
India
oi-Madhusudhan KR
IMD Weather Forecast: ಇದೀಗ ಬೇಸಿಗೆ ಆರಂಭವಾಗಿದ್ದರೂ ಸಹ ಈ ನಡುವೆಯೇ ದೇಶದ ಹಲವೆಡೆ ಆಲಿಕಲ್ಲು ಮಳೆಯಾಗುತ್ತಿದೆ. ಹಾಗೆಯೇ ಮಾರ್ಚ್ ಅಂತ್ಯದಲ್ಲಿ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಮಾರ್ಚ್ ಅಂತ್ಯದಲ್ಲಿ ಸಾಮಾನ್ಯವಾಗಿ ತಾಪಮಾನ ಪ್ರಮಾಣದಲ್ಲಿ ಭಾರೀ ಏರಿಕೆಯಾಗುತ್ತಿತ್ತು. ಆದರೆ, ಈ ಬಾರಿ ಮಳೆ ಆಗುತ್ತಿರುವ ಪರಿಣಾಮ ಹಗಲಿನ ತಾಪಮಾನವು ಗಣನೀಯವಾಗಿ ಕುಸಿದಿದೆ ಎಂದು ವರದಿಯಾಗಿದೆ.

ತಾಪಮಾನದಲ್ಲಿ ಕುಸಿತ
ಬೇಸಿಗೆಯ ಬಿಸಿಲು ಇರಬೇಕಾದ ಮಾರ್ಚ್ ತಿಂಗಳ ಕೊನೆಯಲ್ಲಿ ಉತ್ತರ ಭಾರತದಾದ್ಯಂತ ಅನಿರೀಕ್ಷಿತ ಮಳೆ ಮತ್ತು ಚಳಿ ಆವರಿಸಿದೆ. ಹವಾಮಾನದಲ್ಲಿನ ಈ ದಿಢೀರ್ ಬದಲಾವಣೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ತಿಂಗಳ ಅಂತ್ಯದಲ್ಲಿ ದೆಹಲಿ-ಎನ್‌ಸಿಆರ್, ಚಂಡೀಗಢ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಚಳಿಗಾಲ ಮುಗಿಯಿತು ಎಂದು ಉಣ್ಣೆಯ ಬಟ್ಟೆಗಳನ್ನು ಪ್ಯಾಕ್ ಮಾಡಿ ಎತ್ತಿಟ್ಟಿದ್ದ ಜನರು, ಈಗ ಮತ್ತೆ ಮರಳಿರುವ ಚಳಿಗೆ ಬೆದರಿ ಸ್ವೆಟರ್ ಮತ್ತು ಜಾಕೆಟ್‌ಗಳನ್ನು ಹೊರತೆಗೆಯುವಂತಾಗಿದೆ. ಈ ಭಾಗಗಳಲ್ಲಿ ಗರಿಷ್ಠ ತಾಪಮಾನವು 16ರಿಂದ 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಮಾರ್ಚ್ ತಿಂಗಳ ಸಾಮಾನ್ಯ ತಾಪಮಾನಕ್ಕಿಂತ ಅತ್ಯಂತ ಕಡಿಮೆ ಇರಲಿದೆ ಎಂದು ತಿಳಿಸಿದೆ.
ಹವಾಮಾನ ಇಲಾಖೆ ತಜ್ಞರ ಪ್ರಕಾರ, ದೆಹಲಿ-ಎನ್‌ಸಿಆರ್, ಹರಿಯಾಣ, ಪಂಜಾಬ್, ಚಂಡೀಗಢ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ನಗರಗಳಲ್ಲಿ ಹಗಲಿನ ವೇಳೆ ಗರಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆಯಿದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ಇಷ್ಟೊಂದು ಕಡಿಮೆ ತಾಪಮಾನ ದಾಖಲಾಗುತ್ತಿರುವುದು ಅತ್ಯಂತ ಅಪರೂಪವಾಗಿದೆ.
ಶುಕ್ರವಾರ ಎಲ್ಲೆಲ್ಲಿ ಮಳೆ?
ಇಂದು (ಮಾರ್ಚ್ 20) ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ ಹಾಗೂ ಉತ್ತರ ಪ್ರದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಿಢೀರ್ ಬೀಸುವ ಬಲವಾದ ಗಾಳಿ ಮತ್ತು ಸಿಡಿಲು ಭಾರಿ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ. ಈ ಚಳಿಯ ವಾತಾವರಣವು ಕೇವಲ ಎರಡು ದಿನಗಳ ಕಾಲ ಮಾತ್ರ ಇರಲಿದ್ದು, ನಂತರ ಹವಾಮಾನವು ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಮಾರ್ಚ್ ಅಂತ್ಯದಲ್ಲಿ ಎಲ್ಲೆಲ್ಲಿ ಮಳೆ?
ಮತ್ತೊಂದೆಡೆ ತಜ್ಞರು ಈ ಬಾರಿ ಮಾರ್ಚ್ ಅಂತ್ಯದಲ್ಲಿ ಕೇವಲ ಉತ್ತರ ಭಾರತದಲ್ಲಿ ಅಷ್ಟೇ ಅಲ್ಲದೆ, ಬದಲಿಗೆ ದೇಶದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಉತ್ತರ ಮತ್ತು ಮಧ್ಯ ಭಾರತದ ಭಾಗದ ಹಿಮಾಚಲ ಪ್ರದೇಶ, ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಪೂರ್ವ ಭಾರತದ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂ ಹಾಗೂ ದಕ್ಷಿಣ ಭಾರತದ ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಟ್ಟಿನಲ್ಲಿ ಈ ಬಾರಿ ಬೇಸಿಗೆಯಲ್ಲಿ ಮಳೆಯಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ಹಲವೆಡೆ ಆಲಿಕಲ್ಲಿ ಮಳೆಗೆ ಬೆಳೆಗಳು ನಾಶವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೇನು ಕಾದಿದೆಯೋ ಎನ್ನುವ ಆತಂಕದಲ್ಲಿ ರೈತರಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/imd-weather-forecast-heavy-rain-in-these-states-of-india-in-march-end-temperature-drop-in-north-447777.html. xn--babytilbehr-pgb.com does not claim ownership of this content. All rights remain with the original publisher.
