
Karnataka
oi-Manohara M
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆ ಹಿನ್ನೆಲೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರದ ಬೆಲೆಯ ಹೊರತಾಗಿ ಯಾವುದೇ “ಎಲ್‌ಪಿಜಿ ಶುಲ್ಕ”, “ಗ್ಯಾಸ್ ಸರ್‌ಚಾರ್ಜ್” ಅಥವಾ “ಇಂಧನ ವೆಚ್ಚ” ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಈ ಕುರಿತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ನೆಪವೊಡ್ಡಿ, ಕೆಲವು ಪ್ರತಿಷ್ಠಿತ ಹೋಟೆಲ್‌ಗಳು ಗ್ರಾಹಕರ ಬಿಲ್‌ನಲ್ಲಿ ಪ್ರತ್ಯೇಕವಾಗಿ ‘ಗ್ಯಾಸ್ ಚಾರ್ಜ್’ ಹೆಸರಿನಲ್ಲಿ 20 ರಿಂದ 50 ರೂಪಾಯಿಗಳವರೆಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದನ್ನು ಅಪ್ರಾಮಾಣಿಕ ವ್ಯಾಪಾರ ಪದ್ಧತಿ ಎಂದು ಸರ್ಕಾರ ಪರಿಗಣಿಸಿದೆ. ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, ಈ ಹೊರೆಯನ್ನು ಗ್ರಾಹಕರ ಮೇಲೆ ನೇರವಾಗಿ ‘ಗ್ಯಾಸ್ ಶುಲ್ಕ’ ಎಂಬ ಹೆಸರಿನಲ್ಲಿ ಹಾಕುವುದು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಉಲ್ಲಂಘನೆಯಾಗುತ್ತದೆ ಎಂದು ಪ್ರಾಧಿಕಾರ ಎಚ್ಚರಿಸಿದೆ.

ಹೀಗಾಗಿ ಬಿಲ್‌ನಲ್ಲಿ ಅಡುಗೆ ಅನಿಲದ ಹೆಸರಿನಲ್ಲಿ ಯಾವುದೇ ಗುಪ್ತ ಅಥವಾ ಹೆಚ್ಚುವರಿ ಶುಲ್ಕವನ್ನು ಸೇರಿಸುವಂತಿಲ್ಲ. ಹೋಟೆಲ್‌ನ ಮೆನು ಕಾರ್ಡ್‌ನಲ್ಲಿ ನಮೂದಿಸಿರುವ ದರದಲ್ಲೇ ಗ್ಯಾಸ್, ವಿದ್ಯುತ್ ಮತ್ತು ನೀರಿನಂತಹ ಎಲ್ಲ ನಿರ್ವಹಣಾ ವೆಚ್ಚಗಳು ಸೇರಿರಬೇಕು. ಮೆನು ದರದ ಮೇಲೆ ಕೇವಲ ಸರ್ಕಾರ ನಿಗದಿಪಡಿಸಿದ ಜಿಎಸ್‌ಟಿ (GST) ಮಾತ್ರ ವಿಧಿಸಲು ಅವಕಾಶವಿದೆ. ಯಾವುದೇ ಹೆಚ್ಚುವರಿ ಶುಲ್ಕವನ್ನು ಗ್ರಾಹಕರ ಅನುಮತಿಯಿಲ್ಲದೆ ಬಿಲ್‌ನಲ್ಲಿ ಸೇರಿಸುವುದು ಕಾನೂನುಬಾಹಿರ ಎಂದು ಹೇಳಿದೆ.
ಗ್ರಾಹಕರು ಏನು ಮಾಡಬೇಕು?
ಗ್ರಾಹಕರು ಬಿಲ್ ಪಾವತಿಸುವ ಮೊದಲು ಅದರಲ್ಲಿ ಯಾವುದೇ ಹೆಚ್ಚುವರಿ ‘ಗ್ಯಾಸ್ ಶುಲ್ಕ’ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನೀವು ಹೋಟೆಲ್‌ಗೆ ಹೋದಾಗ ಬಿಲ್‌ನಲ್ಲಿ ಇಂತಹ ಶುಲ್ಕಗಳನ್ನು ಕಂಡರೆ ತಕ್ಷಣವೇ ಹೋಟೆಲ್ ಮ್ಯಾನೇಜರ್ ಗಮನಕ್ಕೆ ತಂದು ಆ ಶುಲ್ಕವನ್ನು ತೆಗೆದುಹಾಕಲು ಸೂಚಿಸಿ. ಹೋಟೆಲ್‌ನವರು ಶುಲ್ಕ ರದ್ದುಪಡಿಸಲು ನಿರಾಕರಿಸಿದರೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915ಕ್ಕೆ ಕರೆ ಮಾಡಿ ದೂರು ನೀಡಬಹುದು. ‘e-Jagriti’ ಪೋರ್ಟಲ್ ಅಥವಾ NCH ಮೊಬೈಲ್ ಆಪ್ ಮೂಲಕ ಮನೆಯಲ್ಲೇ ಕುಳಿತು ದೂರು ದಾಖಲಿಸಬಹುದು ಎಂದು ಹೇಳಿದೆ.
#NewsFlash | Advisory to prevent unfair trade practices and protection of consumer interest with regard to levy of “LPG Charges”, “Gas Charges”, or similar charge in hotels and restaurants.@PetroleumMin @MIB_India @DG_PIB #LPGCharges pic.twitter.com/vCOE5IPMcJ
— DD News (@DDNewslive) March 25, 2026
ನಿಯಮ ಹೇಳುವುದೇನು?
ಗ್ರಾಹಕ ಹಿತರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಸ್ಥಾಪಿತವಾಗಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ವಿಧಿಸುತ್ತಿರುವ ಹೆಚ್ಚುವರಿ “ಗ್ಯಾಸ್ ಶುಲ್ಕ”ಗಳ ವಿರುದ್ಧ ಅಧಿಕೃತ ಆದೇಶ ಹೊರಡಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಬಂದಿರುವ ದೂರುಗಳ ಪ್ರಕಾರ, ಅನೇಕ ಹೋಟೆಲ್‌ಗಳು ಬಿಲ್‌ನಲ್ಲಿ “LPG charges”, “Gas surcharge”, “Fuel cost recovery” ಅಥವಾ “Gas crisis charge” ಎಂಬ ಹೆಸರುಗಳಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ. ಮೆನುವಿನಲ್ಲಿರುವ ಆಹಾರದ ಬೆಲೆ ಮತ್ತು ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಹೆಸರಿನಲ್ಲಿ ಶುಲ್ಕ ವಿಧಿಸುವುದು ಗ್ರಾಹಕ ಹಿತರಕ್ಷಣಾ ಕಾಯ್ದೆಯ ಸೆಕ್ಷನ್ 18ರ ಅಡಿಯಲ್ಲಿ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/hotel-bill-central-consumer-protection-authority-warns-against-gas-charges-on-bills-only-gst-allowed-448339.html. xn--babytilbehr-pgb.com does not claim ownership of this content. All rights remain with the original publisher.
