ಸುಮ್ನೆ ಬಾಲ್‌ ಕೊಡೋ ಮಾರಾಯ.. ನಾ ಕೊಡಕಿಲ್ಲ ಏನ್ ಮಾಡ್ತೀರಾ? ಟಿಮ್ ಡೇವಿಡ್‌-ಅಂಪೈರ್ ಫನ್ನಿ ವಿಡಿಯೋ ಭಾರೀ ವೈರಲ್‌ | Tim David Funny Ball Incident with Umpire Goes Viral During RCB vs MI IPL 2026 Clash in Wankhede

Sports

oi-Madhusudhan KR

RCB Vs MI IPL 2026: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್‌ 12) ನಡೆದ ಐಪಿಎಲ್‌ 2026ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾದವು. ಆರ್‌ಸಿಬಿ ಟಾಸ್‌ ಸೋತು ಮೊದಲು ಬ್ಯಾಟ್‌ಗಿಳಿದಿದ್ದು, ಈ ವೇಳೆ ಟಿಮ್ ಡೇವಿಡ್‌ ಹಾಗೂ ಅಂಪೈರ್ ನಡುವೆ ಬಾಲ್‌ ಬದಲಾವಣೆ ಕುರಿತು ಸಣ್ಣ ತಮಾಷೆ ನಡೆಯಿತು. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಅಲ್ಲದೆ, ಹಲವು ಚರ್ಚೆಗಳಿಗೂ ಸಹ ಗ್ರಾಸವಾಗಿದೆ.

ವಾಂಖೆಡೆಯಲ್ಲಿ ನಡೆದ ಪಂದ್ಯದ 18ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಎಸೆದ ಓವರ್‌ನಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ ಟಿಮ್ ಡೇವಿಡ್ ಭರ್ಜರಿ ಸಿಕ್ಸರ್ ಸಿಡಿಸಿದರು. ಆ ಹೊಡೆತದ ತೀವ್ರತೆಗೆ ಚೆಂಡಿನ ಆಕಾರ ಬದಲಾಗಿತ್ತು ಮತ್ತು ಇಬ್ಬನಿಯಿಂದಾಗಿ ಚೆಂಡು ಒದ್ದೆಯಾಗಿತ್ತು. ಈ ಕಾರಣದಿಂದ ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು.

Tim David Funny Ball Incident with Umpire Goes Viral During RCB vs MI IPL 2026 Clash in Wankhede

ಅಂಪೈರ್-ಟಿಮ್ ಡೇವಿಡ್ ತಮಾಷೆಯ ವಾಗ್ವಾದ

ಮೈದಾನಕ್ಕೆ ಹಳೆಯ ಚೆಂಡುಗಳ ಪೆಟ್ಟಿಗೆಯನ್ನು ತರಲಾಯಿತು. ಈ ವೇಳೆ ಟಿಮ್ ಡೇವಿಡ್ ತಮಾಷೆಗಾಗಿ ಒಂದು ಚೆಂಡನ್ನು ಎತ್ತಿಕೊಂಡು ಅಂಪೈರ್‌ಗೆ ನೀಡದೆ ಕೈಯಲ್ಲೇ ಇಟ್ಟುಕೊಂಡು ಆಟವಾಡತೊಡಗಿದರು. ಅಂಪೈರ್ ಪದೇ ಪದೇ ಚೆಂಡನ್ನು ಹಿಂದಿರುಗಿಸುವಂತೆ ಕೇಳಿದರೂ, ಡೇವಿಡ್ ಸ್ವಲ್ಪ ಸಮಯ ತಮಾಷೆ ಮಾಡುತ್ತಾ ನೀಡಲಿಲ್ಲ. ಇದರಿಂದ ಅಂಪೈರ್ ತುಸು ಅಸಮಾಧಾನಗೊಂಡಂತೆ ಕಂಡುಬಂದರು. ನಂತರ ಟಿಮ್ ಡೇವಿಡ್ ನಗುತ್ತಾ ಚೆಂಡನ್ನು ಹಿಂದಿರುಗಿಸಿದರು. ರೋಹಿತ್ ಶರ್ಮಾ ಕೂಡ ಈ ಮೋಜಿನ ಕ್ಷಣದಲ್ಲಿ ಭಾಗಿಯಾಗಿ ನಕ್ಕರು.

ಬೃಹತ್ ಮೊತ್ತ ಕಲೆಹಾಕಿದ ಆರ್‌ಸಿಬಿ

ಟಾಸ್‌ ಸೋತು ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಫಿಲ್ ಸಾಲ್ಟ್ 78(36), ವಿರಾಟ್ ಕೊಹ್ಲಿ 50(38) ಮತ್ತು ರಜತ್ ಪಾಟಿದಾರ್ 53(20) ಅರ್ಧಶತಕ ಬಾರಿಸಿ ತಂಡಕ್ಕೆ ಬೃಹತ್ ಮೊತ್ತ ತಂದುಕೊಟ್ಟರು. ಜೊತೆಗೆ ಟಿಮ್‌ ಡೇವಿಡ್‌ ಸಹ ಅಜೇಯ 34 ರನ್‌ಗಳ ಕೊಡುಗೆ ನೀಡಿದರು.

ಆರ್‌ಸಿಬಿ ವಿರುದ್ಧ ಮಂಡಿಯೂರಿದ ಮುಂಬೈ ಇಂಡಿಯನ್ಸ್

ಆರ್‌ಸಿಬಿ ನೀಡಿದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 222 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯವನ್ನು 18 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಪಂದ್ಯ ಮುಗಿದರೂ ಸಹ ಟಿಮ್ ಡೇವಿಡ್ ಅವರ ಈ ಚೇಷ್ಟೆಯ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಮಿಶ್ರಪ್ರತಿಕ್ರಿಯೆಗಳನ್ನು ವ್ಉಕ್ತಪಡಿಸಿದ್ದಾರೆ.

ಟಿಮ್ ಡೇವಿಡ್‌ ತಮಾಷೆ ಬಗ್ಗೆ ನೆಟ್ಟಿಗರು ಹೇಳೋದೇನು?

ಅನೇಕರು ಕ್ರಿಕೆಟ್ ಅಭಿಮಾನಿಗಳು ಇದನ್ನು ಕೇವಲ ಒಂದು “ಸಣ್ಣ ಹಾಸ್ಯದ ಕ್ಷಣ” ಎಂದು ಬಣ್ಣಿಸಿದ್ದಾರೆ. “ಐಪಿಎಲ್ ಎಂದರೆ ಕೇವಲ ಬ್ಯಾಟ್-ಬಾಲ್ ಹೋರಾಟ ಮಾತ್ರವಲ್ಲ, ಇಂತಹ ತಮಾಷೆಯ ಕ್ಷಣಗಳೂ ಇರಬೇಕು” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಆಟದ ನಡುವೆ ಡೇವಿಡ್ ಅವರ ತುಂಟಾಟದ ನಡೆಯನ್ನು ನೋಡಿ, “ಅವರು ಕೇವಲ ದೊಡ್ಡ ಹಿಟ್ಟರ್ ಮಾತ್ರವಲ್ಲ, ಮೈದಾನದಲ್ಲಿ ಎಂಟರ್ಟೈನರ್ ಕೂಡ ಹೌದು” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಂದು ವರ್ಗದ ನೆಟ್ಟಿಗರು, ಟಿಮ್ ಡೇವಿಡ್ ಅವರ ನಡೆಯನ್ನು ತುಸು ಗಂಭೀರವಾಗಿ ಪರಿಗಣಿಸಿದ್ದಾರೆ. “ಅಂಪೈರ್‌ಗಳು ಮೈದಾನದ ನ್ಯಾಯಾಧೀಶರಿದ್ದಂತೆ. ಅವರ ಕೆಲಸಕ್ಕೆ ಅಡ್ಡಿಪಡಿಸುವುದು ಅಥವಾ ಅವರಲ್ಲಿ ಅಸಮಾಧಾನ ಮೂಡಿಸುವುದು ಸರಿಯಲ್ಲ,” ಎಂದು ಕೆಲವರು ವಾದಿಸಿದ್ದಾರೆ.

ಪಂದ್ಯದ ನಿರ್ಣಾಯಕ ಹಂತದಲ್ಲಿ ಇಂತಹ ಚೇಷ್ಟೆಗಳಿಂದ ಸಮಯ ವ್ಯರ್ಥವಾಗುತ್ತದೆ ಮತ್ತು ಆಟದ ಗಂಭೀರತೆ ಕಡಿಮೆಯಾಗುತ್ತದೆ ಎಂಬ ಟೀಕೆಗಳೂ ಕೇಳಿಬಂದಿವೆ. ಇನ್ನೂ ರೋಹಿತ್ ಶರ್ಮಾ ಅವರು ಕೂಡ ಈ ಸಂದರ್ಭದಲ್ಲಿ ನಗುತ್ತಾ ಈ ತಮಾಷೆಯಲ್ಲಿ ಭಾಗಿಯಾಗಿದ್ದನ್ನು ನೋಡಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. “ಸೋಲು-ಗೆಲುವಿನ ಆಚೆಗೂ ಆಟಗಾರರ ನಡುವಿನ ಸ್ನೇಹ ಮತ್ತು ಮೈದಾನದ ವಾತಾವರಣ ಆಹ್ಲಾದಕರವಾಗಿರುವುದು ಮುಖ್ಯ” ಎಂಬುದು ಹಲವರ ಅಭಿಪ್ರಾಯ. ಒಟ್ಟಿನಲ್ಲಿ ಕೆಲವರಿಗೆ ಇದು ಮನರಂಜನೆಯಾಗಿ ಕಂಡರೆ, ಇನ್ನು ಕೆಲವರಿಗೆ ಆಟದ ಶಿಸ್ತಿನ ದೃಷ್ಟಿಯಿಂದ ಇದು ಅನಗತ್ಯ ಎನಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/tim-david-funny-ball-incident-with-umpire-goes-viral-during-rcb-vs-mi-ipl-2026-clash-in-wankhede-450299.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo