
India
-Hitesh Y
India-US Trade Deal: ಭಾರತ ಹಾಗೂ ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದಿಂದ ಭಾರೀ ಲಾಭವಾಗಲಿದೆ ಎನ್ನುವ ವಿಚಾರವು ಭಾರೀ ಚರ್ಚೆ ಆಗುತ್ತಿರುವಾಗಲೇ ಭಾರತ ಅಮೆರಿಕ ನಡುವಣ ವ್ಯಾಪಾರ ಒಪ್ಪಂದ – ಭಾರತದ ರೈತರಿಗೆ ನೀಡಿರುವ ಗಲ್ಲು ಶಿಕ್ಷೆ ಆಗಲಿದೆ ಎನ್ನುವ ಗಂಭೀರ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ. ಏನಿದು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಆಮ್ ಆದ್ಮಿ ಪಕ್ಷವು ತೀವ್ರವಾಗಿ ವಿರೋಧಿಸಿದೆ. ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಭಾರತ ದೇಶವು ಪರಂಪರಾನುಗತವಾಗಿ ಕೃಷಿ ಕ್ಷೇತ್ರವನ್ನು ತನ್ನ ಆರ್ಥಿಕತೆಯ ಬೆನ್ನೆಲುಬಾಗಿ ಕಾಪಾಡಿಕೊಂಡು ಬಂದಿದೆ. ಭಾರತೀಯ ರೈತರುಗಳು ವಿಶ್ವದಲ್ಲಿಯೇ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಕೋಟ್ಯಾಂತರ ಸಂಖ್ಯೆಯ ಸಣ್ಣ ಸಣ್ಣ ಹಿಡುವಳಿದಾರರು ಇಂದಿಗೂ ಸಹ ಭಾರತದ ಆರ್ಥಿಕತೆಗೆ ಬೆನ್ನೆಲುಬಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಯಾವುದೋ ಒತ್ತಡ, ಪರಕೀಯರ ಹಿತಾಸಕ್ತಿಗೆ ಬಲಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕವೆಂದು ಹೇಳಿ ಭಾರತೀಯ ರೈತರುಗಳಿಗೆ ಮರಣ ಶಾಸನವನ್ನೇ ಬರೆದುಬಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಭಾರತದ 90 ಕೋಟಿ ರೈತ ವರ್ಗಕ್ಕೆ ಈ ಮೂಲಕ ಗಲ್ಲು ಶಿಕ್ಷೆಯನ್ನೇ ನೀಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಮುಂದುವರಿದು, ಭಾರತದ 145 ಕೋಟಿ ಜನಸಂಖ್ಯೆಯಲ್ಲಿ 85ರಿಂದ 90 ಕೋಟಿ ಜನತೆ ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಸಂಬಂಧಿತ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
ನಮ್ಮ ರೈತರು ಯಾವುದೇ ಯಾಂತ್ರೀಕೃತ ವ್ಯವಸ್ಥೆಗಳಿಲ್ಲದೆ ಕೃಷಿ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ. ಆದರೆ ತದ್ವಿರುದ್ಧವಾಗಿ ಅಮೆರಿಕ ಸಂಪೂರ್ಣ ಯಾಂತ್ರೀಕೃತ ವ್ಯವಸ್ಥೆಗಳಿಂದ ಲಕ್ಷಾಂತರ ಎಕರೆ ಭೂಪ್ರದೇಶಗಳಲ್ಲಿ ಲಕ್ಷಾಂತರ ಬೆಳೆಗಳನ್ನು ಬೆಳೆಯುತ್ತಾರೆ. ಭಾರತದ ರೈತರು ಬೆಳೆಯುವ ಬೇಳೆಕಾಳುಗಳು, ಧಾನ್ಯಗಳು, ಕೆಂಪು ಜೋಳ, ವಿಧಳ ಧಾನ್ಯಗಳು, ಸೋಯಾ, ಹಣ್ಣು ಮತ್ತು ತರಕಾರಿಗಳು ಸೇರಿದಂತೆ ಅನೇಕ ಬೆಳೆಗಳನ್ನು ಇದುವರೆಗೂ ವಿದೇಶಗಳಿಗೆ ರಫ್ತು ಮಾಡುವ ಮೂಲಕ ಉತ್ತಮವಾದ ಬೆಲೆಗಳನ್ನು ನಿರೀಕ್ಷಿಸಬಹುದಾಗಿತ್ತು. ಆದರೆ ಈಗ ಹಿನ್ನಡೆ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವಿನ ಈ ವ್ಯಾಪಾರ ಒಪ್ಪಂದದಲ್ಲಿ ಯಾಂತ್ರೀಕೃತ ವ್ಯವಸ್ಥೆಯಿಂದ ಬೆಳೆದಿರುವ ಅಮೆರಿಕ ದೇಶದ ಲಕ್ಷಾಂತರ ಕೃಷಿ ಬೆಳೆಗಳನ್ನು ಭಾರತವು ಶೂನ್ಯ ಅಥವಾ ಕಡಿಮೆ ಸುಂಕದ ರೂಪದಲ್ಲಿ ಮಾರುಕಟ್ಟೆ ಸೃಷ್ಟಿಸಲು ಹೊರಟಿರುವುದು ನಿಜಕ್ಕೂ ರೈತರು ಕಂಗಾಲಾಗಿರುವ ಸಂಗತಿ. ಅಂದಾಜು 45 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಅಮೆರಿಕದ ಕೃಷಿ ಬೆಳೆಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿದೆ.
ಭಾರತದ ಬಡ ರೈತರು ಬೆಳೆಯುತ್ತಿರುವ ಕೃಷಿ ಬೆಳೆಗಳನ್ನು ಅಮೆರಿಕ ದೇಶಕ್ಕೆ ರಫ್ತು ಮಾಡಬೇಕಿದ್ದಲ್ಲಿ 18 % ಸುಂಕ ಬೆಚ್ಚವನ್ನು ತೆರಬೇಕಿದೆ. ಇದುವೇ ಭಾರತೀಯ ರೈತರುಗಳಿಗೆ ಮೋದಿಯವರು ನೀಡುತ್ತಿರುವ ಗಲ್ಲು ಶಿಕ್ಷೆ . ಪ್ರಧಾನಿ ನರೇಂದ್ರ ಮೋದಿಯವರು ಯಾವುದೋ ಒತ್ತಡಕ್ಕೆ, ಬಾಹ್ಯ ಹಿತಾಸಕ್ತಿಗೆ ಮಣಿದು ದೇಶದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಸೀತಾರಾಮ ಗುಂಡಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಮೆರಿಕ ತನ್ನ ಯಾಂತ್ರೀಕೃತ ಕೃಷಿ ವ್ಯವಸ್ಥೆಯಿಂದ ಬೆಳೆದಿರುವ ಕೃಷಿ ಬೆಳೆಗಳು ತೀರ ಅಗ್ಗ ವಾಗಿರುತ್ತವೆ. ಇವುಗಳನ್ನು ನಮ್ಮ ಭಾರತೀಯ ಮಾರುಕಟ್ಟೆಗಳಿಗೆ ಪರಿಚಯಿಸಿದಾಗ ನಮ್ಮ ರೈತರು ಬೆಳೆದಿರುವ ಬೆಳೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಸಹ ಸಿಗುವುದಿಲ್ಲ. ಮದ್ಯ ತಯಾರಿಕ ಕಾರ್ಖಾನೆಗಳಿಂದ ಬರುವ ಉಳಿದ ಉತ್ಪನ್ನಗಳನ್ನು ಇದುವರೆಗೂ ಕೋಳಿ, ಕುರಿ, ಮೇಕೆ ಹಸು ಇನ್ನಿತರ ಪ್ರಾಣಿಗಳಿಗೆ ಆಹಾರ ರೂಪದಲ್ಲಿ ನೀಡಲಾಗುತ್ತಿತ್ತು. ಇವುಗಳನ್ನು ಸಹ ಅಮೆರಿಕ ದೇಶದಿಂದ ಆಮದು ಮಾಡಿಕೊಳ್ಳುವುದರಿಂದ ನಮ್ಮ ಕೃಷಿ ವಲಯದ ಆರ್ಥಿಕತೆಗೆ ಸಂಪೂರ್ಣ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ರೈತರಗಳು ಬೆಳೆಯುವ ಸೋಯಾಬೀನ್ ತೈಲದಿಂದ ಇದುವರೆಗೂ ಭಾರತೀಯ ಕಾರ್ಖಾನೆಗಳ ಉತ್ಪನ್ನ ಗಳಿಗೆ ಬಹುಪಾಲು ಪೂರೈಕೆ ಆಗುತ್ತಿತ್ತು. ಆದರೆ ಅಮೆರಿಕದಿಂದ ಆಮದಾಗುವ ಈ ತೈಲದಿಂದ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ರೈತರೊಂದಿಗೆ ಸದಾ ಕಾಲ ಇದ್ದು ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯದಲ್ಲಿ ನಡೆಸುವ ಎಲ್ಲ ಪ್ರತಿಭಟನೆಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಪಕ್ಷದ ಮುಖಂಡರುಗಳು ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ತೀವ್ರ ಪ್ರತಿಭಟನೆಯನ್ನು ಮಾಡಲಿದ್ದೇವೆ. ಇದೇ ತಿಂಗಳ 15ರಂದು ಸೋಮವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿನೂತನ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಆಮ್ ಆದ್ಮಿ ಪಾರ್ಟಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/india-us-trade-deal-a-death-sentence-for-indian-farmers-claims-aap-says-party-leaders-amid-row-011-443335.html. xn--babytilbehr-pgb.com does not claim ownership of this content. All rights remain with the original publisher.
