Gen Z ಪ್ರತಿಭಟನೆಯಲ್ಲಿ ‘ಪಾತ್ರ’: ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ | Nepal’s Former PM KP Sharma Oli Arrested Over Deadly Crackdown on Gen Z Anti-Corruption Protests

International

oi-Pragathi S

ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ದಿಢೀರ್ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಶನಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ (ಸೆಪ್ಟೆಂಬರ್) ನಡೆದ ಭ್ರಷ್ಟಾಚಾರ ವಿರೋಧಿ ‘ಜೆನ್ ಝೀ’ (Gen Z) ಯುವಜನತೆಯ ಪ್ರತಿಭಟನೆ ವೇಳೆ ನಡೆದ ಮಾರಣಾಂತಿಕ ಕಾರ್ಯಾಚರಣೆ ಹಾಗೂ ಹಿಂಸಾಚಾರದಲ್ಲಿ ಭಾಗಿಯಾದ ಮತ್ತು ಅದನ್ನು ತಡೆಯಲು ವಿಫಲರಾದ ಆರೋಪದ ಮೇಲೆ ಈ ಬಂಧನ ಕಾರ್ಯಾಚರಣೆ ನಡೆದಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿದ್ದ ಯುವಕರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸಿದ ನೇಪಾಳದ ವಿಶೇಷ ಸಮಿತಿಯು, 74 ವರ್ಷದ ಕೆ.ಪಿ. ಶರ್ಮಾ ಒಲಿ ವಿರುದ್ಧ ಮೊಕದ್ದಮೆ ಹೂಡಲು ಈ ವಾರದ ಆರಂಭದಲ್ಲಿ ಅಧಿಕೃತವಾಗಿ ಶಿಫಾರಸು ಮಾಡಿತ್ತು.

PM KP Sharma

“ಇಂದು ಬೆಳಿಗ್ಗೆ ಮಾಜಿ ಪ್ರಧಾನಿ ಹಾಗೂ ಮಾಜಿ ಗೃಹ ಸಚಿವರನ್ನು ಬಂಧಿಸಲಾಗಿದ್ದು, ಕಾನೂನಿನ ಪ್ರಕಾರ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ” ಎಂದು ಕಠ್ಮಂಡು ಕಣಿವೆ ಪೊಲೀಸ್ ವಕ್ತಾರ ಓಂ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. 2025ರ ಐತಿಹಾಸಿಕ ದಂಗೆಯ ನಂತರ ನಡೆದ ಮೊದಲ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಾಧಿಸಿ, ನೂತನ ಪ್ರಧಾನಿ ಬಾಲೆಂದ್ರ ಶಾ ಮತ್ತು ಅವರ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಒಂದು ದಿನದ ಬೆನ್ನಲ್ಲೇ ಈ ಹೈಡ್ರಾಮಾ ನಡೆದಿದೆ.

‘ಕಾನೂನಿಗಿಂತ ಯಾರೂ ಮಿಗಿಲಲ್ಲ’ ಎಂದ ನೂತನ ಸಚಿವ

ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ನೇಪಾಳದ ನೂತನ ಗೃಹ ಸಚಿವರಾಗಿ ನೇಮಕಗೊಂಡಿರುವ ಸುದಾನ್ ಗುರುಂಗ್ (Sudan Gurung), ಒಲಿ ಬಂಧನದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಕಾನೂನಿಗಿಂತ ಯಾರೂ ಮಿಗಿಲಲ್ಲ… ಇದು ಯಾರ ಮೇಲಿನ ಸೇಡಿನ ಕ್ರಮವಲ್ಲ, ಬದಲಾಗಿ ನ್ಯಾಯದ ಆರಂಭವಷ್ಟೇ. ಈಗ ದೇಶವು ಹೊಸ ದಿಕ್ಕಿನಲ್ಲಿ ಸಾಗಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಶನಿವಾರ ಬೆಳಿಗ್ಗೆ ಒಲಿ ಅವರನ್ನು ಅವರ ನಿವಾಸದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಒಲಿ ಅವರ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಹಿರಿಯ ನಾಯಕ ಮಿನ್ ಬಹದ್ದೂರ್ ಶಾಹಿ ರಾಯಿಟರ್ಸ್‌ಗೆ ಖಚಿತಪಡಿಸಿದ್ದಾರೆ.

ಬಂಧನಕ್ಕೆ ಅಸಲಿ ಕಾರಣವೇನು?

ಸೆಪ್ಟೆಂಬರ್ 8 ಮತ್ತು 9 ರಂದು ನಡೆದ ಭ್ರಷ್ಟಾಚಾರ ವಿರೋಧಿ ಯುವ ದಂಗೆಯಲ್ಲಿ ಕನಿಷ್ಠ 77 ಜನರು ಪ್ರಾಣ ಕಳೆದುಕೊಂಡಿದ್ದರು. ಸಾಮಾಜಿಕ ಜಾಲತಾಣಗಳ ಮೇಲಿನ ಅಲ್ಪಾವಧಿಯ ನಿಷೇಧವನ್ನು ವಿರೋಧಿಸಿ ಶುರುವಾದ ಈ ಪ್ರತಿಭಟನೆ, ಕ್ರಮೇಣ ದೇಶದ ಆರ್ಥಿಕ ಸಂಕಷ್ಟದ ವಿರುದ್ಧದ ಆಕ್ರೋಶವಾಗಿ ಮಾರ್ಪಟ್ಟಿತ್ತು. ಪ್ರತಿಭಟನೆಯ ಮೊದಲ ದಿನವೇ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 19 ಯುವಕರು ಬಲಿಯಾಗಿದ್ದರು. ಮರುದಿನ ಈ ಅಶಾಂತಿ ದೇಶಾದ್ಯಂತ ವ್ಯಾಪಿಸಿ, ಸಂಸತ್ತು ಮತ್ತು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು. ಇದರ ನೇರ ಪರಿಣಾಮವಾಗಿ ಅಂದಿನ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರ ಪತನಗೊಂಡಿತ್ತು.

ಈ ಮಾರಣಾಂತಿಕ ದಂಗೆಯ ಕುರಿತು ತನಿಖೆ ನಡೆಸಿದ ಸರ್ಕಾರಿ ಬೆಂಬಲಿತ ತನಿಖಾ ವರದಿ, ಒಲಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದೆ. “ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಸರ್ಕಾರದಿಂದ ನೇರ ಆದೇಶ ನೀಡಲಾಗಿತ್ತು ಎಂಬುದಕ್ಕೆ ಸ್ಪಷ್ಟ ಆಧಾರಗಳಿಲ್ಲ. ಆದರೆ, ಗುಂಡಿನ ದಾಳಿಯನ್ನು ನಿಲ್ಲಿಸಲು ಅಥವಾ ನಿಯಂತ್ರಿಸಲು ಅಂದಿನ ಸರ್ಕಾರ ಯಾವುದೇ ಪ್ರಯತ್ನ ಮಾಡಲಿಲ್ಲ. ಸರ್ಕಾರದ ಈ ನಿರ್ಲಕ್ಷ್ಯದ ನಡವಳಿಕೆಯಿಂದಾಗಿ ಅಮಾಯಕರು ಹಾಗೂ ಅಪ್ರಾಪ್ತ ವಯಸ್ಕರು ಕೂಡ ಪ್ರಾಣ ಕಳೆದುಕೊಳ್ಳಬೇಕಾಯಿತು” ಎಂದು ವರದಿಯಲ್ಲಿ ಗಂಭೀರವಾಗಿ ಉಲ್ಲೇಖಿಸಲಾಗಿದೆ. ಈ ವರದಿಯ ಆಧಾರದ ಮೇಲೆಯೇ ಇದೀಗ ಬಂಧನ ಪ್ರಕ್ರಿಯೆ ಜರುಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/international/nepals-former-pm-kp-sharma-oli-arrested-over-deadly-crackdown-on-gen-z-anti-corruption-protests-448601.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo