Darshan Help: ದರ್ಶನ್‌ಗೆ ಇದೆಲ್ಲ ಬೇಕಾಗಿರಲಿಲ್ಲ, ಅವ್ರು ಪಟ್ಟ ಕಷ್ಟ ಕಡಿಮೆಯೇನಲ್ಲ: ಖಳನಟ ಕಿಲ್ಲರ್‌ ವೆಂಕಟೇಶ್‌ | Darshan Did not Deserve This Says Killer Venkatesh Recalls Actors Help During Kidney Failure

Entertainment

oi-Manohara M

ಕನ್ನಡ ಚಿತ್ರರಂಗದ ಹಿರಿಯ ಖಳನಟ ಕಿಲ್ಲರ್‌ ವೆಂಕಟೇಶ್‌ ಅವರು ನಟ ದರ್ಶನ್ ತೂಗುದೀಪ ಅವರ ಇತ್ತೀಚಿನ ಸ್ಥಿತಿಯ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಜೈಲು ಸೇರಿರುವ ಹಿನ್ನೆಲೆ ಈ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನಟ ದರ್ಶನ್‌ ಮಾಡಿದ ಸಹಾಯವನ್ನೂ ಕಿಲ್ಲರ್‌ ವೆಂಕಟೇಶ್‌ ನೆನೆದಿದ್ದಾರೆ.

ದರ್ಶನ್‌ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರೊಂದಿಗೆ ತಮಗೆ ಆತ್ಮೀಯ ಸಂಬಂಧವಿತ್ತು ಎಂದು ಕಿಲ್ಲರ್‌ ವೆಂಕಟೇಶ್‌ ಬಿಯಾಂಡ್‌ ಲಿಮಿಟ್ಸ್‌ ಯುಟ್ಯೂಬ್‌ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. “ತೂಗುದೀಪ ಶ್ರೀನಿವಾಸ್‌ ಅವರ ಜೊತೆ ನನಗೆ ಬಹಳ ಹತ್ತಿರದ ನಂಟು ಇತ್ತು. ಆ ಸಂಬಂಧದಿಂದಲೇ ದರ್ಶನ್‌ ಕೂಡ ನನಗೆ ತುಂಬ ಹತ್ತಿರದವರು. ಅವರು ಯಾವಾಗಲೂ ಹಿರಿಯ ಕಲಾವಿದರನ್ನು ಗೌರವದಿಂದ ಮಾತನಾಡಿಸುತ್ತಿದ್ದರು. ಆ ವಿನಯ, ಗೌರವ ನನಗೆ ಇಷ್ಟವಾಗುತ್ತಿತ್ತು” ಎಂದು ಹೇಳಿದ್ದಾರೆ.

Darshan

ದರ್ಶನ್‌ ಸ್ಥಿತಿ ನೋಡಿ ಬೇಜಾರು

ಇತ್ತೀಚಿನ ದಿನಗಳಲ್ಲಿ ದರ್ಶನ್‌ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಕೇಳಿದಾಗ, ವೆಂಕಟೇಶ್‌ ಅವರು ಬೇಸರ ವ್ಯಕ್ತಪಡಿಸಿದರು. “ಅವರ ಇಂದಿನ ಸ್ಥಿತಿ ನೋಡಿ ನನಗೂ ಬೇಜಾರಾಗುತ್ತದೆ. ಇದೆಲ್ಲವೂ ಬೇಕಾಗಿರಲಿಲ್ಲ ಅನ್ನಿಸುತ್ತದೆ. ದರ್ಶನ್‌ ಪಟ್ಟಿದ್ದು ಕಡಿಮೆ ಕಷ್ಟವೇನಲ್ಲ. ಜೀವನದಲ್ಲಿ ಏರಿಳಿತಗಳು ಸಹಜ, ಆದರೆ ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ” ಎಂದು ವೆಂಕಟೇಶ್‌ ಹೇಳಿದ್ದಾರೆ.

ಇದೇ ವೇಳೆ ತಮ್ಮ ಜೀವನದ ಸಂಕಷ್ಟದ ದಿನಗಳನ್ನು ಕೂಡ ಅವರು ನೆನೆದರು. 2020ರಲ್ಲಿ ಕಿಡ್ನಿ ವೈಫಲ್ಯದಿಂದ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ವೆಂಕಟೇಶ್‌ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು. ಆ ಸಮಯದಲ್ಲಿ ನಟ ಜಗ್ಗೇಶ್ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೋರಿದ್ದರು. ಅವರ ಮನವಿಗೆ ಸ್ಪಂದಿಸಿ ದರ್ಶನ್‌ ಅವರು ಒಂದು ಲಕ್ಷ ರೂಪಾಯಿ ನೆರವು ನೀಡಿದ್ದರು ಎಂದು ವೆಂಕಟೇಶ್‌ ತಿಳಿಸಿದ್ದಾರೆ.

“ಆ ಕಷ್ಟದ ಸಮಯದಲ್ಲಿ ಅನೇಕರು ಸಹಾಯ ಮಾಡಿದ್ದಾರೆ. ದರ್ಶನ್‌ ಕೂಡ ನನಗೆ ನೆರವಾದರು. ಆ ಉಪಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈಗ ಅವರ ಸ್ಥಿತಿ ನೋಡಲು ಮನಸ್ಸಿಗೆ ನೋವಾಗುತ್ತದೆ” ಎಂದು ವೆಂಕಟೇಶ್‌ ಭಾವುಕರಾಗಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಗಂಟೆಯೊಳಗೆ ಒಂದು ಲಕ್ಷ ಹಣ ಸಹಾಯ

ಹಿರಿಯ ಖಳನಟ ಕಿಲ್ಲರ್‌ ವೆಂಕಟೇಶ್‌ ಅವರ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದ ದಿನಗಳಲ್ಲಿ ನಟ ದರ್ಶನ್ ತೂಗುದೀಪ ನೆರವಾಗಿದ್ದ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವನ್ನು ಆ ಸಮಯದಲ್ಲೇ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. 2020ರಲ್ಲಿ ಕಿಲ್ಲರ್‌ ವೆಂಕಟೇಶ್‌ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿತ್ತು. ಈ ಹಿನ್ನೆಲೆ ಜಗ್ಗೇಶ್‌ ಅವರು ದರ್ಶನ್‌ಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದರು. ಜಗ್ಗೇಶ್‌ ಅವರ ಹೇಳಿಕೆಯ ಪ್ರಕಾರ, ಒಂದು ಫೋನ್‌ ಕರೆ ಮಾಡಿದ ಕೇವಲ ಒಂದು ಗಂಟೆಯೊಳಗೆ ದರ್ಶನ್‌ ಅವರು ಚಿಕಿತ್ಸೆಗೆ ಒಂದು ಲಕ್ಷ ರೂಪಾಯಿ ಕಳುಹಿಸಿದ್ದರು.

Darshan

ಆ ವೇಳೆ ಜಗ್ಗೇಶ್‌ ಟ್ವಿಟರ್‌ನಲ್ಲಿ ಭಾವನಾತ್ಮಕವಾಗಿ ಬರೆದಿದ್ದರು. “ಕಿಲ್ಲರ್ ವೆಂಕಟೇಶ್ ವಿಷಯವಾಗಿ ನಾನು ಕರೆ ಮಾಡಿದ 1 ಗಂಟೆಯಲ್ಲಿ ಚಿಕಿತ್ಸೆಗೆ 1 ಲಕ್ಷ ರೂಪಾಯಿ ಕಳಿಸಿದ ಕಲಾಬಂಧು. ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು. ನಿನ್ನ ಶ್ರೇಷ್ಠಗುಣ ನನ್ನ ಹೃದಯದಲ್ಲಿ ಅಚ್ಚಾಯಿತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ ದರ್ಶನ್‌ ಎಂದು ಟ್ವಿಟರ್‌ನಲ್ಲಿ ಬರೆದಿದ್ದರು. ಚಿತ್ರರಂಗದಲ್ಲಿ ಸಹ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವ ಗುಣವೇ ದೊಡ್ಡ ಮಾನವೀಯತೆ ಎಂದು ಜಗ್ಗೇಶ್‌ ಆಗ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ದರ್ಶನ್‌ ಅವರ ಇತ್ತೀಚಿನ ಸಂಕಷ್ಟದ ಹಿನ್ನೆಲೆ ಈ ಹಳೆಯ ಘಟನೆ ಮತ್ತೆ ಚರ್ಚೆಗೆ ಬಂದಿದ್ದು, ದರ್ಶನ್‌ ಅಭಿಮಾನಿಗಳು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/darshan-did-not-deserve-this-says-killer-venkatesh-recalls-actors-help-during-kidney-failure-444591.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo