
Karnataka
oi-Hitesh Y
High Speed Rail: ಬೆಳಗಾವಿಯ ವಿವಿಧ ರೈಲು ಯೋಜನೆಗಳ ಅಭಿವೃದ್ಧಿ ಹಾಗೂ ಸೇವೆಗೆ ಸಂಬಂಧಿಸಿದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಬೆಂಗಳೂರು – ಬೆಳಗಾವಿ – ಮುಂಬೈ ನಡುವೆಯೂ 8ನೇ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಬಗ್ಗೆಯೂ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಸಕಾರಾತ್ಮಕ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರನ್ನು ನವದೆಹಲಿಯ ಸಂಸದ ಭವನ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಬೆಳಗಾವಿ ಲೋಕಸಭಾ ವ್ಯಾಪ್ತಿಯಡಿ ಒದಗಿಸಬಹುದಾದ ರೈಲು ಸೇವೆಗಳ ಬಗ್ಗೆ ಚರ್ಚಿಸಲಾಯಿತು ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

8th High Speed ಬೆಂಗಳೂರು – ಬೆಳಗಾವಿ – ಮುಂಬೈ
ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್: 2026-27 ದೇಶದ ಹೈಸ್ಪೀಡ ರೈಲು ಕಾರಿಡಾರ್ ಯೋಜನೆಯಡಿ ಏಳು ನಗರಗಳಿಗೆ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಬೆಂಗಳೂರು – ಬೆಳಗಾವಿ – ಮುಂಬೈ ನಡುವೆಯೂ ಸಹ 8ನೇ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ವ್ಯಾಪ್ತಿಗೆ ಸೇರುವಂತೆ ಘೋಷಣೆ ಮಾಡುವಂತೆ ಪ್ರಸ್ತಾಪಿಸಲಾಯಿತು. ಇದರಿಂದ ಈ ಮಾರ್ಗದಲ್ಲಿ ಬರುವಂತಹ ಸಣ್ಣ ಮತ್ತು ಮಧ್ಯಮ ನಗರಗಳೂ ಸಹ ಅಭಿವೃದ್ಧಿ ಹೊಂದುವುದಕ್ಕೆ ಅವಕಾಶ ಕಲ್ಪಿಸಿದಂತಾಗುವುದು ಎಂದು ಹೇಳಿದ್ದಾರೆ.
ಮುಂದುವರಿದು ಬೆಳಗಾವಿ ಜಿಲ್ಲೆಯ ಪರಕನಟ್ಟಿ, ಗೋಕಾಕ ಮತ್ತು ಯಾದವಾಡ ಮಾರ್ಗವಾಗಿ ಬಾಗಲಕೋಟೆ ನಗರಕ್ಕೆ ಹೊಂದಿಕೊಂಡು ಸಹ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ವಿಷಯ ಪರಿಗಣಿಸಲು ಕೋರಿ, ಪ್ರಸ್ತಾಪಿತ ಮಾರ್ಗದಲ್ಲಿ ಈಗಾಗಲೇ ಹಲವಾರು ಸಿಮೆಂಟ್ ಮತ್ತು ಶೂಗರ್ ಫ್ಯಾಕ್ಟರಿಗಳು ಇದ್ದು ಈ ಮಾರ್ಗ ನಿರ್ಮಾಣವಾದಲ್ಲಿ ಸಾರ್ವಜನಿಕರಿಗೆ ಸಂಚರಿಸಲು ತುಂಬಾ ಸಹಕಾರಿಯಾಗಲಿದೆ.
ಅದರಂತೆ ಬೆಳಗಾವಿಯಿಂದ ಈಗ ಚಾಲನೆಯಲ್ಲಿರುವ ಬೆಳಗಾವಿ – ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್ ರೈಲು ಬೆಳಗಾವಿಯಿಂದ ಬೆಳ್ಳಿಗ್ಗೆ 5:35ಕ್ಕೆ ಹೊರಡುತ್ತದೆ ಈ ಸಂಚಾರ ಸಮಯವನ್ನು 6:15ಕ್ಕೆ ಬದಲಾವಣೆ ಮಾಡಿದ್ದಲ್ಲಿ ಇನ್ನು ಹೆಚ್ಚು ಪ್ರಯಾಣಿಕರಿಗೆ ಸಂಚರಿಸಲು ಅನುಕೂಲವಾಗುವುದು ಎಂದು ಕೇಂದ್ರ ಸಚಿವರಿಗೆ ತಿಳಿಸಲಾಯಿತು. ಮನವಿಗನುಗುಣವಾಗಿ ಶೀಘ್ರದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಭರವಸೆಯನ್ನು ಕೇಂದ್ರ ರೇಲ್ವೆ ಸಚಿವರು ನೀಡಿದ್ದಾರೆ.
ನಂತರ ರೈಲ್ವೆ ಬೋರ್ಡ್ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸತೀಶಕುಮಾರ ಇವರನ್ನು ಸಹ ಅವರ ನವ-ದೆಹಲಿಯ ರೈಲು ಭವನದ ಕಚೇರಿಯಲ್ಲಿ ಭೇಟಿ ಮಾಡಿ, ಲೋಕಾಪೂರ – ರಾಮದುರ್ಗ – ಸವದತ್ತಿ – ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯವೆನಿಸಿದ ಪೂರ್ವ ಸಮೀಕ್ಷಾ ಕಾರ್ಯ ಕೈಗೊಳ್ಳಲು ಮತ್ತು ಈ ಕುರಿತಾದ ಅವರಲ್ಲಿ ಬಂದಿರುವ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಕೋರಲಾಯಿತು.
ಇನ್ನು ಬೆಳಗಾವಿ – ಮಣಗೂರ ನಡುವೆ ಈ ಮೊದಲು ಸಂಚರಿಸುತ್ತಿದ್ದ ರೈಲು ರದ್ದುಗೊಂಡಿದ್ದು ಅದನ್ನು ಪುನಾರಂಭಿಸಿ ಬೆಳಗಾವಿ ನಿವಾಸಿಗಳಿಗೆ ಅನುಕೂಲತೆ ಮಾಡಿಕೊಡುವಂತೆ ಕೋರಲಾಯಿತು. ಈ ಬೇಡಿಕೆಗಳ ಬಗ್ಗೆ ಆದಷ್ಟು ಬೇಗನೆ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಬೋರ್ಡ್ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/8th-high-speed-rail-corridor-proposed-between-bengaluru-belagavi-and-mumbai-key-talks-held-443507.html. xn--babytilbehr-pgb.com does not claim ownership of this content. All rights remain with the original publisher.
