
Sports
oi-Madhusudhan KR
Mukul Choudhary: ಐಪಿಎಲ್ 2026ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ 54 ರನ್ ಚಚ್ಚಿ ಲಕ್ನೋ ಸೂಪರ್ ಜೈಂಟ್ಸ್ಗೆ ರೋಚಕ ಜಯ ತಂದುಕೊಟ್ಟ ಮುಕುಲ್ ಚೌಧರಿ ಈಗ ದೇಶದಾದ್ಯಂತ ಚರ್ಚೆಯಲ್ಲಿದ್ದಾರೆ. ಆದರೆ, ಈ ಯುವ ಆಟಗಾರನ ಈ ಸ್ಫೋಟಕ ಬ್ಯಾಟಿಂಗ್ ಹಿಂದೆ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಬಾಲ್ಯದ ತರಬೇತುದಾರ ದಿನೇಶ್ ಲಾಡ್ ಅವರ ಮಹತ್ವದ ಮಾರ್ಗದರ್ಶನವಿದೆ.
ಐಪಿಎಲ್ ಆರಂಭಕ್ಕೂ ಮುನ್ನ ಮುಕುಲ್ ಚೌಧರಿ ಫಾರ್ಮ್ ಕಳೆದುಕೊಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಅವರನ್ನು ರಾಜಸ್ಥಾನ ರಣಜಿ ತಂಡದಿಂದಲೂ ಕೈಬಿಡಲಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ಮುಕುಲ್ ಅವರು ದಿನೇಶ್ ಲಾಡ್ ಅವರನ್ನು ಭೇಟಿಯಾಗಿ ತಮ್ಮ ಬ್ಯಾಟಿಂಗ್ ಸುಧಾರಿಸಲು ನೆರವು ಕೋರಿದ್ದರು.

ಬ್ಯಾಟಿಂಗ್ನಲ್ಲಿ ಮಾಡಿಕೊಂಡ ಬದಲಾವಣೆಗಳು
ದಿನೇಶ್ ಲಾಡ್ ಅವರು ಮುಕುಲ್ ಅವರ ಬ್ಯಾಟಿಂಗ್ನಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದರು. ಬ್ಯಾಟ್ ಹಿಡಿಯುವ ವಿಧಾನವನ್ನು ಸರಿಪಡಿಸುವ ಮೂಲಕ ಹೆಚ್ಚಿನ ಸ್ಥಿರತೆ ಕಾಪಾಡಿಕೊಳ್ಳುವಂತೆ ಮಾಡಿದರು. ಮೈದಾನದ ಹಿಂದಿನ ಭಾಗಕ್ಕೆ ಹೊಡೆಯಲು ಪ್ರಯತ್ನಿಸದೆ, ಮೈದಾನದ ಮುಂಭಾಗದಲ್ಲಿ ನೇರವಾಗಿ ಶಾಟ್ಗಳನ್ನು ಆಡುವಂತೆ ಸೂಚಿಸಿದರು.
ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಕೇವಲ ಎರಡು ದಿನಗಳ ಮೊದಲು ಮುಕುಲ್ ಅವರಿಗೆ ಫೋನ್ ಮಾಡಿದ್ದ ದಿನೇಶ್ ಲಾಡ್, “ಫ್ಯಾನ್ಸಿ ಶಾಟ್ಗಳಿಗಿಂತ ಸರಿಯಾದ ಕ್ರಿಕೆಟ್ ಶಾಟ್ಗಳ ಮೇಲೆ ಗಮನ ಹರಿಸು” ಎಂದು ಕಿವಿಮಾತು ಹೇಳಿದ್ದರು. ಆ ಸಲಹೆಯೇ ಇಂದು ಮುಕುಲ್ ಅವರನ್ನು ‘ಮ್ಯಾಚ್ ವಿನ್ನರ್’ ಮಾಡಿದೆ.
“ಕಳೆದ ಸೋಮವಾರವಷ್ಟೇ ನಾನು ಮುಕುಲ್ ಚೌಧರಿ ಜೊತೆ ಫೋನ್ನಲ್ಲಿ ಮಾತನಾಡಿದ್ದೆ. ವಿಕೆಟ್ನ ಹಿಂಭಾಗದಲ್ಲಿ ಶಾಟ್ ಬಾರಿಸಲು ಪ್ರಯತ್ನಿಸಬೇಡ, ವಿಕೆಟ್ನ ಮುಂಭಾಗದಲ್ಲೇ ಆಡು ಎಂದು ಸಲಹೆ ನೀಡಿದ್ದೆ. ಅದರಂತೆಯೇ ಅವನು ಸರಿಯಾದ ಶಾಟ್ಗಳ ಮೇಲೆ ಗಮನ ಹರಿಸಿದ್ದು, ಅದು ಈಗ ಫಲ ನೀಡಿದೆ,” ಎಂದು ದಿನೇಶ್ ಲಾಡ್ ತಿಳಿಸಿದ್ದಾರೆ.
ಕಣ್ಣೀರು ತರಿಸುವ ಕೌಟುಂಬಿಕ ಹಿನ್ನೆಲೆ
ಮುಕುಲ್ ಚೌಧರಿ ಅವರ ಈ ಸಾಧನೆಯ ಹಿಂದೆ ಅವರ ತಂದೆ ದಲಿಪ್ ಕುಮಾರ್ ಚೌಧರಿ ಅವರ ದೊಡ್ಡ ತ್ಯಾಗವಿದೆ. ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಅವರು ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿದ್ದರು. ಆದರೆ, ವ್ಯವಹಾರದಲ್ಲಿ ಉಂಟಾದ ನಷ್ಟದಿಂದಾಗಿ ಅವರು ಸುಮಾರು ₹3.5 ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿದ್ದರು. ಈ ಸಾಲದ ಬಾಧೆಯಿಂದಾಗಿ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಯಿತು.
ತಂದೆಯ ಸಾಲ ತೀರಿಸುವ ಭರವಸೆ ನೀಡಿದ ಮುಕುಲ್
ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್ ಹರಾಜಿನಲ್ಲಿ ಮುಕುಲ್ ಚೌಧರಿ ಅವರನ್ನು ₹2.6 ಕೋಟಿ ನೀಡಿ ಖರೀದಿಸಿತ್ತು. ಈಗ ತಮ್ಮ ಮೊದಲ ಪಂದ್ಯದಲ್ಲೇ ಸಿಕ್ಸರ್ಗಳ ಸುರಿಮಳೆಗೈದಿರುವ ಮುಕುಲ್, ಸಂಭಾವನೆಯ ಮೂಲಕ ತಂದೆಯ ಮೇಲಿರುವ ಸಾಲವನ್ನು ತೀರಿಸಿ ಕುಟುಂಬಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ. ಒಬ್ಬ ಸಾಮಾನ್ಯ ಯುವಕ ಸಾಲ, ಜೈಲು ಮತ್ತು ಕಡುಬಡತನದಂತಹ ಕಷ್ಟಗಳನ್ನು ಮೀರಿ, ಇಂದು ಧೋನಿ ಶೈಲಿಯಲ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸಿ ಮಿಂಚುತ್ತಿರುವುದು ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಿದೆ.
ಕೆಕೆಆರ್ ವಿರುದ್ಧ ಅಬ್ಬರಿಸಿದ ಮುಕುಲ್
ಐಪಿಎಲ್ 2026ರ ಸೀಸನ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಈ ಯುವ ಆಟಗಾರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರ ಶೈಲಿಯಲ್ಲೇ 7 ಭರ್ಜರಿ ಸಿಕ್ಸರ್ಗಳನ್ನು ಸಿಡಿಸುವ ಮೂಲಕ, ಅಸಾಧ್ಯವೆಂದು ಭಾವಿಸಿದ್ದ ಗೆಲುವನ್ನು ಸಾಧ್ಯವಾಗಿಸಿದರು.
ವಿಶೇಷವಾಗಿ ಧೋನಿ ಅವರ ಟ್ರೇಡ್ ಮಾರ್ಕ್ ‘ಹೆಲಿಕಾಪ್ಟರ್ ಶಾಟ್’ ಮೂಲಕ ಕ್ರಿಕಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಕ್ನೋ ತಂಡವು ಸೋಲುವ ಹಂತದಲ್ಲಿದ್ದಾಗ ಕ್ರೀಸ್ಗೆ ಬಂದ ಮುಕುಲ್, ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೆಕೆಆರ್ನ ಮಾರಕ ಬೌಲರ್ಗಳ ಎದುರು ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಚಚ್ಚಿದ ಈ ಯುವಕ ಈಗ ‘ಹೊಸ ಫಿನಿಶರ್’ ಆಗಿ ಹೊರಹೊಮ್ಮಿದ್ದಾರೆ.
128 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ದವಡೆಯಲ್ಲಿದ್ದ ಲಕ್ನೋ ತಂಡಕ್ಕೆ, ಯಾವುದೇ ನಿರೀಕ್ಷೆಯಿಲ್ಲದೆ ಕ್ರೀಸ್ಗೆ ಬಂದ ಮುಕುಲ್ ಚೌಧರಿ 27 ಎಸೆತಗಳಲ್ಲಿ 2 ಫೋರ್, 7 ಸಿಕ್ಸರ್ ಸಹಿತ ಅಜೇಯ 54 ಭರ್ಜರಿ ಅರ್ಧಶತಕದ ಮೂಲಕ ಜಯ ತಂದುಕೊಟ್ಟರು. ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ ಮತ್ತು ಕ್ಯಾಮರೂನ್ ಗ್ರೀನ್ ಅವರಂತಹ ಬೌಲರ್ಗಳನ್ನು ಧೈರ್ಯದಿಂದ ಎದುರಿಸಿದ ಮುಕುಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ತಂಡ ಸಂಕಷ್ಟದಲ್ಲಿದ್ದಾಗ ಬಂದ ಮುಕುಲ್, ಕೇವಲ 27 ಎಸೆತಗಳಲ್ಲಿ ಪಂದ್ಯದ ಚಿತ್ರಣ ಬದಲಿಸಿದರು. ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು 200ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿ ಲಕ್ನೋಗೆ ರೋಚಕ ಜಯ ತಂದುಕೊಟ್ಟರು. ಅವರ 7 ಸಿಕ್ಸರ್ಗಳು ಕೆಕೆಆರ್ ತಂಡದ ಗೆಲುವಿನ ಆಸೆಯನ್ನು ನುಚ್ಚುನೂರು ಮಾಡಿದವು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/mukul-choudhary-s-stunning-54-off-27-powers-lsg-win-dinesh-lad-s-guidance-behind-the-breakthrough-450055.html. xn--babytilbehr-pgb.com does not claim ownership of this content. All rights remain with the original publisher.
