ್ಲಿಸಿದ ಭಕ್ತರ ಹೆಸರಿನಲ್ಲಿ ಅಕ್ಷಯ ತದಿಗೆಯ ದಿನ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಯ ನಂತರ, ರಾಯರ ಅನುಗ್ರಹದ ಸಂಕೇತವಾಗಿ ಪವಿತ್ರ ಗಂಧ ಹಾಗೂ ಮಂತ್ರಾಕ್ಷತೆ ಒಳಗೊಂಡ ‘ಪ್ರಸಾದ’ವನ್ನು ಭಕ್ತರು ನೀಡಿದ ವಿಳಾಸಕ್ಕೆ ನೇರವಾಗಿ ಅಂಚೆ ಮೂಲಕ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಠವು ಅತ್ಯಂತ ಅಚ್ಚುಕಟ್ಟಾಗಿ ಮಾಡಿದೆ. ಹೀಗಾಗಿ ಯಾವುದೇ ಭಕ್ತರು ಆತಂಕಪಡದೆ, ಪ್ರಯಾಣದ ಸುಸ್ತು ಇಲ್ಲದೆ ಮನೆಯಲ್ಲೇ ಕುಳಿತು ಭಕ್ತಿಯಿಂದ ರಾಯರ ಕೃಪೆಗೆ ಪಾತ್ರರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ಲೈನ್ ಮೂಲಕ ಸೇವೆಯನ್ನು ಕಾಯ್ದಿರಿಸಲು ಭಕ್ತರು ಶ್ರೀ ಮಠದ ಅಧಿಕೃತ ಜಾಲತಾಣವಾದ srsmatha.org ಗೆ ಭೇಟಿ ನೀಡಲು ಕೋರಲಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/mantralaya-akshaya-tritiya-2026-online-gandhalepana-seva-bookings-open-now-get-prasada-at-home-449513.html. xn--babytilbehr-pgb.com does not claim ownership of this content. All rights remain with the original publisher.
