Karnataka Weather: ಕಲಬುರಗಿಯಲ್ಲಿ 41ಡಿಸೆ ತಾಪಮಾನ, ಉಷ್ಣಅಲೆ ಎಚ್ಚರಿಕೆ, ಕೆಲವೆಡೆ ಮಳೆ ಸಾಧ್ಯತೆ | Karnataka Weather: Rainfall Expected in Few Districts, Record 41 DC Maximum Temp, Heat Wave Alert

Karnataka

oi-Shankrappa Parangi

ಬೆಂಗಳೂರು: ನಿರಂತರವಾಗಿ ಬದಲಾಗುತ್ತಿರುವ ಹವಾಮಾನ ಬದಲಾವಣೆ ಕಾರಣಗಳಿಂದ ಕರ್ನಾಟಕದಲ್ಲಿ ಬೇಸಿಗೆಯಲ್ಲೂ ನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಮಳೆ ಆಗುತ್ತಿದೆ. ಸಮುದ್ರ ಮೇಲ್ಮೈನಲ್ಲಿನ ಟ್ರಫ್, ಸುಳಿಗಾಳಿಯಿಂದ ಪೂರ್ವ ಮುಂಗಾರು ಮಳೆ ಚುರುಕಾಗಿದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ವಿವಿಧ ಜಿಲ್ಲೆಗಳ ಕೆಲವು ಪ್ರತ್ಯೇಕ ಪ್ರದೇಶಗಲ್ಲಿ ಗುಡುಗು ಸಹಿತ ಮಳೆ ಮುಂದಿನ ಮೂರು ದಿನ ಮುಂದುವರಿಯಲಿದೆ. ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮೊದಲಿಗೆ ಹವಾಮಾನ ವೈಪರೀತ್ಯಗಳನ್ನು ತಿಳಿಯುವುದಾದರೆ, ‘ಉತ್ತರ-ದಕ್ಷಿಣ ಟ್ರಫ್/ಗಾಳಿಯ ನಿಲುಗಡೆ ಈಗ ಉತ್ತರ ಮಧ್ಯಪ್ರದೇಶದಿಂದ ದಕ್ಷಿಣ ತಮಿಳುನಾಡಿನವರೆಗೆ ವಿದರ್ಭವರೆಗೆ ಸಾಗಿದೆ. ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕರ್ನಾಟಕದ ಒಳನಾಡಿನಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಈ ಟ್ರಫ್ ಮುಂದುವರೆದಿದೆ.

Karnataka Weather

ಪೂರ್ವ ದಿಕ್ಕಿನಲ್ಲಿರುವ ಟ್ರಫ್ ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ ಸರಿಸುಮಾರು 1.5 ಕಿ.ಮೀ ಎತ್ತರದಲ್ಲಿ ಚಲಿಸುತ್ತಿದೆ. ಮರಾಠವಾಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9ಕಿ.ಮೀ ಎತ್ತರದಲ್ಲಿ ಮೇಲ್ಮಟ್ಟದ ವಾಯು ಸುಳಿಗಾಳಿ ಪರಿಚಲನೆ ಕಡಿಮೆಯಾಗಿದೆ. ಇದರ ಪ್ರಭಾವದಿಂದ ಮಳೆ ಆಗಲಿದ್ದು, ತೇವ ಭರಿತ ಗಾಳಿ, ಮಬ್ಬು ವಾತಾವರಣ ಹಲವೆಡೆ ನಿರ್ಮಾಣವಾಗುತ್ತಿದೆ ಎಂದು ಕರ್ನಾಟಕ ಹವಾಮಾನ ವಿಜ್ಞಾನಿಗಳು ತಿಳಿಸಿದ್ದಾರೆ.

ಮುಂದಿನ 03 ದಿನ ಈ ಜಿಲ್ಲೆಗಳಲ್ಲಿ ಮಳೆ

ಕೊಡಗು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಮಾನ್ಯ ಮಳೆ ಆಗಲಿದೆ. ಉಳಿದೆಡೆ ಒಣಹವೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇನ್ನೂ ಅಧಿಕ ಸೆಕೆಯ ವಾತಾವರಣ ಕಂಡು ಬರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕೆಲವೆಡೆ ಮಳೆ ನಿರೀಕ್ಷೆ ಇದೆ. ಉಳಿದಂತೆ ಉತ್ತರ ಕನ್ನಡ, ಉಡುಪಿ ಭಾಗದಲ್ಲಿ ಅಲ್ಲಲ್ಲಿ ಮಬ್ಬು ವಾತಾವರಣ ಕಂಡು ಬರಲಿದೆ. ಅದರ ಹೊರತಾಗಿ ಜೋರು ಮಳೆ ಮುಂದುವರಿಯುವ ಲಕ್ಷಣಗಳು ಇಲ್ಲ.

ಉತ್ತರ ಕರ್ನಾಟಕದ ಬಾಗಲಕೋಟೆ, ಧಾರವಾಡ ಮತ್ತು ಗದಗ ಈ ಮೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಪ್ರತಿ ಗಂಟೆಗೆ 30-40 ಕಿಲೋ ಮೀಟರ್ ಜೋರಾಗಿ ಗಾಳಿ ಬೀಸಲಿದೆ. ಗುಡುಗು, ಮಿಂಚು ಸಹಿತ ಜೋರು ಮಳೆ ಸಂಭವವಿದೆ. ಈ ಭಾಗದಲ್ಲಿ ಮುಂಗಾರು ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಾರೆ. ಈ ಮಳೆ ಅವರಿಗೆ ಹೊಲ ಹದ ಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ.

ರಾಜ್ಯದ ಗರಿಷ್ಠ ತಾಪಮಾನ 41ಡಿ.ಸೆ.!

ಹಾವೇರಿ, ವಿಜಯಪುರ, ಬೆಳಗಾವಿ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯ ಬಹುತೇಕ ಕಡೆಗಳಲ್ಲಿ ಮಳೆಗಿಂತ ಗರಿಷ್ಠ ತಾಪಮಾನ ಮೇಲುಗೈ ಸಾಧಿಸಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41, ವಿಜಯಪುರದಲ್ಲಿ 40 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ರಾಯಚೂರು ಮತ್ತು ಕೊಪ್ಪಳದಲ್ಲಿ ತಲಾ 39 ಡಿಗ್ರಿ ಸೆಲ್ಸಿಯಸ್, ಬೀದರ್, ಗದಗ, ಧಾರವಾಡ, ಬಾಗಲಕೋಟೆ, ಬಳ್ಳಾರಿಯಲ್ಲಿ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಕೊಂಚ ಏರಿಕೆ ಆಗಿದೆ. ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

ಬೆಂಗಳೂರು ಹವಾಮಾನ ವರದಿ

ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಇಡಿ ದಿನ ಒಣಹವೆ ಮುಂದುವರಿಯಲಿದೆ. ಸಂಜೆ ಕೆಲವೆಡೆ ಮಬ್ಬು ವಾತಾವರಣ ನಿರ್ಮಾಣವಾಗಬಹುದು. ಇದನ್ನು ಬಿಟ್ಟರೆ ನಗರಕ್ಕೆ ಮಳೆ ಮುನಸೂಚನೆ ಇಲ್ಲ. ಕನಿಷ್ಠ 24 ಹಾಗೂ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಐಎಂಡಿ ತಿಳಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-weather-rainfall-expected-in-few-districts-record-41-dc-maximum-temp-heat-wave-alert-450263.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo