
Entertainment
oi-Manohara M
ಕನ್ನಡದ ಖ್ಯಾತ ರ್ಯಾಪರ್ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ಎರಡನೇ ಮದುವೆಯ ಕುರಿತು ಮೊದಲ ಬಾರಿಗೆ ಮುಕ್ತವಾಗಿ ಮನಸು ಬಿಚ್ಚಿ ಮಾತನಾಡಿದ್ದಾರೆ. ನಿವೇದಿತಾ ಗೌಡ ಅವರೊಂದಿಗಿನ ವಿಚ್ಛೇದನದ ನಂತರದ ಜೀವನ ಮತ್ತು ಭವಿಷ್ಯದ ನಿರ್ಧಾರಗಳ ಬಗ್ಗೆ ಅವರು ಇತ್ತೀಚಿನ ಸಂದರ್ಶನದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಬಾಳಸಂಗಾತಿಯ ಅಗತ್ಯ ಮತ್ತು ಒಂಟಿತನದ ಬಗ್ಗೆ ಚಂದನ್ ಶೆಟ್ಟಿ ಅವರು ಆಡಿರುವ ಮಾತುಗಳು ಈಗ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿವೆ.
ಬಾಳಸಂಗಾತಿ ಬೇಕು
ಮದುವೆಯ ಬಗ್ಗೆ ಮಾತನಾಡುತ್ತಾ, “ಜೀವನದಲ್ಲಿ ಒಬ್ಬ ಸಂಗಾತಿ ಬೇಕೇ ಬೇಕು ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಯೌವನದಲ್ಲಿ ನಮ್ಮ ಮೈಯಲ್ಲಿ ಶಕ್ತಿ ಇದ್ದಾಗ ಒಂಟಿತನ ಅಷ್ಟಾಗಿ ತಿಳಿಯುವುದಿಲ್ಲ. ಆದರೆ ವಯಸ್ಸಾದಂತೆ ಒಬ್ಬಂಟಿತನ ಕಾಡಲು ಶುರುವಾದಾಗ ‘ಅಯ್ಯೋ, ತಪ್ಪು ಮಾಡಿದೆನೇ’ ಎಂದು ಕೊರಗಬೇಕಾಗುತ್ತದೆ. ಆ ಸಮಯದಲ್ಲಿ ಸಂಕಟಪಡುವ ಬದಲು, ಈಗಲೇ ಒಂದು ಒಳ್ಳೆಯ ಬಾಳಸಂಗಾತಿಯನ್ನು ಹುಡುಕುವುದು ಉತ್ತಮ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಿರೀಕ್ಷೆಯ ಸಂಗಾತಿ ಸಿಕ್ಕರೂ ತಪ್ಪಲ್ಲ ಪರೀಕ್ಷೆ
ಎಂತಹ ಸಂಗಾತಿ ಬೇಕು ಎಂಬ ಪ್ರಶ್ನೆಗೆ ಚಂದನ್ ಶೆಟ್ಟಿ ವಿಭಿನ್ನವಾಗಿ ಉತ್ತರಿಸಿದ್ದಾರೆ. “ನಾನು ನಿರೀಕ್ಷೆಯ ಬಗ್ಗೆ ಹೇಳಲ್ಲ, ಇದು ಪರೀಕ್ಷೆ ಇದ್ದಂತೆ. ನಮ್ಮ ನಿರೀಕ್ಷೆಗೆ ತಕ್ಕಂತವರು ಸಿಕ್ಕಿದ ಮೇಲೂ ಜೀವನ ಪರೀಕ್ಷೆಯಲ್ಲೇ ಸಾಗುತ್ತದೆ. ಒಬ್ಬರನ್ನೊಬ್ಬರು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಸಂಸಾರ ಅವಲಂಬಿತವಾಗಿರುತ್ತದೆ. ಈ ಬಾರಿ ನಾನು ಯಾವುದೇ ಆತುರ ತೋರದೆ, ಸಾಕಷ್ಟು ಸಮಯ ತೆಗೆದುಕೊಂಡು ನಿಧಾನವಾಗಿ ಯೋಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಮ್ಮ ಎರಡನೇ ಮದುವೆಯ ವಿಚಾರವನ್ನು ಖಚಿತಪಡಿಸಿದ್ದಾರೆ ಚಂದನ್.
ಆ ನೋವು ಈಗ ವಾಸಿಯಾಗಿದೆ
ಡಿವೋರ್ಸ್ ನಂತರದ ಮಾನಸಿಕ ಸ್ಥಿತಿಯ ಬಗ್ಗೆಯೂ ಚಂದನ್ ಮಾತನಾಡಿದ್ದಾರೆ. “ನಾನು ಖಿನ್ನತೆಯಲ್ಲಿ ಇಲ್ಲ. ಜೀವನದಲ್ಲಿ ಒಮ್ಮೆ ಕೆಳಗೆ ಬಿದ್ದಾಗ ಗಾಯವಾಗುವುದು ಸಹಜ, ಆ ಗಾಯದಿಂದ ನೋವಾಗುತ್ತದೆ. ಆ ನೋವು ಮಾಯವಾಗಲು ಸಮಯ ಬೇಕು. ಈಗ ಆ ನೋವು ಸಂಪೂರ್ಣವಾಗಿ ವಾಸಿಯಾಗಿದೆ. ನಾನು ಈಗ ಆರಾಮವಾಗಿದ್ದೇನೆ ಎಂದು ತಮ್ಮ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಚಂದನ್ ಅವರು ತಮ್ಮ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈಗ ನನ್ನ ಸಂಪೂರ್ಣ ಗಮನ ಕೆಲಸದ ಮೇಲಿದೆ. ಸಂಗೀತ ಕ್ಷೇತ್ರದಲ್ಲಿ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಗುರಿ ನನ್ನದಾಗಿದೆ ಎನ್ನುವ ಮೂಲಕ ತಮ್ಮ ಮುಂದಿನ ಸಿನಿಮಾ ಹಾಗೂ ಸಂಗೀತ ಪ್ರಾಜೆಕ್ಟ್ಗಳ ಬಗ್ಗೆ ಸುಳಿವು ನೀಡಿದ್ದಾರೆ.

ಕನ್ನಡದ ‘ಬಿಗ್ ಬಾಸ್’ ರಿಯಾಲಿಟಿ ಶೋ ಮೂಲಕ ಪರಿಚಯವಾಗಿ, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ತಮ್ಮ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದರು. ಚಂದನ್ ಮತ್ತು ನಿವೇದಿತಾ ಇಬ್ಬರೂ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಇವರ ಅರ್ಜಿಯನ್ನು ಪುರಸ್ಕರಿಸಿ, ಕಾನೂನುಬದ್ಧವಾಗಿ ವಿಚ್ಛೇದನ ನೀಡಿತು. ಯಾವುದೇ ದೊಡ್ಡ ಮಟ್ಟದ ಜಗಳ ಅಥವಾ ವಿವಾದಗಳಿಲ್ಲದೆ, ಅತ್ಯಂತ ಶಾಂತಿಯುತವಾಗಿ ಈ ಪ್ರಕ್ರಿಯೆ ನಡೆಯಿತು.
ವೈಯಕ್ತಿಕ ಭಿನ್ನಾಭಿಪ್ರಾಯಗಳು ಮತ್ತು ಜೀವನದ ಗುರಿಗಳು ಬೇರೆಯಾಗಿರುವ ಕಾರಣ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದರು. ಡಿವೋರ್ಸ್ ನಂತರವೂ ಇಬ್ಬರೂ ಒಬ್ಬರ ಬಗ್ಗೆ ಒಬ್ಬರು ಗೌರವವನ್ನು ಉಳಿಸಿಕೊಂಡಿದ್ದಾರೆ. ಈ ಜೋಡಿ ಸದಾ ರೀಲ್ಸ್ ಮತ್ತು ಫೋಟೋಗಳ ಮೂಲಕ ಸಕ್ರಿಯವಾಗಿರುತ್ತಿತ್ತು. ಹೀಗಾಗಿ ಇವರ ವಿಚ್ಛೇದನದ ಸುದ್ದಿ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತ್ತು. ಆದರೂ, ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/chandan-shetty-opens-up-on-second-marriage-after-divorce-says-better-find-a-partner-early-450149.html. xn--babytilbehr-pgb.com does not claim ownership of this content. All rights remain with the original publisher.
