RCB: ಯಾರ್ಕರ್‌ ಕಿಂಗ್‌ ಬುಮ್ರಾಗೆ ನಡುಕ ಹುಟ್ಟಿಸಿದ್ದ 15ರ ಪೋರ ವೈಭವ್ ಈಗ ಆರ್‌ಸಿಬಿ ಸ್ವಿಂಗ್ ಸುಲ್ತಾನ್ ಭುವಿಗೆ ಟಾರ್ಗೆಟ್ | IPL 2026 RCB vs RR: Teenage Sensation Vaibhav Suryavanshi Set for Big Test Against Bhuvneshwar Kumar

Sports

oi-Madhusudhan KR

IPL 2026 RCB VS RR: ಐಪಿಎಲ್ 2026ರ ಕಣದಲ್ಲಿ ಈಗ 15 ಪೋರ ವರ್ಷದ ವೈಭವ್ ಸೂರ್ಯವಂಶಿ ಅವರ ಅಬ್ಬರ ಜೋರಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರಂತಹ ದಿಗ್ಗಜ ಬೌಲರ್‌ಗೆ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದ ವೈಭವ್, ಈಗ ಸ್ವಿಂಗ್ ಸುಲ್ತಾನ್ ಎನಿಸಿಕೊಂಡಿರುವ ಆರ್‌ಸಿಬಿಯ ಭುವನೇಶ್ವರ್ ಕುಮಾರ್ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ.

ಈ ಸೀಸನ್‌ನಲ್ಲಿ ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 248.97 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 122 ರನ್ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್‌ನ ಬುಮ್ರಾ ಎಸೆದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ಇವರ ಧೈರ್ಯಕ್ಕೆ ಕ್ರಿಕೆಟ್ ಲೋಕವೇ ಬೆರಗಾಗಿದೆ. ಕೇವಲ 15 ವರ್ಷ ವಯಸ್ಸಿನ ಇವರು ಈ ಬಾರಿಯ ಐಪಿಎಲ್‌ನ ಅತ್ಯಂತ ಕಿರಿಯ ಆಟಗಾರ ಆಗಿದ್ದಾರೆ.

IPL 2026 RCB vs RR Teenage Sensation Vaibhav Suryavanshi Set for Big Test Against Bhuvneshwar Kumar

ಇದೇ ಸೀಸನ್‌ನಲ್ಲಿ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ವೇಗಿ ಎಂಬ ದಾಖಲೆ ಬರೆದಿದ್ದಾರೆ. ಪವರ್‌ಪ್ಲೇನಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಇವರ ಕಲೆ ಇಂದಿಗೂ ಬ್ಯಾಟರ್‌ಗಳಿಗೆ ಕಬ್ಬಿಣದ ಕಡಲೆಯಾಗಿದೆ. ಇನ್ನೂ ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ಎರಡೂ ತಂಡಗಳು ಈವರೆಗೆ ಅಜೇಯವಾಗಿದ್ದು, ಶುಕ್ರವಾರ (ಏಪ್ರಿಲ್ 10) ನಡೆಯುವ ಪಂದ್ಯದಲ್ಲಿ ಯಾವ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ವೈಭವ್ ಸೂರ್ಯವಂಶಿ Vs ಭುವನೇಶ್ವರ್ ಕುಮಾರ್

ವೈಭವ್ ಸೂರ್ಯವಂಶಿ ಕಳೆದ ಪಂದ್ಯದಲ್ಲಿ ತೋರಿದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಇಡೀ ಕ್ರಿಕೆಟ್ ಲೋಕವನ್ನೇ ಬೆರಗಾಗುವಂತೆ ಮಾಡಿದೆ. ವಿಶ್ವದ ನಂಬರ್ 1 ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ಅವರು, ನಂತರ ಕೇವಲ 3 ಎಸೆತಗಳ ಅಂತರದಲ್ಲಿ 2 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದ ವೈಭವ್, ಮುಂಬೈ ಇಂಡಿಯನ್ಸ್ ಕೈಯಿಂದ ಪಂದ್ಯವನ್ನು ಕಸಿದುಕೊಂಡಿದ್ದರು.

ವೈಭವ್ ಕೇವಲ ಮೂರು ಪಂದ್ಯಗಳಲ್ಲಿ 11 ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ಜಗತ್ತಿಗೆ ತೋರಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ಅವರ ಸ್ಟ್ರೈಕ್ ರೇಟ್ 240ರ ಆಸುಪಾಸಿನಲ್ಲಿರುವುದು ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿದೆ. ಇದೀಗ ನಾಳೆ ನಡೆಯಲಿರುವ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ದಾಳಿಯ ಎದುರು ವೈಭವ್ ಇದೇ ಫಾರ್ಮ್ ಮುಂದುವರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಜಸ್ಪ್ರೀತ್ ಬುಮ್ರಾ ಅವರ ವೇಗಕ್ಕೆ ವೈಭವ್ ತಮ್ಮ ಬ್ಯಾಟಿಂಗ್ ತಾಕತ್ತು ತೋರಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್ ಅವರ ವೇಗಕ್ಕಿಂತ ಅವರ ಚಾಣಾಕ್ಷತನ ಅಪಾಯಕಾರಿ. ಆರಂಭಿಕ ಓವರ್‌ಗಳಲ್ಲಿ ವೈಭವ್ ಆತುರಪಡದೆ ಸಂಯಮದಿಂದ ಆಡುವುದು ಅನಿವಾರ್ಯ ಎನ್ನುತ್ತಿದ್ದಾರೆ ಹಲವು ಕ್ರಿಕೆಟ್‌ ದಿಗ್ಗಜರು.

ಟಾಸ್ ಗೆದ್ದವರಿಗೆ ಹೆಚ್ಚಿನ ಲಾಭ

ಗುವಾಹಟಿಯ ಈ ಮೈದಾನದಲ್ಲಿ ರಾತ್ರಿಯ ಪಂದ್ಯವಾದ್ದರಿಂದ ಮೈದಾನದಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ದುಕೊಳ್ಳುವುದು ಬಹುತೇಕ ಖಚಿತ. ನಂತರ ಬ್ಯಾಟಿಂಗ್ ಮಾಡುವ ತಂಡಕ್ಕೆ ಇಬ್ಬನಿಯ ಲಾಭ ಸಿಗಲಿದ್ದು, ರನ್ ಬೆನ್ನಟ್ಟುವುದು ಸುಲಭ ಆಗಲಿದೆ.

ಮುಂಬೈ ವಿರುದ್ಧ ಅಬ್ಬರಿಸಿದ್ದ ವೈಭವ್, ಜೈಸ್ವಾಲ್

ಕಳೆದ ಪಂದ್ಯದಲ್ಲಿ ಆರ್‌ಆರ್ ಪರ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಕೇವಲ 5 ಓವರ್‌ಗಳಲ್ಲಿ 80 ರನ್ ಚಚ್ಚಿ ದಾಖಲೆ ಬರೆದಿತ್ತು. ಇದೀಗ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ರಾಜಸ್ಥಾನ್ ರಾಯಲ್ಸ್ ತಂಡ ಇವರಿಂದಲೇ ಅಂತಹದ್ದೇ ಸುನಾಮಿ ಆರಂಭವನ್ನು ನಿರೀಕ್ಷಿಸುತ್ತಿದೆ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಹೇಳುವದಾದರೆ, ಒಂದೆಡೆ ಆರ್‌ಆರ್ ಪರ ಸ್ಫೋಟಕ ಬ್ಯಾಟಿಂಗ್‌ನಿಂದ ರನ್‌ಗಳ ಸುರಿಮಳೆ ಹರಿಸುವ ವೈಭವ್, ಮತ್ತೊಂದೆಡೆ ಆರ್‌ಸಿಬಿ ಪರ ಅನುಭವಿ ಸ್ವಿಂಗ್ ಮಾಂತ್ರಿಕ ಭುವಿ ಇದ್ದಾರೆ. ಈ ಇಬ್ಬರ ನಡುವಿನ ಹೋರಾಟದಲ್ಲಿ ಯಾರ ಕೈ ಮೇಲಾಗಲಿದೆ ಎಂದು ಕಾದುನೋಡಬೇಕಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-rcb-vs-rr-teenage-sensation-vaibhav-suryavanshi-set-for-big-test-against-bhuvneshwar-kumar-449943.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo