
Entertainment
oi-Manohara M
ಕನ್ನಡ ಚಿತ್ರರಂಗದ ‘ಎವರ್ಗ್ರೀನ್’ ನಟ, ತಮ್ಮ ಸ್ಪುರದ್ರೂಪಿ ವ್ಯಕ್ತಿತ್ವದಿಂದಲೇ ಅಭಿಮಾನಿಗಳ ಮನಗೆದ್ದಿದ್ದ ನಟ ರಾಮ್ಕುಮಾರ್ ಅವರು ಇತ್ತೀಚೆಗೆ ನಡೆದ ‘ಚಿತ್ತಾರ ಅವಾರ್ಡ್ಸ್’ ಸಮಾರಂಭದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಕುಮಾರ್ ಕುಟುಂಬದೊಂದಿಗಿನ ತಮ್ಮ ಸುದೀರ್ಘ ಸಂಬಂಧ ಹಾಗೂ ಸಿನಿಮಾ ರಂಗಕ್ಕೆ ಮರಳುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ರಾಜ್ ಕುಟುಂಬದೊಂದಿಗಿನ ಒಡನಾಟ
ವರನಟ ಡಾ. ರಾಜ್ಕುಮಾರ್ ಅವರ ಅಳಿಯ ಹಾಗೂ ಪೂರ್ಣಿಮಾ ಅವರ ಪತಿಯಾಗಿರುವ ರಾಮ್ಕುಮಾರ್, ಅಣ್ಣಾವ್ರ ಕುಟುಂಬದೊಂದಿಗಿನ ಸ್ನೇಹದ ದಿನಗಳನ್ನು ಈ ವೇದಿಕೆಯಲ್ಲಿ ನೆನದರು. “ರಾಜ್ ಕುಟುಂಬದಲ್ಲಿ ನನ್ನ ಮೊದಲ ಸ್ನೇಹ ಶುರುವಾಗಿದ್ದೇ ಶಿವರಾಜ್ಕುಮಾರ್ ಅವರ ಜೊತೆ. ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಓದುತ್ತಿದ್ದ ಕಾಲದಿಂದಲೇ ನಾವು ಸ್ನೇಹಿತರು. ಆ ಸ್ನೇಹವೇ ಮುಂದೆ ಪೂರ್ಣಿಮಾ ಅವರ ಪರಿಚಯಕ್ಕೆ ಕಾರಣವಾಯಿತು. ಇದು ಸುದೀರ್ಘವಾದ ಮತ್ತು ಸುಂದರವಾದ ಇತಿಹಾಸ” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಸಿನಿಮಾ ರಂಗಕ್ಕೆ ಮರಳುವ ಸುಳಿವು
ಚಿತ್ರರಂಗದಿಂದ ಹಲವು ವರ್ಷಗಳಿಂದ ದೂರವಿದ್ದ ರಾಮ್ಕುಮಾರ್ ಅವರನ್ನು “ಮತ್ತೆ ತೆರೆ ಮೇಲೆ ಯಾವಾಗ ನೋಡಬಹುದು?” ಎಂಬ ಪ್ರಶ್ನೆ ಎದುರಾದಾಗ, ಅವರು ಮುಗುಳ್ನಗುತ್ತಲೇ ಉತ್ತರಿಸಿದರು. “ಸಿನಿಮಾದಲ್ಲಿ ಮತ್ತೆ ನಟಿಸುವ ಆಸೆ ನನಗೂ ಇದೆ. ಆ ಸುಂದರ ಪಯಣ ಈ ವೇದಿಕೆಯಿಂದಲೇ ಆರಂಭವಾಗಲಿ” ಎನ್ನುವ ಮೂಲಕ ಶೀಘ್ರದಲ್ಲೇ ಪರದೆ ಮುಂದೆ ಬರುವ ಸೂಚನೆ ನೀಡಿದರು.
ತಮಗೆ ಸಂದ ಗೌರವದ ಬಗ್ಗೆ ಭಾವುಕರಾದ ನಟ ರಾಮ್ಕುಮಾರ್, “ಈ ಪ್ರಶಸ್ತಿಯು ನನ್ನ ತಂದೆ-ತಾಯಿಯ ಆಶೀರ್ವಾದದ ಫಲ. ನನ್ನ ಪತ್ನಿ, ಮಕ್ಕಳು ಹಾಗೂ ಇಡೀ ಕುಟುಂಬದ ಸಹಕಾರ ಈ ಯಶಸ್ಸಿನ ಹಿಂದಿದೆ. ಮುಖ್ಯವಾಗಿ ಇಷ್ಟು ವರ್ಷಗಳ ಕಾಲ ನನ್ನನ್ನು ಹರಸಿ ಬೆಳೆಸಿದ ಸಮಸ್ತ ಕನ್ನಡ ಕಲಾಭಿಮಾನಿಗಳಿಗೆ ಈ ಪ್ರಶಸ್ತಿಯನ್ನು ಪ್ರೀತಿಯಿಂದ ಅರ್ಪಿಸುತ್ತೇನೆ” ಎಂದು ಕೃತಜ್ಞತೆ ಸಲ್ಲಿಸಿದರು.
ಶಿವಣ್ಣನ ಸಮ್ಮುಖದಲ್ಲೇ ಪ್ರಶಸ್ತಿ ಸ್ವೀಕರಿಸಿದ್ದು ತಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ದಶಕಗಳ ಕಾಲ ನಾಯಕ ನಟನಾಗಿ ಮಿಂಚಿದ್ದ ರಾಮ್ಕುಮಾರ್ ಅವರ ಮರುಪ್ರವೇಶಕ್ಕಾಗಿ ಈಗ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ನಟ ರಾಮ್ಕುಮಾರ್ 1990ರಲ್ಲಿ ತೆರೆಕಂಡ ‘ಆವೇಶ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅದಾದ ನಂತರ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಹೋದ ಇವರು, ಅಂದಿನ ಕಾಲದ ಯುವತಿಯರ ನೆಚ್ಚಿನ “ಚಾಕೊಲೇಟ್ ಹೀರೋ” ಆಗಿ ಗುರುತಿಸಿಕೊಂಡರು. ‘ತಾಯಿ ಇಲ್ಲದ ತವರು’, ‘ಕಾವ್ಯ’, ‘ಗೆಜ್ಜೆನಾದ’, ‘ತವರಿನ ತೊಟ್ಟಿಲು’ ಮುಂತಾದ ಚಿತ್ರಗಳು ಇವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದವು. ಕೇವಲ ನಟನೆಯಷ್ಟೇ ಅಲ್ಲದೆ, ಮಲ್ಟಿಸ್ಟಾರರ್ ಚಿತ್ರ ‘ಪಾಂಡವರು’ ಮೂಲಕ ಇವರು ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡರು.
ಬಳಿಕ ರಾಮ್ಕುಮಾರ್ ಅವರು ವರನಟ ಡಾ. ರಾಜ್ಕುಮಾರ್ ಅವರ ಪುತ್ರಿ ಪೂರ್ಣಿಮಾ ಅವರನ್ನು ವಿವಾಹವಾಗುವ ಮೂಲಕ ಅಣ್ಣಾವ್ರ ಕುಟುಂಬದ ಅಳಿಯರಾದರು. ರಾಮ್ಕುಮಾರ್ ಅವರ ಮಕ್ಕಳೂ ಕೂಡ ಈಗ ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಇವರ ಪುತ್ರ ಧೀರೇನ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದಾರೆ. ಪುತ್ರಿ ಧನ್ಯಾ ಕೂಡ ಚಿತ್ರರಂಗಕ್ಕೆ ಪ್ರವೇಶಿಸಿದ್ದು, ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/ramkumar-recalls-friendship-with-actor-shivarajkumar-hints-at-movie-comeback-at-chittara-awards-450059.html. xn--babytilbehr-pgb.com does not claim ownership of this content. All rights remain with the original publisher.
