Cabinet Reshuffle: ಶಾಸಕರ ದೆಹಲಿಗೆ ಭೇಟಿ ತಪ್ಪಿಲ್ಲ, ಸಂಪುಟ ಪುನರ್‌ರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಿದ್ದರಾಮಯ್ಯ | Siddaramaiah on Cabinet Reshuffle Decision Left to High Command amid Delhi visits by Congress MLAs

Karnataka

-Manohara M

ಚಿಕ್ಕಮಗಳೂರು: ರಾಜ್ಯದಲ್ಲಿ ಉಪಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್‌ರಚನೆಯ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. “ಸಂಪುಟ ಪುನರ್‌ರಚನೆಯ ಅಂತಿಮ ನಿರ್ಧಾರ ಹೈಕಮಾಂಡ್ ಕೈಗೊಳ್ಳಲಿದೆ” ಎಂದು ಹೇಳುವ ಮೂಲಕ ಚೆಂಡನ್ನು ಪಕ್ಷದ ವರಿಷ್ಠರ ಅಂಗಳಕ್ಕೆ ಎಸೆದಿದ್ದಾರೆ.

ದೆಹಲಿ ಭೇಟಿ ತಪ್ಪಲ್ಲ

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಹಲವು ಶಾಸಕರು ನವದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಶಾಸಕರು ತಮ್ಮ ಬೇಡಿಕೆಗಳಿಗಾಗಿ ದೆಹಲಿಗೆ ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಯೊಬ್ಬರಿಗೂ ಸಚಿವರಾಗುವ ಆಕಾಂಕ್ಷೆ ಇರುವುದು ಸಹಜ. ಆದರೆ, ಐದು ರಾಜ್ಯಗಳ ಚುನಾವಣೆ ಮತ್ತು ಬಜೆಟ್ ಅಧಿವೇಶನದ ಒತ್ತಡದ ಕಾರಣಗಳಿಂದಾಗಿ ಸಂಪುಟ ಪುನರ್‌ರಚನೆ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿರಬಹುದು” ಎಂದು ಸಮರ್ಥಿಸಿಕೊಂಡರು.

Cabinet Reshuffle

ಉಪಚುನಾವಣೆಯಲ್ಲಿ ಗೆಲುವಿನ ವಿಶ್ವಾಸ

ದಾವಣಗೆರೆ ದಕ್ಷಿಣ ಉಪಚುನಾವಣೆ ಮತ್ತು ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿದ ಸಿಎಂ, ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. “ಸಲೀಂ ಅಹ್ಮದ್ ಅವರು ಪಕ್ಷದ ಹಿರಿಯ ಮುಖಂಡರು. ಅವರು ಉಪಚುನಾವಣೆಯಲ್ಲಿ ಕೆಲವರ ಪಕ್ಷವಿರೋಧಿ ಚಟುವಟಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಹೊರತು, ಪಕ್ಷ ಸೋಲುತ್ತದೆ ಎಂದು ಹೇಳಿಲ್ಲ. ಇಂತಹ ಚಟುವಟಿಕೆಗಳ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವುದು ನಿಶ್ಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ರಾಜೀನಾಮೆ ಸುದ್ದಿಗಳನ್ನು ಅವರು ತಳ್ಳಿಹಾಕಿದರು. ನಸೀರ್ ಅಹ್ಮದ್ ಅವರು ಇದುವರೆಗೆ ರಾಜಿನಾಮೆ ನೀಡಿಲ್ಲ, ನೀಡಬಹುದೇನೋ ಎಂದರು.

ಮಲೆನಾಡಿನ ಅರಣ್ಯವಾಸಿಗಳಿಗೆ ಹಕ್ಕುಪತ್ರ

ಮಲೆನಾಡು ಭಾಗದಲ್ಲಿ ರೆಸಾರ್ಟ್‌ಗಳಿಗೆ ಸುಲಭವಾಗಿ ಅನುಮತಿ ಸಿಗುತ್ತಿದೆ, ಆದರೆ ಅರಣ್ಯವಾಸಿಗಳಿಗೆ ಹಕ್ಕುಪತ್ರ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅರಣ್ಯವಾಸಿಗಳ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸಿ, ಹಕ್ಕುಪತ್ರ ವಿತರಣೆ ಮತ್ತು ಇತರ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎನ್‌.ಆರ್.ಪುರದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣದ ಬಗ್ಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲೇ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ, ಈಗ ಉದ್ಘಾಟನೆಯೂ ಆಗುತ್ತಿರುವುದು ನನಗೆ ತೃಪ್ತಿ ತಂದಿದೆ. ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಈ ಯೋಜನೆಗೆ ಯಾವುದೇ ಗಮನ ನೀಡಿರಲಿಲ್ಲ ಎಂದು ಟೀಕಿಸಿದರು.

ಪ್ರವಾಸಿಗರಿಗೆ ಕರ್ನಾಟಕ ಸುರಕ್ಷಿತ

ಇತ್ತೀಚೆಗೆ ಕೇರಳದ ಬಾಲಕಿ ಚಿಕ್ಕಮಗಳೂರಿನಲ್ಲಿ ಮೃತಪಟ್ಟ ಘಟನೆಯನ್ನು ಮುಂದಿಟ್ಟುಕೊಂಡು ಕೇರಳ ಸರ್ಕಾರ ಕರ್ನಾಟಕದ ಸುರಕ್ಷತೆಯ ಬಗ್ಗೆ ಮಾಡಿರುವ ಟೀಕೆಗೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. “ಕರ್ನಾಟಕ ಪ್ರವಾಸಿಗರಿಗೆ ಅತ್ಯಂತ ಸುರಕ್ಷಿತ ರಾಜ್ಯ. ಬಾಲಕಿಯ ಸಾವು ದುರದೃಷ್ಟಕರ, ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಆದರೆ ಈ ಒಂದು ಘಟನೆಯನ್ನು ಇಟ್ಟುಕೊಂಡು ಇಡೀ ರಾಜ್ಯ ಸುರಕ್ಷಿತವಲ್ಲ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು” ಎಂದು ತಿರುಗೇಟು ನೀಡಿದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/siddaramaiah-on-cabinet-reshuffle-decision-left-to-high-command-amid-delhi-visits-by-congress-mlas-011-450243.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo