IPL 2026 RCB: ಆರ್‌ಸಿಬಿ ಫ್ಯಾನ್ಸ್​ಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ರೆ ಮೆಟ್ರೋ ಪ್ರಯಾಣ ಉಚಿತ? ವರದಿ | IPL 2026: Free Namma Metro Ride for Fans? BMRCL, RCB in Talks to Offer Travel with Match Tickets

Sports

oi-Madhusudhan KR

IPL 2026 RCB: ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್‌ ಹಬ್ಬ ಇನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಮತ್ತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಡುವೆ ಮಹತ್ವದ ಮಾತುಕತೆ ನಡೆಯುತ್ತಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ಹೊಂದಿರುವವರಿಗೆ ಉಚಿತ ಮೆಟ್ರೋ ಪ್ರಯಾಣದ ಸೌಲಭ್ಯ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಪಂದ್ಯದ ಟಿಕೆಟ್ ತೋರಿಸುವ ಮೂಲಕ ಅಭಿಮಾನಿಗಳು ಸ್ಟೇಡಿಯಂಗೆ ಹೋಗಲು ಮತ್ತು ಬರಲು ಮೆಟ್ರೋ ಬಳಸಬಹುದು. ಪಂದ್ಯದ ಟಿಕೆಟ್‌ನಲ್ಲೇ ಮೆಟ್ರೋ ಪ್ರಯಾಣದ ಶುಲ್ಕವನ್ನೂ ಸೇರಿಸುವ ಅಥವಾ ಟಿಕೆಟ್ ಅನ್ನೇ ಮೆಟ್ರೋ ಪಾಸ್ ಆಗಿ ಬಳಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸ್ಟೇಡಿಯಂ ಸುತ್ತಮುತ್ತ ಉಂಟಾಗುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವುದು ಇದರ ಮುಖ್ಯ ಗುರಿಯಾಗಿದೆ ಎಂದು ತಿಳಿದುಬಂದಿದೆ.

IPL 2026 Free Namma Metro Ride for Fans BMRCL RCB in Talks to Offer Travel with Match Tickets

ಐಪಿಎಲ್ ಟಿಕೆಟ್ ಹೊಂದಿರುವವರಿಗೆ ಉಚಿತ ಮೆಟ್ರೋ ಸೇವೆ?

ಈ ಪ್ರಸ್ತಾವನೆ ಜಾರಿಗೆ ಬಂದರೆ, ಐಪಿಎಲ್ ಟಿಕೆಟ್ ಹೊಂದಿರುವವರು ಯಾವುದೇ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದವರೆಗೆ (ಕ್ರೀಡಾಂಗಣಕ್ಕೆ ಅತಿ ಹತ್ತಿರದ ನಿಲ್ದಾಣ) ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಪಂದ್ಯದ ಟಿಕೆಟ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ನಮ್ಮ ಮೆಟ್ರೋದ ಸ್ವಯಂಚಾಲಿತ ಟಿಕೆಟ್ ಸಂಗ್ರಹಣಾ ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ನೀವು ನೇರವಾಗಿ ಪ್ರವೇಶ ಪಡೆಯಬಹುದು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್‌, ಆರ್‌ಸಿಬಿ ಮ್ಯಾನೇಜ್‌ಮೆಂಟ್, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಡುವೆ ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. “ಆದರೆ, ಈ ಪ್ರಸ್ತಾವನೆಯು ಇನ್ನೂ ಚರ್ಚೆಯ ಹಂತದಲ್ಲಿದೆ. ಯೋಜನೆಗೆ ಸಂಬಂಧಿಸಿದಂತೆ ಇನ್ನಷ್ಟು ಸ್ಪಷ್ಟವಾದ ಚಿತ್ರಣ ಸಿಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು,” ಎಂದು ಮೂಲಗಳು ತಿಳಿಸಿವೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಇದು ಜಾರಿಗೆ ಬಂದರೆ, ಮಾನ್ಯವಾದ ಪಂದ್ಯ ಟಿಕೆಟ್ ಹೊಂದಿರುವ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಹೋಗಿ ಬರುವುದಕ್ಕಾಗಿ ಮೆಟ್ರೋ ಟೋಕನ್ ಖರೀದಿಸುವ ಅಗತ್ಯವಿಲ್ಲ ಅಥವಾ ಕಾರ್ಡ್ ಮೂಲಕ ಶುಲ್ಕ ಪಾವತಿಸುವ ಅವಶ್ಯಕತೆಯೂ ಇರದು. ಅವರು ತಮ್ಮ ಪಂದ್ಯದ ಟಿಕೆಟ್‌ನಲ್ಲಿರುವ ಕ್ಯೂಆರ್‌ ಕೋಡ್ ಅನ್ನು ಮೆಟ್ರೋ ನಿಲ್ದಾಣದ ಸ್ವಯಂಚಾಲಿತ ಟಿಕೆಟ್ ಸಂಗ್ರಹಣಾ ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ನೇರವಾಗಿ ಪ್ರಯಾಣಿಸಬಹುದಾಗಿದೆ.

ಮತ್ತೊಂದು ಮೂಲದ ಪ್ರಕಾರ, “ಈ ಯೋಜನೆಯಿಂದ ಕ್ರೀಡಾಂಗಣಕ್ಕೆ ಬರುವ ಸಾವಿರಾರು ಜನರು ತಮ್ಮ ಸ್ವಂತ ವಾಹನಗಳನ್ನು ಬಳಸುವ ಬದಲು ಮೆಟ್ರೋವನ್ನು ಅವಲಂಬಿಸುತ್ತಾರೆ. ಇದರಿಂದ ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುತ್ತದೆ. ಜೊತೆಗೆ, ಬಿಎಂಆರ್‌ಸಿಎಲ್‌ಗೆ ಹೆಚ್ಚಿನ ಆದಾಯ ಹರಿದುಬರುವ ಸಾಧ್ಯತೆಯಿದೆ,” ಎಂದು ವರದಿಯಾಗಿದೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ, ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಅಂತಲೂ ವರದಿಯಾಗಿದೆ.

ಚೆನ್ನೈ ಮೆಟ್ರೋ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ 2023ರಿಂದಲೇ ಇದೇ ರೀತಿಯ ಒಪ್ಪಂದ ಜಾರಿಯಲ್ಲಿದೆ. ಅಲ್ಲಿ ಐಪಿಎಲ್ ಪಂದ್ಯದ ಟಿಕೆಟ್ ಹೊಂದಿರುವ ವೀಕ್ಷಕರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ

ಐಪಿಎಲ್‌ನ 19ನೇ ಆವೃತ್ತಿಯ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 28ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಮೆಟ್ರೋ, ಬಿಎಂಟಿಸಿ ಬಸ್‌ ಸೇವೆ ವಿಸ್ತರಣೆಗೆ ಪ್ಲ್ಯಾನ್

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುವ ದಿನಗಳಂದು, ಮೆಟ್ರೋ ರೈಲು ಸೇವೆ ಸಮಯವನ್ನು ರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗುವುದು. ಇದು ಎಲ್ಲಾ ಆರು ಟರ್ಮಿನಲ್ ನಿಲ್ದಾಣಗಳಿಂದ ಅನ್ವಯವಾಗಲಿದೆ. ಅಲ್ಲದೆ, ಬಿಎಂಟಿಸಿ ಕೂಡ ಪಂದ್ಯದ ದಿನಗಳಲ್ಲಿ ಬಸ್ ಸಮಯವನ್ನು ವಿಸ್ತರಿಸುವುದಲ್ಲದೆ, ಕ್ರೀಡಾಂಗಣಕ್ಕೆ ಬರುವ ಮತ್ತು ಹೋಗುವ ಅಭಿಮಾನಿಗಳಿಗಾಗಿ ಹೆಚ್ಚಿನ ಸಂಖ್ಯೆಯ ವಿಶೇಷ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ.

ಪಂದ್ಯದ ನಂತರ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳು ಒಂದೇ ಬಾರಿಗೆ ಸೇರುವುದರಿಂದ, ಟೋಕನ್ ನೀಡಲು ಕಷ್ಟವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಬಿಎಂಆರ್‌ಸಿಎಲ್ ಹಿಂದಿನ ಪಂದ್ಯಗಳಂತೆಯೇ ‘ರಿಟರ್ನ್ ಜರ್ನಿ ಪೇಪರ್ ಟಿಕೆಟ್‌’ಗಳನ್ನು ನೀಡುವ ಪದ್ಧತಿಯನ್ನು ಮುಂದುವರಿಸಲಿದೆ ಎಂದು ತಿಳಿದುಬಂದಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-free-namma-metro-ride-for-fans-bmrcl-rcb-in-talks-to-offer-travel-with-match-tickets-447197.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo