
Karnataka
oi-Manohara M
ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಪಡಿಸಿದೆ.
ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC (ಇಂಡಿಯನ್ ಆಯಿಲ್), BPC (ಭಾರತ್ ಪೆಟ್ರೋಲಿಯಂ) ಮತ್ತು HPC (ಹಿಂದೂಸ್ತಾನ್ ಪೆಟ್ರೋಲಿಯಂ) ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದೆ.

ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ ಎಂದು ವಿವರ ಮಾಹಿತಿ ನೀಡಿದೆ.
ಪೂರೈಕೆಯಲ್ಲಿ ಸಮಸ್ಯೆ ಇಲ್ಲ
ಕಳೆದ ಏಪ್ರಿಲ್ 2ರಿಂದ ಏಪ್ರಿಲ್ 6ರ ವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬರುತ್ತದೆ. ಏಪ್ರಿಲ್ 2 ರಂದು 87.78 ಮೆಟ್ರಿಕ್ ಟನ್, ಏಪ್ರಿಲ್ 3 ರಂದು 86.05 ಮೆಟ್ರಿಕ್ ಟನ್, ಏಪ್ರಿಲ್ 4 ರಂದು 84.80 ಮೆಟ್ರಿಕ್ ಟನ್, ಏಪ್ರಿಲ್ 5 ರಂದು ಗರಿಷ್ಠ 94.11 ಮೆಟ್ರಿಕ್ ಟನ್ ಹಾಗೂ ಏಪ್ರಿಲ್ 6 ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ.
ಆದ್ದರಿಂದ, ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಇಂತಹ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ. ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯು ಕೋರಿದೆ.
ಆಟೋ ಚಾಲಕರ ಅಸಮಾಧಾನ
ಕರ್ನಾಟಕದಲ್ಲಿ ಆಟೋ ಗ್ಯಾಸ್ ಸಮಸ್ಯೆ ಮುಂದುವರಿಯುತ್ತಿರುವ ಬೆನ್ನಲ್ಲೇ, ಸಾರ್ವಜನಿಕ ವಲಯದ ಬಂಕ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆಟೋ ಚಾಲಕರು ತಾತ್ಕಾಲಿಕವಾಗಿ ಪೆಟ್ರೋಲ್‌ಗೆ ಬದಲಾಗುವಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮನವಿ ಮಾಡಿದೆ. ಆದರೆ, ದೈನಂದಿನ ವಾಣಿಜ್ಯ ಬಳಕೆಗೆ ಪೆಟ್ರೋಲ್ ಬಳಸುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಚಾಲಕರು ಈ ಸಲಹೆಯನ್ನು ತಿರಸ್ಕರಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 300ಕ್ಕೂ ಹೆಚ್ಚು ಖಾಸಗಿ ಗ್ಯಾಸ್ ಸ್ಟೇಷನ್‌ಗಳಿದ್ದು, ಅವುಗಳಲ್ಲಿ ಸುಮಾರು ಶೇ. 80ರಷ್ಟು ಬಂಕ್‌ಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಇದರಿಂದಾಗಿ ಖಾಸಗಿ ಬಂಕ್‌ಗಳಿಗೆ ಹೋಗುತ್ತಿದ್ದ ಸಾವಿರಾರು ವಾಹನಗಳು ಈಗ ಸರ್ಕಾರಿ ಸ್ವಾಮ್ಯದ ಐಒಸಿಎಲ್ ಬಂಕ್‌ಗಳಿಗೆ ಲಗ್ಗೆ ಇಡುತ್ತಿವೆ. ರಾಜ್ಯದ ಒಟ್ಟು 72 ತೈಲ ಮಾರುಕಟ್ಟೆ ಕಂಪನಿ ಮಳಿಗೆಗಳ ಪೈಕಿ 55 ಮಳಿಗೆಗಳನ್ನು ಐಒಸಿಎಲ್ ನಿರ್ವಹಿಸುತ್ತಿದ್ದು, ಈ ಮಿತಿಮೀರಿದ ವಾಹನಗಳ ಸಂಖ್ಯೆಯಿಂದಾಗಿ ಪೂರೈಕೆ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಉಂಟಾಗಿದೆ.
ಆಟೋಗಳಲ್ಲಿ ‘ಡ್ಯುಯಲ್-ಫ್ಯೂಯಲ್’ (ಗ್ಯಾಸ್ ಮತ್ತು ಪೆಟ್ರೋಲ್) ವ್ಯವಸ್ಥೆ ಇದ್ದರೂ, ಪೆಟ್ರೋಲ್ ಬೆಲೆ ಗ್ಯಾಸ್‌ಗಿಂತ ಗಣನೀಯವಾಗಿ ಹೆಚ್ಚಿರುವುದರಿಂದ ದಿನವಿಡೀ ಬಾಡಿಗೆ ಓಡಿಸಲು ಪೆಟ್ರೋಲ್ ಬಳಸಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/no-auto-gas-shortage-karnataka-govt-clarifies-indian-oil-corporation-bharat-petroleum-boost-supply-449815.html. xn--babytilbehr-pgb.com does not claim ownership of this content. All rights remain with the original publisher.
