
Karnataka
oi-Hitesh Y
Karnataka Tax: ಕರ್ನಾಟಕದಿಂದ ಮತ್ತೆ ನಮ್ಮ ತೆರಿಗೆ – ನಮ್ಮ ಹಕ್ಕು ಅಭಿಯಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸುಳಿವು ಕೊಟ್ಟಿದ್ದಾರೆ. ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು ನೀಡುತ್ತಿದೆ. ಇದನ್ನು ತೆರಿಗೆ ಭಯೋತ್ಪಾದನೆ ಎನ್ನಲೇ, ತೆರಿಗೆ ದರೋಡೆ ಎನ್ನಲೇ ಈ ಪ್ರಶ್ನೆಗೆ ರಾಜ್ಯದ BJP Karnataka ನಾಯಕರು ಉತ್ತರಿಸುವ ಧೈರ್ಯ ಮಾಡುತ್ತಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ರೂ.4.50 ಲಕ್ಷ ಕೋಟಿಗೂ ಹೆಚ್ಚು ಸಂಪನ್ಮೂಲವನ್ನು ತೆರಿಗೆ, ಸೆಸ್, ಸರ್ ಚಾರ್ಜ್ ಮೂಲಕ ಸಂಗ್ರಹಿಸಿದೆ. ಇದಕ್ಕೆ ಪ್ರತಿಯಾಗಿ ನೀಡಿದ್ದು 79,000 ಕೋಟಿ ರೂ. ಮಾತ್ರ. ಕಳೆದ ಮೂರು ವರ್ಷಗಳಲ್ಲಿ ಹಲವಾರು ಬಾರಿ ಈ ತೆರಿಗೆ ದರೋಡೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ದೆಹಲಿಗೆ ಹೋಗಿ ಸಂಸತ್ ಭವನದ ಎದುರಿಗೆ ನಿಂತು ಈ ಅನ್ಯಾಯವನ್ನು ಕೂಗಿಕೂಗಿ ಹೇಳಿದ್ದೇವೆ. ಆಗ ಬಾಯಿ ಮುಚ್ಚಿಕೊಂಡು ಏಳುಕೋಟಿ ಕನ್ನಡಿಗರಿಗೆ ದ್ರೋಹಬಗೆದಿರುವ ಈ ಬಸವರಾಜ ಬೊಮ್ಮಾಯಿ ಹಾಗೂ ಆರ್. ಅಶೋಕ್ ಸೇರಿದಂತೆ ಮೊದಲಾದ ಬಿಜೆಪಿ ನಾಯಕರು ಈಗ ನಮ್ಮ ವಿರುದ್ಧ ಕೂಗು ಹಾಕುತ್ತಿದ್ದಾರೆ.

ಕರ್ನಾಟಕವು ಜಿಎಸ್‌ಟಿ ಸಂಗ್ರಹದಲ್ಲಿ ಇಂದು ಗಮನಾರ್ಹ ಸಾಧನೆ ಮಾಡಿದೆ. ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿ ರಾಜ್ಯ ಇದೆ. ಇನ್ನು ಜಿಎಸ್‌ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್‌ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು ಸಾವಿರಾರು ಕೋಟಿ ರೂಪಾಯಿ ಕಳೆದುಕೊಂಡಿದೆ.
15ನೇ ಹಣಕಾಸಿನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ತೆರಿಗೆ ಪಾಲನ್ನು ನೀಡದೆ, ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡದೆ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ನಷ್ಟವನ್ನು ಸರಿದೂಗಿಸಲು ಪರಿಹಾರ ನೀಡದೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನವನ್ನು ನೀಡದೆ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರವನ್ನು ಸಾಲ ಮಾಡಲೇ ಬೇಕಾದ ಅಸಹಾಯಕ ಪರಿಸ್ಥಿತಿಗೆ ತಳ್ಳಿದೆ. ತೆರಿಗೆ ಹಂಚಿಕೆ, ಜಿಎಸ್‌ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಅನ್ಯಾಯ ಮಾಡದೆ ನಮಗೆ ಸಿಗಬೇಕಾದ ನ್ಯಾಯಬದ್ಧ ಸಂಪನ್ಮೂಲದ ಪಾಲನ್ನು ನೀಡಿದರೆ ಒಂದು ಪೈಸೆ ಸಾಲವನ್ನು ಮಾಡದೆ ರಾಜ್ಯದ ಆರ್ಥಿಕತೆಯನ್ನು ನಿರ್ವಹಿಸುವೆ. ಈ ಸವಾಲನ್ನು ಸ್ವೀಕರಿಸಲು ಬಿಜೆಪಿ ನಾಯಕರು ಸಿದ್ಧರಿದ್ದಾರಾ ಎಂದು ಕೇಳಿದ್ದಾರೆ.
ಮಹಾರಾಷ್ಟ್ರದ ನಂತರ ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ಪ್ರಮಾಣದ ತೆರಿಗೆ ನೀಡುವ ರಾಜ್ಯ ನಮ್ಮದು. ದೇಶದ ಸಂಪತ್ತಿಗೆ ಕರ್ನಾಟಕವು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಕೊಡುಗೆಯನ್ನು ನೀಡುತ್ತಲೇ ಬಂದರೂ ಕೇಂದ್ರದಿಂದ ಕರ್ನಾಟಕಕ್ಕೆ ದೊರೆಯಬೇಕಾದ ನ್ಯಾಯಯುತ ಪಾಲಿನಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ.
ನಮ್ಮ ಸರ್ಕಾರ ಮಾಡಿರುವ ಸಾಲವನ್ನು ಅತಿರಂಜಿತವಾಗಿ ಬಣ್ಣಿಸುವ ಬಿಜೆಪಿ ನಾಯಕರಿಗೆ ಕೇಂದ್ರ ಸರ್ಕಾರ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆಹೊರಿಸಿರುವ ಸಾಲದ ಹೊರೆ ಕಾಣಿಸುವುದೇ ಇಲ್ಲ. ಸನ್ಮಾನ್ಯ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿ ಪಟ್ಟಕ್ಕೇರಿದಾಗ ಇದ್ದ ದೇಶದ ಸಾಲದ ಮೊತ್ತ 51.06 ಲಕ್ಷ ಕೋಟಿ ರೂ., 2026-27ನೇ ಸಾಲಿನ ಬಜೆಟ್ ನಲ್ಲಿ ಇದು 214 ಲಕ್ಷ ಕೋಟಿ ರೂ.ಗೆ ಏರಿದೆ. ಈ ಲೆಕ್ಕದ ಪ್ರಕಾರ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ 4.8 ಲಕ್ಷ ರೂ.ದಷ್ಟು ಸಾಲದ ಹೊರೆ ಇದೆ. ಮೋದಿಯವರ ಸಾಲದ ಹೊರೆ ರಾಜ್ಯದ ಏಳು ಕೋಟಿ ಕನ್ನಡಿಗರ ತಲೆ ಮೇಲೆಯೂ ಇದೆ ಎನ್ನುವುದನ್ನು ಬೊಮ್ಮಾಯಿ ಮತ್ತು ಅಶೋಕ್ ತಿಳಿದುಕೊಂಡು ಮಾತನಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-tax-siddaramaiah-revives-our-tax-our-rights-campaign-targets-centre-over-revenue-share-449095.html. xn--babytilbehr-pgb.com does not claim ownership of this content. All rights remain with the original publisher.
