
Sports
oi-Madhusudhan KR
IPL 2026 RCB: ಎಂ.ಚಿನ್ನಸ್ವಾಮಿಯಲ್ಲಿ ನಡೆದ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ ಟಿಮ್ ಡೇವಿಡ್ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡದ ಗೆಲವಿಗೆ ಪ್ರಮುಖ ಪಾತ್ರವಹಿಸಿದರು. ಪಂದ್ಯದ ನಂತರ ಮಾತನಾಡಿದ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಕಾರಣ ಯಾರೆಂದು ಬಹಿರಂಗಬಪಡಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 70 ರನ್ ಚಚ್ಚಿ ಪಂದ್ಯದ ಗತಿಯನ್ನೇ ಬದಲಿಸಿದ ಆರ್ಸಿಬಿ ತಂಡದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್, ತಮ್ಮ ಈ ಅದ್ಭುತ ಪ್ರದರ್ಶನದ ಕ್ರೆಡಿಟ್ ಅನ್ನು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೆ ಅರ್ಪಿಸಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಆಡಲು ದಿನೇಶ್ ಕಾರ್ತಿಕ್ ನೀಡಿದ ಸಲಹೆಗಳು ತಮಗೆ ಬಹಳ ಸಹಾಯ ಮಾಡಿದವು ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಆಕ್ರಮಣಕಾರಿ ಆಟ ಆಡಿದ ಟಿಮ್ ಡೇವಿಡ್
ನಾಯಕ ರಜತ್ ಪಾಟಿದಾರ್ ಅವರಿಂದ “ತಾವು ಕಂಡ ಅತ್ಯುತ್ತಮ ಫಿನಿಶರ್” ಎಂದು ಕರೆಸಿಕೊಂಡ ಟಿಮ್ ಡೇವಿಡ್, ತಮ್ಮ ಇನ್ನಿಂಗ್ಸ್ನಲ್ಲಿ 8 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಸಿಡಿಸಿದರು. ಇವರ ಈ ಆಕ್ರಮಣಕಾರಿ ಆಟದ ನೆರವಿನಿಂದ ಆರ್ಸಿಬಿ 3 ವಿಕೆಟ್ ನಷ್ಟಕ್ಕೆ 250 ರನ್ಗಳ ಬೃಹತ್ ಮೊತ್ತ ಪೇರಿಸಿತು. ಬಳಿಕ ಗುರಿ ಬೆನ್ನಟ್ಟಿದ ಸಿಎಸ್ಕೆ ತಂಡವನ್ನು 207 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿತು.
ದಿನೇಶ್ ಕಾರ್ತಿಕ್ ಕೊಂಡಾಡಿದ ಡೇವಿಡ್
ಪಂದ್ಯದ ನಂತರದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟಿಮ್ ಡೇವಿಡ್, “ನಾನು ನನ್ನ ಆಟದಲ್ಲಿ ಹೆಚ್ಚಿನ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಆದರೆ ನಾನು ಮಾಡುವ ಸಿದ್ಧತೆಯು ನನಗೆ ಆತ್ಮವಿಶ್ವಾಸ ನೀಡುತ್ತದೆ. ದಿನೇಶ್ ಕಾರ್ತಿಕ್ ಅವರೊಂದಿಗೆ ಕೆಲಸ ಮಾಡುವುದು ತುಂಬಾ ಖುಷಿ ನೀಡುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಹೇಗೆ ಆಡಬೇಕೆನ್ನುವ ಅನುಭವ ಹೊಂದಿರುವ ಆಟಗಾರ ಅವರು,” ಎಂದು ಹೇಳಿದರು.
“ಎಲ್ಲವೂ ಯಾವಾಗಲೂ ಅಂದುಕೊಂಡಂತೆಯೇ ನಡೆಯುವುದಿಲ್ಲ. ನಾಯಕ ಪಾಟಿದಾರ್ ಕೇವಲ 19 ಎಸೆತಗಳಲ್ಲಿ 48 ರನ್ ಸಿಡಿಸಿದರು. ನಾನು ಅವರ ಮೇಲಿನ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಿದೆ ಅಷ್ಟೇ, ಇದು ತುಂಬಾ ಮಜವಾಗಿತ್ತು. ನನ್ನ ನಂತರ ಬ್ಯಾಟಿಂಗ್ ಮಾಡಲು ಜಿತೇಶ್ ಶರ್ಮಾ ಮತ್ತು ರೊಮಾರಿಯೋ ಶೆಫರ್ಡ್ ಇರುವುದು ನನಗೆ ಹೆಚ್ಚಿನ ಆತ್ಮವಿಶ್ವಾಸ ನೀಡಿತು,” ಎಂದು ಅವರು ಹೇಳಿದರು.
“ಟಿಮ್ ಡೇವಿಡ್ ಒಬ್ಬ ಅನುಭವಿ ಆಟಗಾರ ಮತ್ತು ಅತ್ಯುತ್ತಮ ಫಿನಿಶರ್ಗಳಲ್ಲಿ ಒಬ್ಬರು. ಅವರು ಸ್ಥಿರವಾಗಿ ಪ್ರದರ್ಶನ ನೀಡುತ್ತಾರೆ ಮತ್ತು ನಾನು ಕಂಡ ಅತ್ಯುತ್ತಮ ಫಿನಿಶರ್ಗಳಲ್ಲಿ ಇವರು ಒಬ್ಬರು,” ಎಂದು ಇದೇ ವೇಳೆ ನಾಯಕ ಪಾಟಿದಾರ್ ಅವರು ಶ್ಲಾಘಿಸಿದರು. ಇನ್ನೂ ಕೃನಾಲ್ ಅವರು ಒಂದೇ ಓವರ್ನಲ್ಲಿ ಸರ್ಫರಾಜ್ ಖಾನ್ ಮತ್ತು ಕಾರ್ತಿಕ್ ಶರ್ಮಾ ಅವರ ವಿಕೆಟ್ ಪಡೆದು ನೆರವಾದರು ಅಂತಲೂ ಹೇಳಿದರು. ಮುಂದುವರೆದು ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಅವರು, “ನನ್ನ ಮೇಲೆ ಒತ್ತಡ ಬಿದ್ದಾಗ ಕೃನಾಲ್ ಪಾಂಡ್ಯ ಕಡೆಗೆ ನೋಡುತ್ತೇನೆ. ಅವರ ಮೇಲೆ ನನಗೆ ಅಂತಹ ನಂಬಿಕೆಯಿದೆ,” ಎಂದು ಹೇಳಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/tim-david-credits-dinesh-karthik-after-explosive-knock-powers-rcb-to-big-win-over-csk-in-ipl-2026-449587.html. xn--babytilbehr-pgb.com does not claim ownership of this content. All rights remain with the original publisher.
