
Karnataka
oi-Manohara M
Hampi utsava: ಇನ್ನು ಮುಂದೆ ಪ್ರತಿವರ್ಷ ನವೆಂಬರ್ 3ರಿಂದ 5ರವರೆಗೆ ಹಂಪಿ ಉತ್ಸವವನ್ನು ನಿಯಮಿತವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು. ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಆಯೋಜಿಸಲಾದ ಐತಿಹಾಸಿಕ ಹಂಪಿ ಉತ್ಸವ-2026ನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಂಪಿಯ ಐತಿಹಾಸಿಕ ವೈಭವವನ್ನು ಜಗತ್ತಿನ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಉತ್ಸವವನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ತಿಳಿಸಿದರು.
ಮೈಸೂರು ದಸರಾ ಮಾದರಿಯಲ್ಲಿ ಹಂಪಿಯಲ್ಲೂ ಅದ್ಧೂರಿ ಉತ್ಸವ ನಡೆಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದ ಮಾಜಿ ಸಚಿವರಾದ ದಿವಂಗತ ಎಂ.ಪಿ.ಪ್ರಕಾಶ್ ಅವರ ಕೊಡುಗೆಯನ್ನು ಸ್ಮರಿಸಿದರು. ಕನ್ನಡ ನಾಡು, ನುಡಿ ಮತ್ತು ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಹಂಪಿ ಉತ್ಸವದ ಪರಿಕಲ್ಪನೆಗೆ ಮೂಲಕಾರಣರಾಗಿದ್ದರು. “ಅವರಂತಹ ಅಪರೂಪದ ವ್ಯಕ್ತಿಗಳ ಕನಸುಗಳನ್ನು ನನಸು ಮಾಡುವುದು ನಮ್ಮ ಹೊಣೆಗಾರಿಕೆ” ಎಂದು ಸಿದ್ದರಾಮಯ್ಯ ಹೇಳಿದರು.

ವಿಜಯನಗರ ಸಾಮ್ರಾಜ್ಯದ ವೈಭವದ ಪ್ರತೀಕ
“ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ” ಎಂದು ಉಲ್ಲೇಖಿಸಿದ ಸಿಎಂ, ವಿಜಯನಗರ ಸಾಮ್ರಾಜ್ಯ ಕಾಲಘಟ್ಟದಲ್ಲಿ ಹಂಪಿ ನಾಡು ಸಂಪತ್ಭರಿತವಾಗಿದ್ದುದನ್ನು ಸ್ಮರಿಸಿದರು. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್ ಕೂಡ ವಿಜಯನಗರವನ್ನು ಶ್ರೀಮಂತ ಮತ್ತು ವೈಭವಶಾಲಿ ಸ್ಥಳವೆಂದು ವರ್ಣಿಸಿದ್ದಾನೆ ಎಂದು ಅವರು ಹೇಳಿದರು. ಹಂಪಿ ಉತ್ಸವದ ಮೂಲಕ ಆ ವೈಭವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ನಾಡಿನ ಸಂಸ್ಕೃತಿ ಸಂರಕ್ಷಣೆಗೆ ಉತ್ಸವಗಳು
ರಾಜ್ಯ ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ ಉತ್ಸವ, ಮೈಸೂರು ದಸರಾ ಹಾಗೂ ಕರಾವಳಿ ಉತ್ಸವಗಳ ಮೂಲಕ ಕನ್ನಡ ನಾಡಿನ ಸಾಹಿತ್ಯ, ಕಲೆ ಮತ್ತು ಸಂಗೀತ ಪರಂಪರೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದು ಸಿಎಂ ಹೇಳಿದರು. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ ಎಂದರು. ಹಂಪಿಯ ಐತಿಹಾಸಿಕ ನೆಲೆಯ ಮೇಲೆ ನಡೆದ ಈ ಉತ್ಸವ, ರಾಜ್ಯದ ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಸ್ಮರಿಸುವ ವೇದಿಕೆಯಾಗಿ ಪರಿಣಮಿಸಿತು.
ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಸರಾಸರಿ 60,000 ರೂ.
ಸಮಾಜದಲ್ಲಿ ಬಡ-ಶ್ರೀಮಂತ ಹಾಗೂ ಜಾತಿ ಬೇಧಗಳ ಅಸಮಾನತೆ ಇನ್ನೂ ಇರುವುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮಹತ್ವವನ್ನು ಪ್ರಸ್ತಾಪಿಸಿದರು. “ಸಮಾನ ಅವಕಾಶಗಳಿಲ್ಲದೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ” ಎಂದು ಹೇಳಿದ ಅವರು, 2013 ಮತ್ತು 2023ರಲ್ಲಿ ತಮ್ಮ ಸರ್ಕಾರ ಜಾರಿಗೆ ತಂದ ಯೋಜನೆಗಳು ಅಸಮಾನತೆ ನಿವಾರಣೆಯ ದಿಕ್ಕಿನಲ್ಲಿ ರೂಪಿಸಲ್ಪಟ್ಟಿವೆ ಎಂದು ಹೇಳಿದರು. 2023ರಿಂದ ಜಾರಿಗೆ ಬಂದ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಸರಾಸರಿ ₹60,000ರ ಆರ್ಥಿಕ ಬಲ ನೀಡುತ್ತಿವೆ. ಈ ಯೋಜನೆಗಳು ಜನರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಶಕ್ತೀಕರಣಕ್ಕೆ ಕಾರಣವಾಗುತ್ತಿವೆ ಎಂದು ವಿವರಿಸಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/hampi-utsava-to-be-held-every-year-from-november-3-to-5-cm-siddaramaiah-announcement-vijayanagara-443663.html. xn--babytilbehr-pgb.com does not claim ownership of this content. All rights remain with the original publisher.
