BPL Card: ಪಡಿತರ ಚೀಟಿ ನಿಯಮ ಪರಿಷ್ಕರಣೆ: ಆದಾಯ ಮಿತಿ ಹೆಚ್ಚಿಸಲು ಸರ್ಕಾರ ಗಂಭೀರ ಚಿಂತನೆ | Karnataka BPL Card Income Limit May Increase to ₹3 Lakh: Minister Dinesh Gundu Rao in Assembly

Karnataka

oi-Shankrappa Parangi

ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ನಕಲಿ ಪಡಿತರ ಚೀಟಿ ಪತ್ತೆ, ನಕಲಿ ದಾಖಲಾತಿ ನೀಡಿ ರೇಷನ್ ಕಾರ್ಡ್ ಪಡೆದವರ ಪತ್ತೆ ನಡೆಸಿತ್ತು. ಎಪಿಎಲ್, ಬಿಪಿಎಲ್ ಕಾರ್ಡ್‌ಗೆ ಸಂಬಂಧಿಸಿದಂತೆ ಅಕ್ರಮ ತಡೆಗೆ ಮುಂದಾಗಿತ್ತು. ಇದೀಗ ಪಡಿತರ ಚೀಟಿಗಳನ್ನು (PHH/BPL) ಪಡೆಯಲು ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಯಾರೆಲ್ಲ ವಾರ್ಷಿಕ ಆದಾಯ ಕಡಿಮೆ ತೋರಿಸಿ ಪಡಿತರ ಪಡೆದಿದ್ದಾರೋ ಅವರಿಗೆಲ್ಲ ಸಂಕಷ್ಟು ಎದುರಾಗುವ ನಿರೀಕ್ಷೆ ಇದೆ.

ಬಜೆಟ್‌ ಮೇಲಿನ ವಿಧಾನಸಭೆ ಕಲಾಪದಲ್ಲಿ ಗುರುವಾರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಪಡಿತರ ಚೀಟಿ ಪಡೆಯಲು ಆದಾಯ ಮಿತಿ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಆದಾಯ ಮಿತಿ 3 ಲಕ್ಷ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಅನೇಕರ ಪಡಿತರ ಚೀಟಿ ಈ ನಿಯಮದಿಂದ ಬಚಾವ್ ಆಗುತ್ತಾ? ಇಲ್ಲವಾ ಎಂಬುದು ಶೀಘ್ರವೇ ಗೊತ್ತಾಗಲಿದೆ.

Karnataka BPL Card

ಕಲಾಪದಲ್ಲಿ ಮಲ್ಲೇಶ್ವರಂ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪಡಿತರ ಚೀಟಿ ಪಡೆಯಲು ಇರಬೇಕಾದ ಅರ್ಹತೆ ಪೈಕಿ ಅದಾಯ ಮಿತಿಯೂ ಒಂದು. ಅದನ್ನು ಹೆಚ್ಚಿಸುವ ಚಿಂತನೆ ಇದೆ. ಸರ್ಕಾರ ಅದನ್ನು ಗಂಭೀರವಾಗಿ ಆಲೋಚಿಸುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಜಾರಿಯಲ್ಲಿರುವ 1.2 ಲಕ್ಷ ರೂಪಾಯಿಗಳ ಆದಾಯ ಮಿತಿಯನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸುವ ಅಗತ್ಯವಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈಗಿನ ಆದಾಯ ಮಿತಿಯನ್ನು 2017ರಲ್ಲಿ ನಿಗದಿಪಡಿಸಲಾಗಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ ಜೀವನ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಆದಾಯ ಮಿತಿ ಹೆಚ್ಚಳಕ್ಕೆ ಆಯೋಗ ಶಿಫಾರಸು

ಹಿರಿಯ ಶಾಸಕ ಆ‌ರ್.ವಿ. ದೇಶಪಾಂಡೆ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಈ ಮಿತಿಯನ್ನು 3 ಲಕ್ಷ ರೂಪಾಯಿಗಳಿಗೆ ಏರಿಸಲು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ದಿನೇಶ್ ಗುಂಡೂರಾವ್ ಅವರು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರ ಪರವಾಗಿ ಸದನಕ್ಕೆ ಮಾಹಿತಿ ನೀಡಿದರು.

ಬೆಂಗಳೂರಿನಂತಹ ನಗರಗಳಲ್ಲಿ ಜೀವನ ನಿರ್ವಹಣಾ ವೆಚ್ಚ ಅಧಿಕವಾಗಿರುವುದರಿಂದ ಆದಾಯದ ಮಿತಿಯನ್ನು ಹೆಚ್ಚಿಸಲೇಬೇಕು ಎಂದು ಅಶ್ವತ್ಥ ನಾರಾಯಣ್ ಆಗ್ರಹಿಸಿದರು. ಆಹಾರ ಭದ್ರತಾ ಕಾಯಿದೆಯಡಿ ಶೇ. 50ರಷ್ಟು ನಗರ ಜನಸಂಖ್ಯೆಗೆ ಪಡಿತರ ಚೀಟಿ ಸಿಗಬೇಕು ಎಂಬ ಅವರ ವಾದಕ್ಕೆ ಸಚಿವರು ಪ್ರತಿಕ್ರಿಯಿಸಿದರು. ಈ ನಿಯಮವು ಇಡೀ ದೇಶಕ್ಕೆ ಅನ್ವಯಿಸುತ್ತದೆಯೇ ಹೊರತು ರಾಜ್ಯವಾರು ಅಲ್ಲ ಎಂದು ಸ್ಪಷ್ಟಪಡಿಸಿದರು.

ಪಡಿತರ ಚೀಟಿ ಇದೊಂದು ಪ್ರಮುಖ ದಾಖಲೆ

ಕರ್ನಾಟಕದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ನಿಗದಿಪಡಿಸಿದ ಮಿತಿಗಿಂತಲೂ ಅಂದರೆ ಸುಮಾರು 15.8 ಲಕ್ಷದಷ್ಟು ಹೆಚ್ಚಿನ ಕುಟುಂಬಗಳಿಗೆ ಪಡಿತರ ಚೀಟಿ ನೀಡಲಾಗಿದೆ. ಪಡಿತರ ಚೀಟಿಯು ಕೇವಲ ಆಹಾರ ಧಾನ್ಯಗಳಿಗಷ್ಟೇ ಸೀಮಿತವಾಗದೆ ಆರೋಗ್ಯ ವಿಮೆ ಸೇರಿದಂತೆ ಹತ್ತಾರು ಸರ್ಕಾರಿ ಸೌಲಭ್ಯಗಳಿಗೆ ಮೂಲ ದಾಖಲೆ ಆಗಿದೆ. ಈ ಕಾರಣದಿಂದಾಗಿ ಅನೇಕ ಅನರ್ಹರು ಕೂಡ ಪಡಿತರ ಚೀಟಿಗಳನ್ನು ಹೊಂದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ಸ್ವತಃ ಸಚಿವರೇ ಬಹಿರಂಗವಾಗಿ ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ಆದಾಯ ಮಿತಿ ಪರಿಷ್ಕರಣೆಯಾದಲ್ಲಿ ಮಧ್ಯಮ ವರ್ಗದ ಅನೇಕ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ದೊರೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಆದಾಯ ಮಿತಿ ನಿಗದಿ ಅಧಿಕೃತ ಆದೇಶ ಹೊರ ಬಿದ್ದ ಬಳಿಕ ಈ ಬಗ್ಗೆ ಸಮೀಕ್ಷೆ ನಡೆದು, ಆದಾಯ ಮಿತಿ ವಿಚಾರದಲ್ಲಿ ಖಚಿತ ಮಾಹಿತಿ ಇಲ್ಲದವರ ಪಡಿತರ ರದ್ದುಗೊಳಿಸುವ ನಿರೀಕ್ಷೆ ಇದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-bpl-card-income-limit-may-increase-to-3-lakh-minister-dinesh-gundu-rao-in-assembly-446867.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo