Jana Nayagan: ‘ಜನ ನಾಯಗನ್’ ಸಿನಿಮಾ ಸೋರಿಕೆ ಪ್ರಕರಣ: ಆರು ಮಂದಿ ಕಿಡಿಗೇಡಿಗಳ ಬಂಧನ, 300ಕ್ಕೂ ಹೆಚ್ಚು ಲಿಂಕ್‌ ಬ್ಲಾಕ್ | Jana nayagan Thalapathy Vijay Movie Piracy Crackdown Tamil Nadu Police Arrest Six Accused

Entertainment

oi-Manohara M

ತಮಿಳು ನಟ ದಳಪತಿ ವಿಜಯ್‌ ನಟನೆಯ ಬಹುನಿರೀಕ್ಷಿತ ‘ಜನನಾಯಗನ್’ ಚಲನಚಿತ್ರವು ಬಿಡುಗಡೆಗೂ ಮುನ್ನವೇ ಅಂತರ್ಜಾಲದಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಭಾರಿ ಆಘಾತ ನೀಡಿದೆ. ಈ ಪೈರಸಿ ವಿರುದ್ಧ ಭಾರತೀಯ ಚಿತ್ರರಂಗದ ಮೇರುನಟರು ಕೂಡ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾದ ತಮಿಳುನಾಡು ಸೈಬರ್ ಕ್ರೈಂ ವಿಭಾಗದ ಪೊಲೀಸರು, ಪೈರಸಿ ದಂಧೆಯಲ್ಲಿ ತೊಡಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾ ಲೀಕ್‌ ಆಗಿದ್ದು ಹೇಗೆ?

ಕ್ಲೌಡ್ ಸ್ಟೋರೇಜ್ ಮತ್ತು ವಿವಿಧ ಲಿಂಕ್ ಶೇರಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಿನಿಮಾವನ್ನು ಅಕ್ರಮವಾಗಿ ಹಂಚಿಕೆ ಮಾಡುತ್ತಿದ್ದ ಆರೋಪದ ಮೇಲೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಇವರಿಂದ ಪೈರಸಿಗೆ ಬಳಸಲಾಗಿದ್ದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ಡಿಜಿಟಲ್ ಉಪಕರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Jana Nayagan

300ಕ್ಕೂ ಹೆಚ್ಚು ಲಿಂಕ್‌ ಪತ್ತೆ

ಸಿನಿಮಾವನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿದ್ದ 300ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಪೊಲೀಸರು ಈಗಾಗಲೇ ಪತ್ತೆಹಚ್ಚಿ ಬ್ಲಾಕ್ ಮಾಡಿದ್ದಾರೆ. ಟೆಲಿಗ್ರಾಂ, ವೆಬ್‌ಸೈಟ್‌ಗಳು ಮತ್ತು ಫೈಲ್ ಶೇರಿಂಗ್ ಸೇವೆಗಳ ಮೇಲೆ ಸೈಬರ್ ತಂಡವು ಹದ್ದಿನ ಕಣ್ಣಿಟ್ಟಿದೆ. ಬಂಧಿತರ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), ಹಕ್ಕುಸ್ವಾಮ್ಯ ಕಾಯ್ದೆ (Copyright Act) ಮತ್ತು ಸಿನೆಮಾಟೋಗ್ರಾಫ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದೊಡ್ಡ ಪೈರಸಿ ನೆಟ್‌ವರ್ಕ್

ಕೇವಲ ಈ ಆರು ಜನರಷ್ಟೇ ಅಲ್ಲದೆ, ಇದರ ಹಿಂದೆ ಇರುವ ದೊಡ್ಡ ಪೈರಸಿ ನೆಟ್‌ವರ್ಕ್ ಅನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆಯನ್ನು ವಿಸ್ತರಿಸಿದ್ದಾರೆ. ವಿದೇಶಿ ಸರ್ವರ್‌ಗಳ ಮೂಲಕ ಸಿನಿಮಾ ಹಂಚಿಕೆಯಾಗುತ್ತಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸೈಬರ್ ವಿಭಾಗದ ತಂಡಗಳು ನಿರಂತರವಾಗಿ ಸಾಮಾಜಿಕ ಜಾಲತಾಣಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಹೊಸದಾಗಿ ಲಿಂಕ್‌ಗಳು ಕಾಣಿಸಿಕೊಂಡ ತಕ್ಷಣ ಅವುಗಳನ್ನು ಡಿಲೀಟ್ ಮಾಡಿಸುತ್ತಿವೆ.

ಡೌನ್‌ಲೋಡ್ ಮಾಡುವವರ ಮೇಲೂ ಕ್ರಮ

ಪೈರಸಿ ಕೇವಲ ಸಿನಿಮಾ ನಿರ್ಮಾಪಕರಿಗೆ ನಷ್ಟ ಉಂಟುಮಾಡುವುದಲ್ಲದೆ, ಅದನ್ನು ಹಂಚುವುದು ಅಥವಾ ಡೌನ್‌ಲೋಡ್ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ. ಅಕ್ರಮವಾಗಿ ಸಿನಿಮಾವನ್ನು ಹಂಚುವವರ ವಿರುದ್ಧ ಮಾತ್ರವಲ್ಲದೆ, ಪೈರಸಿ ಕಂಟೆಂಟ್ ಡೌನ್‌ಲೋಡ್ ಮಾಡುವವರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸಾರ್ವಜನಿಕರು ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ ವೀಕ್ಷಿಸುವಂತೆ ಮತ್ತು ಪೈರಸಿ ಲಿಂಕ್‌ಗಳು ಕಂಡುಬಂದಲ್ಲಿ ಕೂಡಲೇ ದೂರು ನೀಡುವಂತೆ ಮನವಿ ಮಾಡಲಾಗಿದೆ.

ತಮಿಳುನಾಡು ಪೊಲೀಸರ ಈ ತ್ವರಿತ ಕ್ರಮವು ಪೈರಸಿ ದಂಧೆಕೋರರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಇಡೀ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಸೈಬರ್ ಕ್ರೈಮ್ ವಿಭಾಗ ಮುಂದಾಗಿದೆ.

ಪೈರಸಿ ವಿರುದ್ಧ ದೂರು ನೀಡುವುದು ಹೇಗೆ?

ಸಿನಿಮಾ ಪೈರಸಿ ಅಥವಾ ಅಕ್ರಮವಾಗಿ ಚಲನಚಿತ್ರಗಳನ್ನು ಹಂಚಿಕೆ ಮಾಡುವವರ ವಿರುದ್ಧ ಸರ್ಕಾರ ಮತ್ತು ಸೈಬರ್ ಕ್ರೈಂ ವಿಭಾಗವು ಸಮರ ಸಾರಿದೆ. ಸಾಮಾಜಿಕ ಜಾಲತಾಣಗಳು, ವಾಟ್ಸಾಪ್‌, ಟೆಲಿಗ್ರಾಂ ಆ್ಯಪ್‌ಗಳು ಅಥವಾ ವೆಬ್‌ಸೈಟ್‌ಗಳ ಮೂಲಕ ಪೈರಸಿ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಹಂಚುವ ಅಥವಾ ಉತ್ತೇಜಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಪೈರಸಿಗೆ ಸಂಬಂಧಿಸಿದ ಯಾವುದೇ ಅಕ್ರಮ ಚಟುವಟಿಕೆಗಳು ಅಥವಾ ಅನುಮಾನಾಸ್ಪದ ಲಿಂಕ್‌ಗಳು ಕಂಡುಬಂದಲ್ಲಿ ಕೂಡಲೇ ವರದಿ ಮಾಡುವಂತೆ ಸಾರ್ವಜನಿಕರಿಗೆ ವಿನಂತಿಸಲಾಗಿದೆ. ದೂರು ದಾಖಲಿಸಲು ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್: www.cybercrime.gov.in ಅಥವಾ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ: 1930ಕ್ಕೆ ಕರೆ ಮಾಡುವಂತೆ ಸೂಚಿಸಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/jana-nayagan-thalapathy-vijay-movie-piracy-crackdown-tamil-nadu-police-arrest-six-accused-450297.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo