Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: ‘ಬಾಸ್’ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ | Darshan Thoogudeepa Wins Legal Battle Court Halts Kannada Boss Movie Release ongoing case impact

Entertainment

oi-Manohara M

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿ ಸಿದ್ಧವಾಗಿದೆ ಎನ್ನಲಾದ “ಬಾಸ್” ಸಿನಿಮಾ ಬಿಡುಗಡೆಗೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ.

ನ್ಯಾಯಾಲಯದ ಆದೇಶವೇನು?

ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ದಾವೆಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ 16ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು ಈ ಮಹತ್ವದ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಧರಿಸಿದ ದೃಶ್ಯಗಳನ್ನು ಹೊಂದಿರುವ ಚಿತ್ರವನ್ನು ಪ್ರದರ್ಶಿಸಬಾರದು ಎಂದು ಹೇಳಿದೆ. ಅರ್ಜಿದಾರರ ವೈಯಕ್ತಿಕ ಜೀವನ, ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ವಿವಾದಿತ ಚಿತ್ರವನ್ನು ಚಿತ್ರಮಂದಿರ ಅಥವಾ ಓಟಿಟಿ ವೇದಿಕೆಗಳ ಮೂಲಕ ಬಿಡುಗಡೆ ಮಾಡಬಾರದು ಎಂದು ನಿರ್ಮಾಪಕರು, ನಿರ್ದೇಶಕರು ಮತ್ತು ವಿತರಕರಿಗೆ ನ್ಯಾಯಾಲಯ ಸೂಚನೆ ನೀಡಿದೆ.

Darshan Thoogudeepa

ದರ್ಶನ್ ದಂಪತಿ ವಾದವೇನು?

ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ದಾವೆಯಲ್ಲಿ ಕೆಲವು ಪ್ರಮುಖ ಆತಂಕಗಳನ್ನು ವ್ಯಕ್ತಪಡಿಸಿದ್ದರು. ರೇಣುಕಾಸ್ವಾಮಿ ಪ್ರಕರಣವು ಸದ್ಯ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇಂತಹ ಸಮಯದಲ್ಲಿ ಅದೇ ವಿಷಯದ ಮೇಲೆ ಸಿನಿಮಾ ಬಂದರೆ ಸಾಕ್ಷ್ಯಾಧಾರಗಳು ಮತ್ತು ವಿಚಾರಣೆಯ ಹಾದಿಯ ಮೇಲೆ ಪ್ರಭಾವ ಬೀರಬಹುದು. ಚಿತ್ರದಲ್ಲಿ ದರ್ಶನ್ ಅವರ ವೈಯಕ್ತಿಕ ಜೀವನ ಅಥವಾ ಪ್ರಕರಣದ ಆರೋಪಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಉಲ್ಲೇಖಿಸುವುದು ಅವರ ತೇಜೋವಧೆಗೆ ಕಾರಣವಾಗುತ್ತದೆ. ಇದು ಕೇವಲ ನಟನೊಬ್ಬನ ವಿಚಾರವಲ್ಲದೆ, ಅವರ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುವ ವಿಷಯವಾಗಿದೆ ಎಂದು ಅವರು ವಾದಿಸಿದ್ದರು. ಸಮಾಜದಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ಘನತೆಗೆ ಚ್ಯುತಿ ಬರಲಿದೆ ಎಂಬ ಆತಂಕವನ್ನು ದರ್ಶನ್ ದಂಪತಿ ನ್ಯಾಯಾಲಯದ ಮುಂದೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ಅವರು ಕೋರಿದ್ದರು.

ಸಿನಿಮಾ ಬಿಡುಗಡೆ ಮುಂದೂಡಿಕೆ

‘ಬಾಸ್’ ಚಿತ್ರತಂಡವು ಈ ಸಿನಿಮಾವನ್ನು 2026ರ ಏಪ್ರಿಲ್ 14ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಕೋರ್ಟ್ ತಡೆಯಾಜ್ಞೆಯಿಂದಾಗಿ ಈಗ ಚಿತ್ರದ ಬಿಡುಗಡೆ ಸ್ಥಗಿತಗೊಂಡಿದೆ. ಈ ಕುರಿತು ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಚಿತ್ರದ ಯಾವುದೇ ಪ್ರಚಾರ ಅಥವಾ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುತ್ತ ಕಥೆ ಹೆಣೆಯಲಾಗಿದೆ ಎನ್ನಲಾದ ‘ಬಾಸ್’ ಚಿತ್ರದ ಸುತ್ತಲಿನ ವಿವಾದ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಚಿತ್ರ ಬಿಡುಗಡೆಗೆ ನ್ಯಾಯಾಲಯ ಈಗಾಗಲೇ ತಡೆ ನೀಡಿದ್ದರೂ, ಈಗ ಚಿತ್ರತಂಡದ ವಿರುದ್ಧ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಬಾಸ್’ ಚಿತ್ರದ ಟೀಸರ್ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ಟೀಸರ್‌ನಲ್ಲಿ ರೇಣುಕಾಸ್ವಾಮಿ ಪ್ರಕರಣದ ಕೆಲವು ಘಟನೆಗಳನ್ನು ಹೋಲುವ ದೃಶ್ಯಗಳಿವೆ ಎಂದು ಆರೋಪಿಸಿರುವ ನಟ ದರ್ಶನ್ ಅವರ ಪರ ವಕೀಲರು, ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಇಂತಹ ದೃಶ್ಯಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಕಾನೂನುಬಾಹಿರ ಎಂದು ವಾದಿಸಲಾಗಿದೆ.

ದರ್ಶನ್ ಪರ ವಕೀಲರು ಈಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಮೆಟ್ಟಿಲೇರಿದ್ದು, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು ಎಂದು ಅಧಿಕೃತವಾಗಿ ಒತ್ತಾಯಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಇಂತಹ ಸೂಕ್ಷ್ಮ ಸಮಯದಲ್ಲಿ ಸಿನಿಮಾ ಮೂಲಕ ಘಟನೆಯನ್ನು ವೈಭವೀಕರಿಸುವುದು ಅಥವಾ ಕಾಲ್ಪನಿಕವಾಗಿ ಚಿತ್ರಿಸುವುದು ತಪ್ಪು. ಇದು ಸಾರ್ವಜನಿಕರ ದಾರಿ ತಪ್ಪಿಸುವುದಲ್ಲದೆ, ನ್ಯಾಯಾಂಗ ಪ್ರಕ್ರಿಯೆಯ ಮೇಲೂ ಪ್ರಭಾವ ಬೀರಬಹುದು ಎಂಬುದು ವಕೀಲರ ವಾದ.

ಚಿತ್ರತಂಡಕ್ಕೆ ತಪ್ಪದ ಕಾನೂನು ಸಂಕಷ್ಟ

ನೈಜ ಘಟನೆಗಳನ್ನೇ ಬಂಡವಾಳವಾಗಿಸಿಕೊಂಡು ಸಿನಿಮಾ ಮಾಡಲಾಗುತ್ತಿದೆ ಎಂಬ ಆರೋಪ ಚಿತ್ರತಂಡಕ್ಕೆ ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ ನೀಡಿದೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಗದಿದ್ದರೆ ಚಿತ್ರದ ಬಿಡುಗಡೆ ಅಸಾಧ್ಯ. ಮೇ 2ರ ನ್ಯಾಯಾಲಯದ ವಿಚಾರಣೆಗೂ ಮುನ್ನವೇ ‘ಬಾಸ್’ ಚಿತ್ರವು ಕಾನೂನು ಹೋರಾಟದ ಸುಳಿಗೆ ಸಿಲುಕಿದ್ದು, ಚಿತ್ರದ ಭವಿಷ್ಯ ಈಗ ಸೆನ್ಸಾರ್ ಮಂಡಳಿ ಮತ್ತು ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/darshan-thoogudeepa-wins-legal-battle-court-halts-kannada-boss-movie-release-ongoing-case-impact-449627.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo