Air Ambulance Crash: ಜಾರ್ಖಂಡ್‌ನಲ್ಲಿ ಏರ್ ಆಂಬ್ಯುಲೆನ್ಸ್ ಪತನ; ರೋಗಿ ಸೇರಿ ಏಳು ಮಂದಿ ದುರ್ಮರಣ | Air Ambulance Crash in Jharkhand 7 Dead Including Patient on Way to Delhi DGCA investigation

India

oi-Manohara M

ರಾಂಚಿ: ಜಾರ್ಖಂಡ್‌ನಿಂದ ದೆಹಲಿಗೆ ರೋಗಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ವಿಮಾನವೊಂದು ಸೋಮವಾರ ರಾತ್ರಿ ಭೀಕರ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರೆಡ್‌ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ಈ ವಿಮಾನವು ಸೋಮವಾರ ಸಂಜೆ 7:11ಕ್ಕೆ ರಾಂಚಿಯಿಂದ ಟೇಕ್ ಆಫ್ ಆಗಿತ್ತು. ಆದರೆ, ಸಂಜೆ 7:34ರ ಸುಮಾರಿಗೆ ಕೋಲ್ಕತ್ತಾದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿತು.

ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಚಾತ್ರ ಜಿಲ್ಲೆಯ ಸಿಮರಿಯಾ ಬ್ಲಾಕ್‌ನ ಕರ್ಮಟಾಂಡ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಅಪಘಾತ ಸಂಭವಿಸಿರುವುದು ದೃಢಪಟ್ಟಿದೆ. ಸ್ಥಳೀಯ ಗ್ರಾಮಸ್ಥರ ಪ್ರಕಾರ, ಆಕಾಶದಿಂದ ಏನೋ ವಸ್ತು ಬೀಳುವಾಗ ಭಾರಿ ಸ್ಫೋಟದ ಶಬ್ದ ಕೇಳಿಬಂದಿದೆ. ಕೂಡಲೇ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಜಿಲ್ಲಾಡಳಿತ, ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

Air Ambulance Crash

ದೆಹಲಿಗೆ ಹೊರಟಿದ್ದ ಏರ್ ಆಂಬುಲೆನ್ಸ್‌

ಮೃತರನ್ನು ಪೈಲಟ್‌ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವರಾಜದೀಪ್ ಸಿಂಗ್, ವೈದ್ಯ ಡಾ.ವಿಕಾಶ್ ಕುಮಾರ್ ಗುಪ್ತಾ, ಪ್ಯಾರಾಮೆಡಿಕ್ ಸಚಿನ್ ಕುಮಾರ್ ಮಿಶ್ರಾ, ಸುಟ್ಟ ಗಾಯಗಳಿಂದ ಬಳಲುತ್ತಿದ್ದ ರೋಗಿ ಸಂಜಯ್ ಕುಮಾರ್ ಮತ್ತು ಅವರ ಸಂಬಂಧಿಕರಾದ ಅರ್ಚನಾ ದೇವಿ ಹಾಗೂ ಧುರು ಕುಮಾರ್ ಎಂದು ಗುರುತಿಸಲಾಗಿದೆ. ರೋಗಿ ಸಂಜಯ್ ಕುಮಾರ್ ಅವರನ್ನು ರಾಂಚಿಯ ದೇವಕಮಲ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಏರ್ ಲಿಫ್ಟ್ ಮಾಡಲಾಗುತ್ತಿತ್ತು. ಸದ್ಯ ದಟ್ಟ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ನೀಡಿರುವ ಹೇಳಿಕೆಯ ಪ್ರಕಾರ, VT-AJV ನೋಂದಣಿ ಸಂಖ್ಯೆಯ ಬೀಚ್‌ಕ್ರಾಫ್ಟ್ C90 (Beechcraft C90) ವಿಮಾನವು ರಾತ್ರಿ 7:11ಕ್ಕೆ ರಾಂಚಿಯಿಂದ ಹೊರಟಿತ್ತು. ಕೋಲ್ಕತ್ತಾ ಎಟಿಸಿ ಜೊತೆ ಸಂಪರ್ಕ ಸಾಧಿಸಿದ ನಂತರ, ರಾತ್ರಿ 7:34ರ ಸುಮಾರಿಗೆ ವಾರಣಾಸಿಯಿಂದ ಸುಮಾರು 100 ನಾಟಿಕಲ್ ಮೈಲಿ ಆಗ್ನೇಯ ದಿಕ್ಕಿನಲ್ಲಿ ವಿಮಾನವು ರಾಡಾರ್ ಮತ್ತು ಸಂವಹನ ಸಂಪರ್ಕವನ್ನು ಕಳೆದುಕೊಂಡಿತು. ಬಳಿಕ ರಾತ್ರಿ 10 ಗಂಟೆಯ ವೇಳೆಗೆ ಚಾತ್ರ ಜಿಲ್ಲೆಯ ಸಿಮರಿಯಾ ಬ್ಲಾಕ್‌ನ ಕರ್ಮಟಾಂಡ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ಅಪಘಾತ ಸಂಭವಿಸಿರುವುದು ದೃಢಪಟ್ಟಿದೆ.

ತನಿಖೆಗೆ ಆದೇಶಿಸಿದ ಡಿಜಿಸಿಎ

ಅಪಘಾತಕ್ಕೀಡಾದ ವಿಮಾನದಲ್ಲಿದ್ದ 41 ವರ್ಷದ ರೋಗಿ ಸಂಜಯ್ ಕುಮಾರ್ ಅವರು ಅಪಘಾತವೊಂದರಲ್ಲಿ ಶೇ.63ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ರಾಂಚಿಯ ದೇವಕಮಲ್ ಆಸ್ಪತ್ರೆಯ ಐಸಿಯು (ICU) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ದೆಹಲಿಗೆ ಏರ್ ಲಿಫ್ಟ್ ಮಾಡಲಾಗುತ್ತಿತ್ತು. ವಿಮಾನದಲ್ಲಿದ್ದ ಇತರ ಮೃತರನ್ನು ಪೈಲಟ್‌ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವರಾಜದೀಪ್ ಸಿಂಗ್, ವೈದ್ಯ ಡಾ. ವಿಕಾಶ್ ಕುಮಾರ್ ಗುಪ್ತಾ, ಪ್ಯಾರಾಮೆಡಿಕ್ ಸಚಿನ್ ಕುಮಾರ್ ಮಿಶ್ರಾ ಮತ್ತು ರೋಗಿಯ ಸಂಬಂಧಿಕರಾದ ಅರ್ಚನಾ ದೇವಿ ಹಾಗೂ ಧುರು ಕುಮಾರ್ ಕೂಡ ಜೊತೆಗೆ ಪ್ರಯಾಣ ಬೆಳೆಸಿದ್ದರು. ಘಟನೆಯ ಬಗ್ಗೆ ತನಿಖೆ ನಡೆಸಲು ವಿಮಾನ ಅಪಘಾತ ತನಿಖಾ ಸಂಸ್ಥೆಯ (AAIB) ತಂಡವನ್ನು ಕೂಡ ರವಾನಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

ಜೀವ ಉಳಿಸುವ ಭರವಸೆಯೊಂದಿಗೆ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ಏರ್ ಅಂಬ್ಯುಲೆನ್ಸ್ ಈ ರೀತಿ ದುರಂತ ಅಂತ್ಯ ಕಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/air-ambulance-crash-in-jharkhand-7-dead-including-patient-on-way-to-delhi-dgca-investigation-444867.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo