
Karnataka
oi-Hitesh Y
SSLC Hindi: ಎಸ್ಎಸ್ಎಲ್ಸಿಯಲ್ಲಿ ತೃತೀಯ ಭಾಷೆಯಾದ ಹಿಂದಿಗೆ ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡವನ್ನು ಹೈಕೋರ್ಟ್ ವಿಧಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು, ಎಸ್ಎಸ್ಎಲ್ಸಿಯಲ್ಲಿ ತೃತೀಯ ಭಾಷೆಯನ್ನು ಅಂಕಗಳಿಂದ ಅಳೆಯುವ ಬದಲು ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದಷ್ಟೇ ಅಲ್ಲದೆ, ಪ್ರಚಾರದ ಹಂಬಲದಿಂದ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಒಂದು ಲಕ್ಷ ರುಪಾಯಿಗಳ ದಂಡ ವಿಧಿಸಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಹಿಂದಿಹೇರಿಕೆ ಪರವಾಗಿ ವಾದ ಮಾಡುತ್ತಿದ್ದವರಿಗೆ ನೇರವಾಗಿ ಮಾಡಿದ ಕಪಾಳಮೋಕ್ಷ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿಯನ್ನೂ ಸಂಪೂರ್ಣವಾಗಿ ಕೈಬಿಡಲಾಗಿದೆ ಎಂಬ ಅರ್ಥದ ಹೇಳಿಕೆಯು ಮಾಧ್ಯಮಗಳಲ್ಲಿ ಪ್ರಕಟವಾಗಿಲ್ಲ. ಹೀಗಿದ್ದರೂ ಪೂರ್ವಾಗ್ರಹ ಪೀಡಿತವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಕಿಡಿ ಕಾರಿದೆ ಎಂದು ವರದಿಗಳು ಹೇಳುತ್ತಿವೆ. ಕೇವಲ ಪತ್ರಿಕಾ ಹೇಳಿಕೆ ಓದಿ ನೀವು ಪಿಐಎಲ್ ಸಲ್ಲಿಸಿದ್ದೀರಾ ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿತ್ತು.

ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯನ್ನು ಹಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಮನಸಿಗೆ ಬಂದಂತೆ ವ್ಯಾಖ್ಯಾನಿಸಿ ಗೊಂದಲ ಉಂಟುಮಾಡಿದ್ದರು. ಹಿಂದಿಯೂ ಸೇರಿದಂತೆ ಮೂರನೇ ಭಾಷೆಯ ಕಲಿಕೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿರಲಿಲ್ಲ. ಆದರೆ ಇದನ್ನು ತಪ್ಪುತಪ್ಪಾಗಿ ಬಿಂಬಿಸಲಾಯಿತು ಮಾತ್ರವಲ್ಲ, ಹೈಕೋರ್ಟ್ ವರೆಗೆ ತೆಗೆದುಕೊಂಡುಹೋಗಲಾಯಿತು. ಈಗ ಅಲ್ಲಿ ಅವರಿಗೆ ಮುಖಭಂಗವಾಗಿದೆ. ಮೊದಲು ಐವತ್ತು ಸಾವಿರ ದಂಡ ವಿಧಿಸಿದ್ದ ನ್ಯಾಯಾಲಯ ನಂತರ ಒಂದು ಲಕ್ಷ ರುಪಾಯಿ ದಂಡಕ್ಕೆ ಏರಿಸಿರುವುದು ಇದಕ್ಕೆ ಸಾಕ್ಷಿ.
ರಾಜ್ಯ ಸರ್ಕಾರ ತನ್ನ ನೀತಿಯ ಕುರಿತು ಇನ್ನೂ ನಿಯಮಾವಳಿಗಳನ್ನು ರೂಪಿಸುವ, ಆದೇಶ ಹೊರಡಿಸುವ ಮುನ್ನವೇ ನ್ಯಾಯಾಲಯಕ್ಕೆ ಹೋದವರು ಬಹಳ ಆತುರವಾಗಿ ಏನನ್ನೋ ಸಾಧಿಸುವ ಉದ್ದೇಶ ಹೊಂದಿದ್ದರು. ಒಂದು ವೇಳೆ ಅರ್ಜಿ ಸ್ವೀಕೃತವಾಗಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯೂ ಸಹ ವಿದ್ಯಾರ್ಥಿಗಳ ಪರ ಕಾನೂನು ಹೋರಾಟ ನಡೆಸಲು ಸಜ್ಜಾಗಿತ್ತು. ಆದರೆ ಅರ್ಜಿ ವಜಾಗೊಳಿಸಿ, ಅರ್ಜಿದಾರರಿಗೆ ದಂಡ ವಿಧಿಸಲಾಗಿರುವುದರಿಂದ ಪಟ್ಟಭದ್ರ ಶಕ್ತಿಗಳ ಹುನ್ನಾರ ವಿಫಲವಾಗಿದೆ.
ರಾಜ್ಯ ಸರ್ಕಾರ ಕೂಡಲೇ ನಿಯಮಾವಳಿಗಳನ್ನು ರೂಪಿಸಿ, ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು. ಹಿಂದಿ ಸಾಮ್ರಾಜ್ಯಶಾಹಿಗಳ ಹುನ್ನಾರಗಳಿಗೆ ಮಣೆ ಹಾಕಬಾರದು. ಕನ್ನಡದ ಮಕ್ಕಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ನಾರಾಯಣಗೌಡ ಟಿ.ಎ ಅವರು ಅಭಿಪ್ರಾಯಪಟ್ಟಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/sslc-hindi-row-1-lakh-fine-on-petitioners-opposing-grading-system-what-karnataka-rakshana-vedike-450009.html. xn--babytilbehr-pgb.com does not claim ownership of this content. All rights remain with the original publisher.
