Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ | 8 Crore Gold Treasure Unearthed in Lakkundi Family That Reported It Seeks Share After Digging Ends

Karnataka

oi-Hitesh Y

Gold: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ನಿಧಿ ನೀಡಿ ಪ್ರಮಾಣಿಕತೆ ಮೆರೆದಿದ್ದ ಪ್ರಜ್ವಲ್ ರಿತ್ತಿ ಕುಟುಂಬವು ಹೊಸ ಬೇಡಿಕೆಯೊಂದನ್ನು ಇರಿಸಿದ್ದು, ಇದು ಸರ್ಕಾರ ಹಾಗೂ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಈ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ರಿತ್ತಿ ಕುಟುಂಬಕ್ಕೆ ಚಿನ್ನದ ನಿಧಿ ಸಿಕ್ಕಿತ್ತು. ನಿಧಿ ಸಿಕ್ಕ ಕೂಡಲೇ ಹಿಂದೆಮುಂದೆ ನೋಡದೆ ಈ ಕುಟುಂಬವು ಪೂರ್ಣ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಮಾಣಿಕತೆ ಮೆರೆದಿತ್ತು. ಆದರೆ ಇದೀಗ ಕುಟುಂಬವು ಹೊಸದೊಂದು ಬೇಡಿಕೆ ಇರಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದಕ್ಕೆ ಮುಖ್ಯ ಕಾರಣವಾಗಿರುವುದು ನಿಧಿಯ ಮೌಲ್ಯವು ಈಗ ಇರುವುದಕ್ಕಿಂತ ಹತ್ತುಪಟ್ಟು ಹೆಚ್ಚು ಎನ್ನುವುದು. ನಿಧಿ ಮೌಲ್ಯ 8 ಕೋಟಿ ರೂಪಾಯಿ ಎಂದು ತಿಳಿದ ಮೇಲೆ ನಿಧಿ ನೀಡಿದ ಕುಟುಂಬವು ಹೊಸದೊಂದು ಡಿಮ್ಯಾಂಡ್ ಇರಿಸಿದೆ.

ಮನೆ ನಿರ್ಮಾಣದ ಸಮಯದಲ್ಲಿ ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದ ಕುಟುಂಬಕ್ಕೆ ಇದೀಗ ಸರ್ಕಾರದಿಂದ ನಿವೇಶನ ಸಿಕ್ಕಿದೆ, ಹೊರ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಹಾಗೂ ಮನೆ ನಿರ್ಮಾಣದ ಭರವಸೆಯೂ ಸಿಕ್ಕಿದೆ. ಅಲ್ಲದೆ ಸರ್ಕಾರವು ಈ ಕುಟುಂಬಕ್ಕೆ 5 ಲಕ್ಷ ರೂಪಾಯಿ ಧನ ಸಹಾಯ ಮಾಡಿದೆ. ಇದೀಗ ಈ ಕುಟುಂಬವು ಹೊಸದೊಂದು ಡಿಮ್ಯಾಂಡ್ ಅನ್ನು ಸರ್ಕಾರದ ಮುಂದಿರಿಸಿದೆ.

Gold

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಅಡಿಪಾಯ ತೆಗೆಯುವ ಸಂದರ್ಭದಲಿ 470 ಗ್ರಾಂ ಚಿನ್ನಾಭರಣಗಳ ನಿಧಿ ಪತ್ತೆಯಾಗಿತ್ತು. ಸಿಕ್ಕ ನಿಧಿಯನ್ನು ಪ್ರಜ್ವಲ್ ರಿತ್ತಿ ಕುಟುಂಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ನೀಡಿತ್ತು. ಈ ಭಾಗದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ವಿವಿಧ ಪ್ರದೇಶಗಳಲ್ಲಿ ಉತ್ಖನನ ಕಾರ್ಯವೂ ಸಹ ನಡೆದಿತ್ತು. ಇದೀಗ ಈ ಭಾಗದಲ್ಲಿ ಸಿಕ್ಕ ನಿಧಿಯ ಮೌಲ್ಯವು ಈಗ ಇರುವ ಚಿನ್ನದ ಮೌಲ್ಯಕ್ಕಿಂತಲೂ 10 ಪಟ್ಟು ಹೆಚ್ಚಾಗಿದೆ. ಈ ಆಭರಗಳು ವಿಜಯನಗರ ಆಳ್ವಿಕೆಯ ಕಾಲದ್ದಾಗಿದೆ ಎಂದು ತಜ್ಞರ ಸಮಿತಿ ಖಚಿತಪಡಿಸಿದೆ. ಬಂಗಾರದ ಬೆಲೆ ಇಂದಿಗೆ ಸುಮಾರು 80 ಲಕ್ಷ ರೂಪಾಯಿ. ಆದರೆ, ಆ್ಯಂಟಿಕ್​​ ಮೌಲ್ಯವು ಬರೋಬ್ಬರಿ 8 ಕೋಟಿಗೂ ಹೆಚ್ಚು ಎಂದು ತಜ್ಞರು ಅಂದಾಜಿಸಿದ್ದಾರೆ. ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಜ್ವಲ್ ರಿತ್ತಿ‌ ಕುಟುಂಬವು ಹೊಸದೊಂದು ಡಿಮ್ಯಾಂಡ್ ಮುಂದಿಟ್ಟಿದೆ.

ನಿಧಿ ನೀಡಿದ ಪ್ರಜ್ವಲ್ ರಿತ್ತಿ ಕುಟುಂಬದ ಹೊಸ ಡಿಮ್ಯಾಂಡ್

ಪ್ರಾಮಾಣಿಕವಾಗಿ ಸರ್ಕಾರಕ್ಕೆ ನಿಧಿ ಒಪ್ಪಿಸಿದ ಕುಟುಂಬವು ಇದೀಗ ಸರ್ಕಾರದ ಬಳಿ ಹೊಸದೊಂದು ಡಿಮ್ಯಾಂಡ್ ಇರಿಸಿದೆ. ನಿಧಿ ಮೌಲ್ಯದ 8 ಕೋಟಿ ರೂ. ಮೊತ್ತದಲ್ಲಿ ಐದರಲ್ಲಿ ಒಂದು ಪಾಲು ತಮಗೆ ನೀಡಬೇಕು ಎಂದು ಮನವಿ ಮಾಡಿದೆ. ನಾವು ನಮಗೆ ಸಿಕ್ಕಿದ್ದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಹೀಗಾಗಿ ತಜ್ಞರು ಹೇಳಿರುವಂತೆ ಚಿನ್ನದ ಆ್ಯಂಟಿಕ್​​ ಮೌಲ್ಯದಲ್ಲಿ ನಮಗೆ ಐದನೇ ಒಂದು ಭಾಗ ಪಾಲು ನೀಡಬೇಕು. ಅಲ್ಲದೆ ಸರ್ಕಾರ ಸಹ ನಮಗೆ ಪ್ರಾಮಾಣಿಕವಾಗಿ ಪರಿಹಾರ ನೀಡಬೇಕು. ಈಗಿನ ಬೆಲೆಯನ್ನೇ ಕೊಡುತ್ತೇವೆ ಎಂದರೆ ನಾವು ಒಪ್ಪುವುದಕ್ಕೆ ಸಾಧ್ಯವಿಲ್ಲ. ಸಚಿವ ಎಚ್. ಕೆ. ಪಾಟೀಲ್ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಸಿದ್ದು ಪಾಟೀಲ್ ನಮಗೆ ಭರವಸೆ ನೀಡಿದ್ದರು. ಅವರ ಮೇಲೆ ನಮಗೆ ಭರವಸೆ ಇದೆ ಎಂದು ಕುಟುಂಬದವರು ಹೇಳಿದ್ದಾರೆ.

ಉತ್ಖನನ ಕಾರ್ಯ ಮುಕ್ತಾಯ

ಇನ್ನು ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ 47 ದಿನಗಳಿಂದ ನಡೆದಿದ್ದ ಉತ್ಪನನ ಕಾರ್ಯವನ್ನು ಮಾರ್ಚ್‌11ರ ಬುಧವಾರ ಮುಕ್ತಾಯ ಮಾಡಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮೈಸೂರು ಪುರಾತತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಈ ಉತ್ಪನನ ಕೆಲಸ ನಡೆದಿತ್ತು.

ಬುಧವಾರ ಸಂಜೆ ಪುರಾತತ್ವ ಇಲಾಖೆಯ ನಿಯಮದಂತೆ 14 ಅಡಿ ಆಳ ತೆಗೆದ ಉತ್ಪನನ ಸ್ಥಳವನ್ನು ಪ್ಲಾಸ್ಟಿಕ್ ತಾಡಪತ್ರಿ ಹಾಕಿ, ಉತ್ಪನನದ ವೇಳೆ ತೆಗೆದ ಮಣ್ಣನ್ನೇ ಹಾಕಿ ಮುಚ್ಚುವ ಕಾರ್ಯ ಪ್ರಾರಂಭಿಸಲಾಗಿದೆ. 10X10 ಮೀಟರ್ ಜಾಗದಲ್ಲಿ 4 ಬಾಕ್ಸ್‌ಗಳನ್ನು ರಚಿಸಿ, 30 ರಿಂದ 35 ಕಾರ್ಮಿಕರು 47 ದಿನ ಉತ್ಪನನ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ಪುರಾತನ ಅವಶೇಷಗಳು ಈ ಭಾಗದಲ್ಲಿ ಸಿಕ್ಕವು. ಇತಿಹಾಸ ತಜ್ಞರ ಸ್ಥಳ ಪರಿಶೀಲನೆ ಬಳಿಕ ಉತ್ಪನನ ಕಾರ್ಯ ಮುಕ್ತಾಯಗೊಂಡಿದೆ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಅವರು ಮಾಹಿತಿ ನೀಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/8-crore-gold-treasure-unearthed-in-lakkundi-family-that-reported-it-seeks-share-after-digging-ends-446811.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo