DKD Preetham: ಡಿಕೆಡಿ ಪ್ರೀತಮ್ ಕುಟುಂಬಕ್ಕೆ ‘ದೊಡ್ಮನೆ’ ಆಸರೆ: ಗದಗದ ಬಾಲಕನ ಜವಾಬ್ದಾರಿ ಹೊತ್ತ ಶಿವಣ್ಣ ದಂಪತಿ | Shiva Rajkumar Takes Responsibility of DKD Kid Preetham And Family Emotional Moment On Finale

Entertainment

oi-Manohara M

ಜೀ ಕನ್ನಡ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (DKD) ವೇದಿಕೆಯು ಕೇವಲ ನೃತ್ಯಕ್ಕೆ ಮಾತ್ರವಲ್ಲದೆ, ಮಾನವೀಯತೆಯ ಅಪೂರ್ವ ಕ್ಷಣಗಳಿಗೂ ಸಾಕ್ಷಿಯಾಗಿದೆ. ಕಾರ್ಯಕ್ರಮದ ಅತ್ಯಂತ ಜನಪ್ರಿಯ ಸ್ಪರ್ಧಿ, ಏಳೂವರೆ ವರ್ಷದ ಪುಟಾಣಿ ಪ್ರೀತಮ್ ಮತ್ತು ಆತನ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊರುವುದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ವೇದಿಕೆಯಲ್ಲೇ ಘೋಷಿಸಿದ್ದಾರೆ. ಈ ಮೂಲಕ ಅಣ್ಣಾವ್ರ ಕುಟುಂಬದ ದಾನಗುಣ ಮತ್ತೊಮ್ಮೆ ಸಾಬೀತಾಗಿದೆ.

ಬಡತನ ಮೆಟ್ಟಿನಿಂತ ಗದಗದ ಪ್ರತಿಭೆ

ಗದಗ ಮೂಲದ ಪ್ರೀತಮ್ ಅತ್ಯಂತ ಬಡ ಕುಟುಂಬದಿಂದ ಬಂದವನು. ತಂದೆ-ತಾಯಿಗೆ ಮೂವರು ಮಕ್ಕಳು, ಅದರಲ್ಲಿ ಪ್ರೀತಮ್ ಒಬ್ಬ. ಮನೆಯಲ್ಲಿ ಬಡತನವಿದ್ದರೂ ಆತನ ಪ್ರತಿಭೆಗೆ ಅದು ಅಡ್ಡಿಯಾಗಲಿಲ್ಲ. ತನ್ನ ಅದ್ಭುತ ನೃತ್ಯ ಮತ್ತು ಮುಗ್ಧ ಮಾತುಗಳ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದ ಈ ಬಾಲಕ, ಶಿವರಾಜ್‌ಕುಮಾರ್ ಅವರ ಕುಟುಂಬಕ್ಕೆ ಅತ್ಯಂತ ಆಪ್ತನಾಗಿದ್ದಾನೆ. ಕಳೆದ ಕೆಲ ತಿಂಗಳ ಡಿಕೆಡಿ ಪಯಣದಲ್ಲಿ ಶಿವಣ್ಣನ ಕುಟುಂಬ ಪ್ರೀತಮ್‌ನನ್ನು ತಮ್ಮ ಸ್ವಂತ ಕುಡಿಯಂತೆಯೇ ಕಂಡು ಸಂಭ್ರಮಿಸಿದೆ.

Shiva Rajkumar

ಫಿನಾಲೆ ವೇದಿಕೆಯಲ್ಲಿ ಭಾವುಕ ಕ್ಷಣ

ಗ್ರ್ಯಾಂಡ್ ಫಿನಾಲೆಯ ಸಂದರ್ಭದಲ್ಲಿ ಪ್ರೀತಮ್ ಮತ್ತು ಶಿವಣ್ಣನ ಬಾಂಡಿಂಗ್ ಕುರಿತ ವಿಶೇಷ ವಿಡಿಯೋವೊಂದನ್ನು ಪ್ರಸಾರ ಮಾಡಲಾಯಿತು. ಇದನ್ನು ನೋಡುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಗೀತಕ್ಕನ ಕಣ್ಣಾಲಿಗಳು ತೇವಗೊಂಡವು. ವೇದಿಕೆಯ ಮೇಲಿದ್ದ ಶಿವಣ್ಣ ಕೂಡ ಭಾವುಕರಾಗಿ ಕಣ್ಣೀರು ಹಾಕಿದರು. ಪ್ರೀತಮ್‌ನನ್ನು ಇನ್ಮುಂದೆ ಮಿಸ್ ಮಾಡಿಕೊಳ್ಳಬೇಕಲ್ಲ ಎಂಬ ನೋವು ಆ ಕ್ಷಣದಲ್ಲಿ ವ್ಯಕ್ತಪಡಿಸಿದರು.

ಕುಟುಂಬದ ಹೊಣೆ ಹೊತ್ತ ಶಿವಣ್ಣ ದಂಪತಿ

ಬಳಿಕ ವೇದಿಕೆಯ ಮೇಲೆ ಮಾತನಾಡಿದ ಶಿವರಾಜ್‌ಕುಮಾರ್ ಅವರು ತಮ್ಮ ನಿರ್ಧಾರವೊಂದನ್ನು ಪ್ರಕಟಿಸಿದರು. “ನನಗೆ ಎಲ್ಲಿಯವರೆಗೆ ಶಕ್ತಿ ಇರುತ್ತದೆಯೋ ಅಲ್ಲಿಯವರೆಗೆ ಪ್ರೀತಮ್, ಆತನ ಸಹೋದರರು ಮತ್ತು ಆ ಇಡೀ ಕುಟುಂಬವನ್ನು ನೋಡಿಕೊಳ್ಳಲು ನಾನು ಮತ್ತು ಗೀತಾ ನಿರ್ಧರಿಸಿದ್ದೇವೆ” ಎಂದು ಬಹಿರಂಗವಾಗಿ ಘೋಷಿಸಿದರು. ಅಂದರೆ, ಪ್ರೀತಮ್ ಸೇರಿದಂತೆ ಮೂವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನದ ಸಂಪೂರ್ಣ ಜವಾಬ್ದಾರಿಯನ್ನು ಈಗ ‘ದೊಡ್ಮನೆ’ ವಹಿಸಿಕೊಂಡಿದೆ.

ಪ್ರೀತಮ್ ಮೈಮೇಲೆ ಅಪ್ಪಾಜಿ ಬಂದು ಹೋದಂತಾಯಿತು

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯಲ್ಲಿ ಗದಗದ ಪುಟಾಣಿ ಪ್ರತಿಭೆ ಪ್ರೀತಮ್‌ನ ಬಗ್ಗೆ ಮಾತನಾಡುತ್ತಾ, ಆತನಲ್ಲಿ ತಮ್ಮ ತಂದೆ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅವರ ಪ್ರತಿಬಿಂಬವನ್ನು ಕಂಡಿರುವುದಾಗಿ ಶಿವಣ್ಣ ಮನದಾಳದ ಮಾತನ್ನು ಹಂಚಿಕೊಂಡರು. ಈ ಸೀಸನ್‌ನಲ್ಲಿ ಪ್ರೀತಮ್ ನಮಗೆ ಅತ್ಯಂತ ವಿಶೇಷವಾದ ಹುಡುಗ. ನಮಗೆ ಇವನು ದೇವರ ರೂಪದಲ್ಲಿ ಸಿಕ್ಕಿದ್ದಾನೆ ಎಂದು ನಾನು ಭಾವಿಸುತ್ತೇನೆ. ಇದು ನಮ್ಮ ಪುಣ್ಯ” ಎಂದು ಶಿವಣ್ಣ ಹೇಳಿದರು.

Shiva Rajkumar

ಪ್ರೀತಮ್ ವೇದಿಕೆಯ ಮೇಲೆ ಬಂದಾಗಲೆಲ್ಲಾ ಅಲ್ಲಿ ಒಂದು ರೀತಿಯ ಸಕಾರಾತ್ಮಕ ಶಕ್ತಿ (Power) ಆವರಿಸುತ್ತದೆ. ಆತನಲ್ಲಿ ಏನೋ ಒಂದು ಅದ್ಭುತವಾದ ಸೆಳೆತವಿದೆ, ಅದು ಕೇವಲ ನನಗೆ ಮಾತ್ರವಲ್ಲ, ಶೋನ ಪ್ರತಿಯೊಬ್ಬ ಸ್ಪರ್ಧಿಗೂ ಆಪ್ತವಾಗಿದೆ ಎಂದು ಪ್ರೀತಮ್‌ನ ವ್ಯಕ್ತಿತ್ವವನ್ನು ಶಿವಣ್ಣ ಕೊಂಡಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ಶಿವಣ್ಣ ಹಂಚಿಕೊಂಡ ಒಂದು ಮಾತು ಇಡೀ ವೇದಿಕೆಯನ್ನು ಸ್ತಬ್ಧಗೊಳಿಸಿತು. “ಮೊನ್ನೆ ಒಂದು ಕ್ಷಣ ಪ್ರೀತಮ್‌ ಅಭಿನಯ ನೋಡಿದಾಗ, ಆತನ ಮೈಮೇಲೆ ಅಪ್ಪಾಜಿ ಎರಡು ನಿಮಿಷ ಬಂದು ಹೋದಂತೆ ನನಗೆ ಭಾಸವಾಯಿತು” ಎಂದಿದ್ದಾರೆ. ಅಪ್ಪಾಜಿಯ ಮುಗ್ಧತೆ ಮತ್ತು ಶಕ್ತಿಯನ್ನು ಈ ಪುಟಾಣಿ ಬಾಲಕನಲ್ಲಿ ಕಂಡ ಶಿವಣ್ಣ, “ಲವ್ ಯೂ ಪ್ರೀತಮ್” ಎಂದು ಹೇಳುತ್ತಾ ಆತನನ್ನು ಅಪ್ಪಿಕೊಂಡರು.

ಶಿವಣ್ಣ ದಂಪತಿಯ ಈ ಔದಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇವಲ ಮಾತಿನಲ್ಲಷ್ಟೇ ಅಲ್ಲದೆ, ನಡೆಯಲ್ಲೂ ಅವರು ಅಣ್ಣಾವ್ರ ಹಾದಿಯಲ್ಲೇ ಸಾಗುತ್ತಿದ್ದಾರೆ ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ. ಒಬ್ಬ ಬಡ ಪ್ರತಿಭೆಗೆ ಆಸರೆಯಾಗುವ ಮೂಲಕ ಶಿವರಾಜ್‌ಕುಮಾರ್ ಅವರು ಕನ್ನಡಿಗರ ಪಾಲಿನ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/shiva-rajkumar-takes-responsibility-of-dkd-kid-preetham-and-family-emotional-moment-on-finale-450257.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo