Asha Bhosle: ಸಂಗೀತ ಜಗತ್ತಿಗೆ ಆಶಾ ಭೋಸ್ಲೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ | Tributes Pour In for Asha Bhosle, Leaders Included PM Modi Hail Her Immense Contribution to Music

India

oi-Shankrappa Parangi

Asha Bhosle Tributes: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದು, ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದ ಮುಂಬೈನ ಬ್ರೀಚ್ ಸ್ಯಾಂಡಿ ಆಸ್ಪತ್ರೆಯತ್ತ ಅಭಿಮಾನಿಗಳು, ಆಪ್ತರು ಧಾವಿಸುತ್ತಿದ್ದಾರೆ. ದೇಶವ್ಯಾಪಿ ಅಪಾರ ಅಭಿಮಾನಿಗಳನ್ನು ಅವರ ಅಗಲಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಕರ್ನಾಟಕ ಒಳಗೊಂಡಂತೆ ರಾಜಕಾರಣಿಗಳು, ಇತರ ಕ್ಷೇತ್ರ ಗಣ್ಯರು, ಕಲಾವಿದರು ಕಂಬನಿ ಮಿಡಿದಿದ್ದಾರೆ. ಸಂಗೀತ ಜಗತ್ತಿಗೆ ಆಶಾ ಅವರು ನೀಡಿದ ಕೊಡುಗೆಯನ್ನು ಈ ಕ್ಷಣದಲ್ಲಿ ಸ್ಮರಿಸುತ್ತಿದ್ದಾರೆ.

ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಎಕ್ಸ್ ಪೋಸ್ಟ್ ಮಾಡಿ, ಆಶಾ ಭೋಸ್ಲೆ ಅವರನ್ನು ನೆನೆದಿದ್ದಾರೆ. ‘ಭಾರತೀಯ ಸಂಗೀತದ ಪೀಳಿಗೆಯ ವ್ಯಾಖ್ಯಾನ ಮಾಡಿದ ಅತ್ಯುನ್ನತ ದಂತಕಥೆ ಶ್ರೀಮತಿ ಆಶಾ ಭೋಸ್ಲೆ ಅವರು ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು’ ಮಧುರ ಮತ್ತು ಅಸಾಧಾರಣ ಬಹುಮುಖ ಪ್ರತಿಭೆಯಿಂದ ಗುರುತಿಸಲ್ಪಟ್ಟ ಅವರು ಸಂಗೀತ ಜಗತ್ತಿಗೆ ಅವರ ಅಪ್ರತಿಮ ಕೊಡುಗೆ ನೀಡಿದ್ದಾರೆ. ಇವರು ಕಲಾವಿದರು ಮತ್ತು ಪ್ರೇಕ್ಷಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಇಡೀ ಸಂಗೀತ ರಂಗಕ್ಕೆ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಾರ್ಥಿಸಿದ್ದಾರೆ.

Tributes Asha Bhosle

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.
ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಭಾವಪೂರ್ಣ ಧ್ವನಿ ತಲೆಮಾರುಗಳನ್ನು ಮೀರಿದ ಭಾರತದ ಸಂಗೀತದ ಅವಿಭಾಜ್ಯ ಅಂಗವೇ ಆಗಿತ್ತು. ಭಾರತೀಯ ಸಿನಿಮಾ ಮತ್ತು ಸಂಗೀತದಲ್ಲಿ ಅವರ ಅಸಾಧಾರಣ ಪರಂಪರೆ ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತದೆ. ಅವರ ಕುಟುಂಬ, ಅಭಿಮಾನಿಗಳು ದುಃಖ ತಡೆದುಕೊಳ್ಳುವ ಶಕ್ತಿ ಕರಣಿಸಲಿ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತ ಕಂಡ ಅಪರೂಪದ ಧ್ವನಿ: ಪ್ರಧಾನಿ ಮೋದಿ ಸಂತಾಪ

ಪ್ರಧಾನಿ ನರೇಂದ್ರ ಮೋದಿಯವರು, ‘ಭಾರತ ಕಂಡ ಅತ್ಯಂತ ಅತೀ ಅಪರೂಪದ ಮತ್ತು ಬಹುಮುಖ ಪ್ರತಿಭೆಯ ಧ್ವನಿಗಳಲ್ಲಿ ಒಬ್ಬರಾದ ಆಶಾ ಭೋಸ್ಲೆ ಜಿ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ದಶಕಗಳ ಕಾಲದ ಅವರ ಅಸಾಧಾರಣ ಸಂಗೀತ ಪ್ರಯಾಣವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ವಿಶ್ವದಾದ್ಯಂತ ಲೆಕ್ಕವಿಲ್ಲದಷ್ಟು ಹೃದಯಗಳನ್ನು ಅವರು ತಲುಪಿದ್ದಾರೆ. ಅದು ಅವರ ಭಾವಪೂರ್ಣ ಮಧುರ ಕಂಠಕ್ಕಿರುವ ಶಕ್ತಿಯಾಗಿದೆ. ಅವರ ಧ್ವನಿಯು ಕಾಲಾತೀತ ತೇಜಸ್ಸನ್ನು ಹೊಂದಿತ್ತು. ನಾನು ಅವರೊಂದಿಗೆ ನಡೆಸಿದ ಸಂವಹನವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ.’

‘ಆಶಾ ಭೋಸ್ಲೆ ಅವರ ಕುಟುಂಬ, ಅಭಿಮಾನಿಗಳು ಮತ್ತು ಸಂಗೀತ ಪ್ರಿಯರಿಗೆ ನನ್ನ ಸಂತಾಪಗಳು. ಅವರು ಇಂದಿನ ಪೀಳಿಗೆಗೆ ಸದಾ ಸ್ಫೂರ್ತಿಯಾಗಿರುತ್ತಾರೆ. ಅವರ ಹಾಡುಗಳು ಜನರ ಜೀವನದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತವೆ’ ಎಂದು ಪ್ರಧಾನಿ ತಿಳಿಸಿದ್ದಾರೆ.

ದಶಕಗಳ ಕಾಲ ರಂಜಿಸಿದ ಗಾಯಕಿ: ಬೊಮ್ಮಾಯಿ ಕಂಬನಿ

ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಸುದ್ದಿ ಮನಸ್ಸಿಗೆ ಅತ್ಯಂತ ನೋವಿನ ಸಂಗತಿಯಾಗಿದೆ. ತಮ್ಮ ಸುಮಧುರ ಕಂಠದಿಂದ ಅನೇಕ ದಶಕಗಳ ಕಾಲ ಸಂಗೀತ ಪ್ರಿಯರ ಮನಸ್ಸುಗಳನ್ನು ಗೆದ್ದ ಅವರು, ಹಾಡಿದ ನೂರಾರು ಅಮರ ಗೀತೆಗಳು ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ

ಈ ಕುರಿತು ಎಕ್ಸ್ ಮಾಡಿರುವ ಅವರು, ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ, ಭಾರತೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಅವರು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅವರ ಅಗಲಿಕೆಯಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಇಡೀ ವಿಶ್ವವೇ ಒಬ್ಬ ಮಹಾನ್ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/tributes-pour-in-for-asha-bhosle-leaders-included-pm-modi-hail-her-immense-contribution-to-music-450195.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo