
Karnataka
oi-Hitesh Y
Govt Jobs: ಕರ್ನಾಟಕದಲ್ಲಿ ಸರ್ಕಾರಿ ನೇಮಕಾತಿ ಹಾಗೂ ವಿವಿಧ ಹುದ್ದೆಗಳ ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾಗಿರುವ ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಬಿಜೆಪಿ ಅವಧಿಯಲ್ಲಿ ಆಗಿರುವ ನೇಮಕಾತಿ ವಿವರ ಕೊಟ್ಟಿದ್ದಾರೆ.
“ಕುಣಿಯಲಾರದವನಿಗೆ ನೆಲ ಡೊಂಕು” ಎಂಬ ಮಾತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನ್ವಯವಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ನೇಮಕಾತಿಯತ್ತ ಗಮನಹರಿಸದೆ, ಯುವಕರಿಗೆ ದ್ರೋಹ ಬಗೆದಿರುವ ಮಹಾ ಸುಳ್ಳುಗಾರ ಸಿದ್ದರಾಮಯ್ಯನವರೇ, ಬಿಜೆಪಿಯತ್ತ ಬೆರಳು ಮಾಡುವ ಮುನ್ನ ಬಿಜೆಪಿ ಅವಧಿಯಲ್ಲಿ ಆಗಿರುವ ನೇಮಕಾತಿ ವಿವರ ನಿಮ್ಮ ಗಮನಕ್ಕೆ…

✅ ಶಿಕ್ಷಣ ಇಲಾಖೆಯಲ್ಲಿ 2022ರಲ್ಲಿ 15 ಸಾವಿರ ಶಿಕ್ಷಕರ ನೇಮಕ
✅ ಆರೋಗ್ಯ ಇಲಾಖೆಯಲ್ಲಿ 2022ರಲ್ಲಿ 1048 ಹುದ್ದೆಗಳು ಭರ್ತಿ
✅ ಅಬಕಾರಿ ಇಲಾಖೆಯಲ್ಲಿ 2022ರಲ್ಲಿ 1100 ಹುದ್ದೆಗಳು ಭರ್ತಿ
✅ ಕೆಎಂಎಫ್ ನಲ್ಲಿ 2022ರಲ್ಲಿ 487 ಹುದ್ದೆಗಳ ಭರ್ತಿ
✅ ಶಿಕ್ಷಣ ಇಲಾಖೆಯಲ್ಲಿ 2022ರಲ್ಲಿ 778 ಪಿಯು ಉಪನ್ಯಾಸಕರ ಭರ್ತಿಗೆ ಕ್ರಮ
✅ ಇಂಧನ ಇಲಾಖೆಯಲ್ಲಿ 2022ರಲ್ಲಿ 1492 ಎಂಜಿನಿಯರ್ ಹುದ್ದೆಗಳ ಭರ್ತಿ
✅ ಆರೋಗ್ಯ/ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2022ರಲ್ಲಿ 320 ಹುದ್ದೆಗಳ ಭರ್ತಿ
✅ ಗೃಹ ಇಲಾಖೆಯಲ್ಲಿ 2022ರಲ್ಲಿ 3484 ಕಾನ್ಸ್ಟೆಬಲ್ ಹುದ್ದೆ ಭರ್ತಿ
✅ 2021ರಲ್ಲಿ ರಾಜ್ಯದ ಮೀಸಲು ಪೊಲೀಸ್ ಪಡೆಗೆ 250 ಹುದ್ದೆಗಳ ನೇಮಕ
✅ ತೋಟಗಾರಿಕೆ ಇಲಾಖೆಯಲ್ಲಿ 5465 ಹುದ್ದೆಗಳ ಭರ್ತಿ
ಯುವಕರಿಗೆ ಸುಳ್ಳು ಹೇಳುವುದು, ವಂಚಿಸುವುದು, ಯಾಮಾರಿಸುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜಾಯಮಾನವಾಗಿದೆ. ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಸಂಪುಟ ದರ್ಜೆ ಹುದ್ದೆಗಳು ಮಾತ್ರ ತ್ವರಿತವಾಗಿ ಭರ್ತಿ ಆಗುತ್ತಿವೆ ಆದರೆ ಸರ್ಕಾರಿ ಖಾಲಿ ಹುದ್ದೆಗಳು ಭರ್ತಿ ಆಗುವುದಿಲ್ಲ.! ಕುರ್ಚಿ ತಿಕ್ಕಾಟದಲ್ಲಿ ಅಮೂಲ್ಯವಾದ 3 ವರ್ಷಗಳನ್ನು ಪೋಲು ಮಾಡಿರುವ ಲೂಟಿಕೋರ ಸರ್ಕಾರಕ್ಕೆ ಯುವಜನರತ್ತ ಗಮನ ಹರಿಸಲು ಈ ಸರಕಾರಕ್ಕೆ ಸಮಯವಿಲ್ಲ. ಸಿದ್ದರಾಮಯ್ಯನವರೇ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ ಒಂದು ವರ್ಷದಲ್ಲೇ 30,000 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ, ನೀವು ಈ ಕೂಡಲೇ ಖಾಲಿ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಿ, ಇಲ್ಲವಾದರೆ ಉದ್ಯೋಗಾಕಾಂಕ್ಷಿಗಳ ಆಕ್ರೋಶಕ್ಕೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರಿ ನೇಮಕಾತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದೇನು
ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ, ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದುಕೊಂಡು ಕೇವಲ ಪ್ರತಿಭಟನೆ ಮಾಡುವುದರಲ್ಲೇ ನಿರತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 2 ಕೋಟಿ ಉದ್ಯೋಗ ನೀಡುವುದಾಗಿ ತಿಳಿಸಿದರೇ ಹೊರತು, ಯಾರಿಗೂ ಉದ್ಯೋಗ ದೊರೆಯಲಿಲ್ಲ. ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸಿದ ಸಂದರ್ಭದಲ್ಲಿ ಯಾವುದೇ ಉದ್ಯೋಗಗಳನ್ನು ನೀಡಲಿಲ್ಲ. ಆದ್ದರಿಂದ ನಮ್ಮ ಸರ್ಕಾರವನ್ನು ಪ್ರಶ್ನಿಸಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದೇನು
ಇನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ರಾಜ್ಯದಲ್ಲಿ ನೇರ ನೇಮಕಾತಿ ಪ್ರಕ್ರಿಯೆಯಡಿ 56,432 ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಕೆಪಿಎಸ್‌ಸಿ, ಕೆಇಎ ಅಡಿ 4,409 ಹುದ್ದೆ ನೇಮಕ ಅಂತಿಮಗೊಂಡಿವೆ. ಉಳಿದಂತೆ 371 ಜೆ ಅಡಿ 32132 ಹುದ್ದೆ ಹಾಗೂ ಆರ್ಥಿಕ ಇಲಾಖೆ ಹೊಸದಾಗಿ ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿರುವ 24,300 ಹುದ್ದೆ ಸೇರಿ 56,432 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/govt-jobs-opposition-leader-r-ashok-details-recruitment-done-under-bjp-rule-what-did-dk-shivakumar-445357.html. xn--babytilbehr-pgb.com does not claim ownership of this content. All rights remain with the original publisher.
