
Entertainment
oi-Manohara M
ಸ್ಯಾಂಡಲ್ವುಡ್ ನಟ ನಿರಂಜನ್ ಅವರ ಮೇಲೆ ಬೆಂಗಳೂರಿನ ಬಾರ್ವೊಂದರಲ್ಲಿ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ನಟ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾರ್ಚ್ 28ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಒಡೆಯ” ಸಿನಿಮಾದಲ್ಲಿ ಅವರ ತಮ್ಮನ ಪಾತ್ರದಲ್ಲಿ ನಿರಂಜನ್ ನಟಿಸಿದ್ದರು.
ಘಟನೆಯ ವಿವರ
ನಟ ನಿರಂಜನ್ ಅವರು ತಮ್ಮ ಸ್ನೇಹಿತನ ಮನೆಯಿಂದ ವಾಪಸ್ ಬರುತ್ತಿದ್ದಾಗ, ಉತ್ತರಹಳ್ಳಿ ರಸ್ತೆಯ ಸಮೀಪವಿರುವ ಬಾರ್ವೊಂದರಲ್ಲಿ ನೀರು ಕುಡಿಯಲು ನಿಂತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ನಟನಿಗೆ ತಳ್ಳಿದ್ದಾರೆ ಎನ್ನಲಾಗಿದೆ. ಇದನ್ನು ನಿರಂಜನ್ ಅವರು ಪ್ರಶ್ನಿಸಿದಾಗ, ಆ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಗಲಾಟೆಯ ಕುರಿತು ನಿರಂಜನ್ ಅವರು ಬಾರ್ ಮಾಲೀಕರಿಗೆ ದೂರು ನೀಡುತ್ತಿದ್ದಂತೆ, ಸ್ಥಳಕ್ಕೆ ಕಾರಿನಲ್ಲಿ ಬಂದ ನಾಲ್ವರು ವ್ಯಕ್ತಿಗಳ ಗುಂಪು ನಟನೊಂದಿಗೆ ಜಗಳ ತೆಗೆದಿದೆ.

ಸಿನಿಮಾ ನಟನಾದ್ರೆ ನಮಗೇನು?
ವಾಗ್ವಾದ ವಿಕೋಪಕ್ಕೆ ತಿರುಗಿದಾಗ, ಇಬ್ಬರು ವ್ಯಕ್ತಿಗಳು ಬಿಯರ್ ಬಾಟಲಿಗಳಿಂದ ನಿರಂಜನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಯಿಂದಾಗಿ ನಿರಂಜನ್ ಅವರ ತಲೆಗೆ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ. ಉಳಿದವರು ಕೈಗಳಿಂದ ನಟನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ಈ ಗಲಾಟೆ ನಂತರ ವಿಕೋಪಕ್ಕೆ ತಿರುಗಿದೆ.
ಅಪರಿಚಿತ ವ್ಯಕ್ತಿಗಳು ನಿರಂಜನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, “ನೀನು ಸಿನಿಮಾ ನಟನಾಗಿದ್ದರೆ ನಮಗೇನು? ಇದು ನಮ್ಮ ಏರಿಯಾ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ನಡುವೆ ಇನ್ನೋವಾ ಕಾರಿನಲ್ಲಿ ಬಂದ ಮೂರ್ನಾಲ್ಕು ವ್ಯಕ್ತಿಗಳ ಗುಂಪು ನಟನ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದೆ. ಈ ದಾಳಿಯಲ್ಲಿ ನಿರಂಜನ್ ಅವರ ತಲೆಗೆ ಗಾಯವಾಗಿದ್ದು, ಅವರ ವಾಚ್ ಕೂಡ ಕಳೆದುಹೋಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನಿರಂಜನ್ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೆ ಎಫ್ಐಆರ್ (FIR) ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ. ಇದು ಆಕಸ್ಮಿಕವಾಗಿ ನಡೆದ ಗಲಾಟೆಯೋ ಅಥವಾ ಪೂರ್ವನಿಯೋಜಿತ ಕೃತ್ಯವೋ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಈಗಾಗಲೇ ಆರೋಪಿಗಳನ್ನು ಗುರುತಿಸಿರುವ ಪೊಲೀಸರು, ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಯಾರು ಈ ನಿರಂಜನ್?
ನಿರಂಜನ್ ಅವರು ‘ಜಲ್ಸಾ’ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾದವರು. ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಚಿತ್ರದಲ್ಲಿ ದರ್ಶನ್ ಅವರ ನಾಲ್ವರು ಸಹೋದರರಲ್ಲಿ ಒಬ್ಬರಾಗಿ ನಟಿಸಿ ಗಮನ ಸೆಳೆದಿದ್ದರು. ಇತ್ತೀಚೆಗೆ ‘ಬಡವ ರಾಸ್ಕಲ್’ ಮತ್ತು ‘ಹೆಡ್ ಬುಷ್’ ಚಿತ್ರಗಳಲ್ಲೂ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಉದಯೋನ್ಮುಖ ನಟರಾಗಿ ಗುರುತಿಸಿಕೊಂಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/darshan-odeya-movie-co-actor-niranjan-injured-attacked-with-beer-bottles-in-bengaluru-bar-fir-filed-449555.html. xn--babytilbehr-pgb.com does not claim ownership of this content. All rights remain with the original publisher.
