Mango: ಕರ್ನಾಟಕದಲ್ಲಿ ಮಾವು ಬೆಳೆಗಾರರು – ಮಾವು ಪ್ರಿಯರಿಗೆ ಶಾಕ್: ಈ ಕಾರಣಕ್ಕೆ ಇಳುವರಿ ಶೇ 50% ಇಳಿಕೆ, ಬೆಲೆ ಏರಿಕೆ ಫಿಕ್ಸ್‌ | Mango Shock in Karnataka: 50% Yield Drop Hits Growers, Price Surge Likely for Consumers

Karnataka

oi-Hitesh Y

Mango: ಕರ್ನಾಟಕದಲ್ಲಿ ಮಾವು ಪ್ರಿಯರು ಹಾಗೂ ಮಾವು ಬೆಳೆಗಾರರಿಗೆ ಈ ಬಾರಿ ಭಾರೀ ಆತಂಕ ಶುರುವಾಗಿದೆ. ಕರ್ನಾಟಕದಲ್ಲಿನ ಹವಾಮಾನ ವೈಪರೀತ್ಯದಿಂದ ಮಾವು ಇಳುವರಿ ಮೇಲೆ ಗಂಭೀರ ಪರಿಣಾಮ ಬೀರಿದೆ. ಮಾವಿನ ಬೆಳೆಯು ಶೇ.50 ರಷ್ಟು ಕುಸಿತ ಕಂಡಿದೆ. ಇದರ ನೇರ ಪರಿಣಾಮವಾಗಿ ಮಾವು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಮಾವಿನ ಋತು ಪ್ರಾರಂಭವಾಗಿದೆ. ಸಾಮಾನ್ಯವಾಗಿ ಇಷ್ಟೊತ್ತಿಗೆ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಮಾವು ಮಾರುಕಟ್ಟೆಗೆ ಬರಬೇಕಾಗಿತ್ತು. ಆದರೆ ಈ ಬಾರಿಯ ಮಾವು ಋತುವಿನಲ್ಲಿ ರೈತರು ಮತ್ತು ಗ್ರಾಹಕರಿಗೆ ನಿರಾಶಾದಾಯಕ ಸುದ್ದಿ ಇದಾಗಿದೆ. ಏಕೆಂದರೆ ಈ ವರ್ಷದ ಮಾವು ಬೆಳೆ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ದೀರ್ಘಕಾಲದ ಶುಷ್ಕ ಹವಾಮಾನ, ಅಕಾಲಿಕ ಶೀತ ತಾಪಮಾನ ಮತ್ತು ಇತ್ತೀಚಿನ ಆಲಿಕಲ್ಲು ಮಳೆ ಸೇರಿದಂತೆ ಹವಾಮಾನ ವೈಪರೀತ್ಯದಿಂದ ಮಾವು ಬೆಳೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.

Mango

ಮಾವು ಉತ್ಪಾದನೆಯು ಈ ಬಾರಿ ಬರೋಬ್ಬರಿ ಶೇ. 50 ರಿಂದ 60 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ. ಮಾವು ಇಳುವರಿಯಲ್ಲಿನ ತೀವ್ರ ಕುಸಿತವು ಬಂಪರ್ ಮಾವು ಫಸಲನ್ನು ನಿರೀಕ್ಷಿಸುತ್ತಿದ್ದ ಬೆಳೆಗಾರರಿಗೆ ಭಾರೀ ಹೊಡೆತವನ್ನು ಕೊಟ್ಟಿದೆ. ಅಲ್ಲದೆ ಈ ಬೇಸಿಗೆಯಲ್ಲಿ ರಾಜ್ಯಾದ್ಯಂತ ಮಾವಿನ ಬೆಲೆಯಲ್ಲಿ ತೀವ್ರ ಏರಿಕೆಗೆಯಾಗುವ ಸಾಧ್ಯತೆಯೂ ಇದೆ.

ಇನ್ನು ಈ ಋತುವಿನ ಆರಂಭದಲ್ಲಿ, ರೈತರು ಹೆಚ್ಚು ಇಳುವರಿ ಬರುವ ನಿರೀಕ್ಷೆಯಲ್ಲಿದ್ದರು. ರಾಮನಗರ ಮತ್ತು ಧಾರವಾಡದಂತಹ ಜಿಲ್ಲೆಗಳಲ್ಲಿ ಡಿಸೆಂಬರ್ ಅಂತ್ಯದಲ್ಲಿ ಹೂಬಿಡುವಿಕೆಯು ನಿಗದಿತ ಸಮಯದಲ್ಲಿ ಪ್ರಾರಂಭವಾಗಿತ್ತು. ಜನವರಿ ಮತ್ತು ಫೆಬ್ರವರಿ ಅಂತ್ಯದ ವೇಳೆಗೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆರೆಯ ಪ್ರದೇಶಗಳಲ್ಲಿನ ಮಾವಿನ ತೋಟಗಳಲ್ಲಿ ಭರ್ಜರಿ ಮಾವಿನ ಫಲಸು ಬರುವ ನಿರೀಕ್ಷೆ ಇತ್ತು. ಹೆಚ್ಚಿನ ಉತ್ಪಾದನೆಯೊಂದಿಗೆ ಅಪ್-ಸೀಸನ್ ಪ್ರಾರಂಭವಾಗುವ ನಿರೀಕ್ಷೆ ಇತ್ತು. ಆದಾಗ್ಯೂ, ಬದಲಾಗುತ್ತಿರುವ ಹವಾಮಾನ ಪರಿಣಾಮದಿಂದ ಮಾವು ಬೆಳೆಗಾರರ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ.

ಮಾವು ಇಳುವರಿ ಕಡಿಮೆಗೆ ಕಾರಣವೇನು

ಇನ್ನು ಕಳೆದ ವಾರ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆಗಿರುವುದು ಸಹ ಹವಾಮಾನದ ಮೇಲೆ ಪರಿಣಾಮ ಬೀರಿದೆ. ತೀವ್ರ ಶೀತ, ದೀರ್ಘಕಾಲದ ಒಣಹವೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಮಾವಿನ ಹಣ್ಣಿನ ಸಮರ್ಪಕ ಬೆಳವಣಿಗೆ ಆಗಿಲ್ಲ. ಹಲವಾರು ಪ್ರದೇಶಗಳಲ್ಲಿ, ಆಲಿಕಲ್ಲು ಮಳೆಯು ನೂರಾರು ಹೆಕ್ಟೇರ್ ಮಾವಿನ ಬೆಳೆಗಳ ಹಾನಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ವ್ಯಾಪಕ ನಷ್ಟವಾಗಿದೆ.

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಪ್ರಕಾರ, ಜನವರಿ ಮತ್ತು ಫೆಬ್ರವರಿಯಲ್ಲಿ ತಾಪಮಾನವು ಆರೋಗ್ಯಕರ ಹಣ್ಣಿನ ಬೆಳವಣಿಗೆಗೆ ಅಗತ್ಯವಾದ ಮಟ್ಟಕ್ಕಿಂತ ಕಡಿಮೆಯಾಗಿದ್ದರಿಂದ ಸಮಸ್ಯೆ ಪ್ರಾರಂಭವಾಗಿದೆ. ಇದು ಹಣ್ಣುಗಳ ರಚನೆಗೆ ಅಗತ್ಯವಾದ ಹರ್ಮಾಫ್ರೋಡೈಟ್ ಹೂವುಗಳಿಗೆ ಹೋಲಿಸಿದರೆ ಗಂಡು ಹೂವುಗಳ ಹೆಚ್ಚಿನ ಪ್ರಮಾಣದಲ್ಲಿರಲು ಕಾರಣವಾಯಿತು. ಪರಿಣಾಮವಾಗಿ ಹಣ್ಣುಗಳ ರಚನೆಯು ಸುಮಾರು 20 ಪ್ರತಿಶತದಷ್ಟು ಕಡಿಮೆಯಾಯಿತು. ಜನಪ್ರಿಯ ಬಾದಾಮಿ ಪ್ರಭೇದವು ಹೆಚ್ಚು ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

ಕರ್ನಾಟಕವು ಈ ಋತುವಿನಲ್ಲಿ 14 ರಿಂದ 16 ಲಕ್ಷ ಮೆಟ್ರಿಕ್ ಟನ್ ಮಾವಿನ ಹಣ್ಣುಗಳನ್ನು ಉತ್ಪಾದಿಸುವ ನಿರೀಕ್ಷೆಯಿತ್ತು. ಆದಾಗ್ಯೂ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ, ಪರಿಷ್ಕೃತ ಅಂದಾಜು ಸುಮಾರು 6 ರಿಂದ 7 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಗಮನಾರ್ಹವಾಗಿ ಇಳಿದಿದೆ. ಕರ್ನಾಟಕವು 1.48 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಮಾವು ಕೃಷಿಯನ್ನು ಹೊಂದಿದೆ. ಆದರೆ ಈ ಬಾರಿ ಭಾರೀ ಹಿನ್ನಡೆ ಆಗಿದೆ. ಮಾವು ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಕೋಲಾರ, ರಾಮನಗರ, ತುಮಕೂರು, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ, ಮಂಡ್ಯ, ಉತ್ತರ ಕನ್ನಡ, ಧಾರವಾಡ, ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಪ್ರದೇಶಗಳು ಸೇರಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/mango-shock-in-karnataka-50-yield-drop-hits-growers-price-surge-likely-for-consumers-449635.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo