E-Bike: ಗ್ರಾಮೀಣ ಆರೋಗ್ಯ ಸೇವೆಗೆ ಇ-ಬೈಕ್ ವೇಗ: ಮನೆ ಬಾಗಿಲಿಗೆ ವೈದ್ಯಕೀಯ ನೆರವು, ಏನಿದು ಯೋಜನೆ | E-Bike Boost for Rural Healthcare: Bringing Medical Services to Your Doorstep What’s the Plan

Karnataka

oi-Hitesh Y

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಈಚೆಗೆ ಗೃಹ ಆರೋಗ್ಯ ಯೋಜನೆಯನ್ನು ಜಾರಿ ಮಾಡಿತ್ತು. ಇದೀಗ ಹಳ್ಳಿಗಳ ಆರೋಗ್ಯ ಸೇವೆಯಲ್ಲಿ ಹೊಸ ಕ್ರಾಂತಿ ಮೂಡಿಸುವ ನಿಟ್ಟಿನಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಾಗಿ 69 ಇ-ಬೈಕ್‌ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಿತರಿಸಿದ್ದಾರೆ.

ಮಂಗಳವಾರ ಆರೋಗ್ಯಸೌಧದ ಆವರಣದಲ್ಲಿ “ಯುನೈಟೆಡ್ ವೇ ಆಫ್ ಬೆಂಗಳೂರು” (UWBe) ಮತ್ತು “ಹೆಲ್ತಿಯಮ್ ಮೆಡ್‌ಟೆಕ್” ಸಂಸ್ಥೆಗಳ ಸಿ.ಎಸ್.ಆರ್ (CSR) ಸಹಯೋಗದೊಂದಿಗೆ ನಡೆದ ಪರಿಸರ ಸ್ನೇಹಿ (ಇ-ಬೈಕ್‌ಗಳನ್ನು) ದ್ವಿ ಚಕ್ರ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ತುಮಕೂರು, ಬೆಂಗಳೂರು ದಕ್ಷಿಣ (ರಾಮನಗರ), ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಆಯ್ದ ಆರೋಗ್ಯ ಕೇಂದ್ರಗಳಿಗೆ ಇ- ಬೈಕ್ ನೀಡಲಾಗುತ್ತಿದೆ. ಆರೋಗ್ಯ ಸೇವೆ ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ, ಅದು ಜನರ ಮನೆಬಾಗಿಲಿಗೆ ತಲುಪಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ ಎಂದಿದ್ದಾರೆ.

E-Bike

E-Bike ತಾಯಿ-ಮಗುವಿನ ಆರೋಗ್ಯ ರಕ್ಷಣೆ

ದೂರದ ಕುಗ್ರಾಮಗಳಿಗೆ ತೆರಳಲು ಸಾರಿಗೆ ಸಮಸ್ಯೆಯನ್ನು ಎದುರಿಸುತ್ತಿದ್ದ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಿಗೆ (PHCO’s) ಈ ಇ-ಬೈಕ್‌ಗಳು ಸಕಾಲದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿವೆ. ವಿಶೇಷವಾಗಿ ತಾಯಿ-ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಇಂಧನ ಉಳಿತಾಯ ಮತ್ತು ಮಾಲಿನ್ಯ ರಹಿತ ವ್ಯವಸ್ಥೆಯತ್ತ ಹೆಜ್ಜೆ ಇಡುತ್ತಿರುವುದು ಈ ಯೋಜನೆಯ ವಿಶೇಷತೆ ಎಂದಿದ್ದಾರೆ.

ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕಿವಿಮಾತು ಹೇಳಿದ ಸಚಿವರು, ಇವು ಸಾರ್ವಜನಿಕ ಆಸ್ತಿ. ಇವುಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಿ ಎಂದಿದ್ದಾರೆ. ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸರ್ಕಾರದೊಂದಿಗೆ ಕೈಜೋಡಿಸಿದ “ಹೆಲ್ತಿಯಮ್ ಮೆಡ್‌ಟೆಕ್” ಮತ್ತು “UWBe” ಸಂಸ್ಥೆಗಳ ಕಾರ್ಯವನ್ನು ಸಚಿವರು ಶ್ಲಾಘಿಸಿದ್ದಾರೆ. ಸಂಪನ್ಮೂಲಗಳನ್ನು ಬಳಸುವ ಉದ್ಯಮಗಳು ಇಚ್ಛಾಶಕ್ತಿ ತೋರಿದರೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಈ ಯೋಜನೆಯೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇನ್ನುಳಿದ ಜಿಲ್ಲೆಗಳಿಗೂ ಹಂತ ಹಂತವಾಗಿ ಇ-ಬೈಕ್ ಸೌಲಭ್ಯವನ್ನು CSR ಸಹಯೋಗದೊಂದಿಗೆ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಸಿಇಒ ಶ್ರೀ ರಾಜೇಶ್ ಕೃಷ್ಣನ್ ಅವರು ಮಾತನಾಡಿ, ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಪರಿಚಯಿಸಲಾಗಿರುವ ಎಲೆಕ್ಟ್ರಿಕ್ ಬೈಕ್‌ಗಳು (e-Bikes) ಈಗ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿವೆ. ಪ್ರಮುಖವಾಗಿ ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ ಅಡಿಯಲ್ಲಿ PHCO’s ಪ್ರತಿ ಮನೆಗೂ ಭೇಟಿ ನೀಡಲು ಈ ವಾಹನಗಳು ವರದಾನವಾಗಿ ಪರಿಣಮಿಸಿವೆ ಎಂದಿದ್ದಾರೆ.

ಮುಂದುವರಿದು ಈ ಮೊದಲು ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಹಳ್ಳಿಗಳ ಒಳಗಿನ ಮನೆಗಳಿಗೆ ತಲುಪುವುದು ಸವಾಲಾಗಿತ್ತು. ಆದರೆ ಈಗ ಇ-ಬೈಕ್‌ಗಳ ಬಳಕೆಯಿಂದಾಗಿ PHCO’s ಸರಿಯಾದ ಸಮಯಕ್ಕೆ ಗರ್ಭಿಣಿಯರು ಮತ್ತು ಬಾಣಂತಿಯರ ಮನೆ ಬಾಗಿಲಿಗೆ ತಲುಪುತ್ತಿದ್ದಾರೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತಿದೆ. ತಾಲ್ಲೂಕಿನಲ್ಲಿ ತಾಯಿ ಮರಣ ಪ್ರಮಾಣ (Maternal Mortality) ಮತ್ತು ಶಿಶು ಮರಣ ಪ್ರಮಾಣವನ್ನು (Infant Mortality) ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ.

ಹೆಲ್ದಿಯಂ ಮೆಡ್‌ಟೆಕ್‌ ಸಂಸ್ಥೆಯ ಸಿಇಒ ಮತ್ತು ಎಂಡಿ ಅನಿಶ್ ಬಫ್ನಾ ಅವರು ಮಾತನಾಡಿ, ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಆರೋಗ್ಯದ ಪಾತ್ರ ದೊಡ್ಡದು. ಆ ಸೇವೆಯನ್ನು ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಬಲಪಡಿಸುವುದು. ಆರೋಗ್ಯ ಕಾರ್ಯಕರ್ತರಿಗೆ ಇಂತಹ ಸಂಚಾರ ಸೌಲಭ್ಯಗಳನ್ನು ಒದಗಿಸುವುದು ಕಟ್ಟಕಡೆಯ ವ್ಯಕ್ತಿಗೂ ಸಕಾಲದಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡಲು ಇ-ಬೈಕ್‌ಗಳನ್ನು ನೀಡಲಾಗಿದೆ ಎಂದರು

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗ್ಗಡೆ ಐ.ಎ.ಎಸ್‌., ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ನಿರ್ದೇಶಕರಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಐ.ಎ.ಎಸ್‌., ನಿರ್ದೇಶಕರಾದ ಡಾ. ವಸಂತಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಹೆಲ್ದಿಯಂ ಮೆಡ್‌ಟೆಕ್, ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/e-bike-boost-for-rural-healthcare-bringing-medical-services-to-your-doorstep-what-s-the-plan-447429.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo