Karnataka Train: ಕಲಬುರಗಿ – ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ | Karnataka Train: Passenger Struggles Expose Harsh Reality of Rail Travel in Kalyana Karnataka

Karnataka

oi-Hitesh Y

Karnataka Train: ಕಲಬುರಗಿ – ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಹವ್ಯಾಸಿ ಬರಹಗಾರ ಸಿದ್ದು ಮಠಪತಿ ಅವರ ಬರಹ ಇಲ್ಲಿದೆ.

ನನ್ನೂರು ಕಲಬುರಗಿ… ಉರಿಬಿಸಿಲಿನ, ಬೆಂಕಿಯಂಥಾ ಊರು. ವರ್ಷಕ್ಕೋ, ಆರು ತಿಂಗಳಿಗೋ ಒಮ್ಮೆ ಆ ಮಣ್ಣಿನ ವಾಸನೆಗೆ ಕಟಿಬಿದ್ದು ಊರಿಗೆ ಹೋಗುವುದು ನನ್ನ ರೂಢಿ. ನಾನು ಟ್ರಾವೆಲ್ ಮಾಡುವುದುಕ್ಕೆ ತುಂಬಾ ಪ್ರಾಶಸ್ಯ್ತ ಕೊಡುತ್ತೇನೆ. ಯಾಕೆಂದರೆ ದಿನಾಲೂ ಟ್ರಾವೆಲ್ ಮಾಡಲ್ವಲ್ಲ.. ಸೋ ನನಗೆ ಎಲ್ಲವೂ ನೀಟಾಗಿ, ಹೈಜಿನಿಕ್ಕಾಗಿ, ಪ್ರಿಮಿಯಂ ಆಗಿರಬೇಕು. ವಿಮಾನ, ಎಸಿ ಬಸ್ಸು, ಟ್ರೈನಾದರೆ ಎಸಿ ಕೋಚ್, ಇವೆಲ್ಲ ನನ್ನ ಮಿನಿಮಮ್ ಪ್ರೈಯಾರಿಟಿಗಳು.. ಇತ್ತೀಚೆಗೆ ನಮ್ಮೂರಿಗೆ ವಿಮಾನ ಸಂಚಾರ ನಿಂತು ಹೋಗಿದೆ, ರೈಲು ಬಸ್ಸು ಎರಡೇ ಈಗ ಆಯ್ಕೆ. ಆರುನೂರೈವತ್ತು ಕಿ. ಮೀರುಗಳನ್ನ ಕಾರು ಓಡಿಸಿಕೊಂಡು ಹೈರಾಣಾಗುವುದಂತೂ ಹುಚ್ಚುತನ.

Karnataka Train

ನಾನು ಪ್ರಯಾಣದ ವಿಷಯದಲ್ಲಿ ಕಾಂಪ್ರಮೈಜ್ ಆಗದೇ ಇರೋದಕ್ಕೆ ಬಲವಾದ ಕಾರಣವಿದೆ. ಕೊನೆಯ ಬಾರಿಗೆ ನಾನು ಜೆನರಲ್ ಬೋಗಿ ಹತ್ತಿ ಬಹುಶಃ ಹನ್ನೆರಡು ವರ್ಷಗಳೇ ಕಳೆದಿರಬಹುದು. ಅದು ರೈಲಿನ ಬೋಗಿಯಾಗಿರಲಿಲ್ಲ, ಮನುಷ್ಯರನ್ನು ಜೀವಂತವಾಗಿ ಕುದಿಸುವ ಕುಲುಮೆಯಾಗಿತ್ತು. ಅಲ್ಲಿಯ ಸೌಂಡು, ಸ್ಮೆಲ್ಲು, ರಶ್, ರಂಪಾಟಗಳೆಲ್ಲ ನೋಡಿದ ಮೇಲೆ ನಟ್ಟ ನಡುರಾತ್ರಿ ಅನಂತಪುರಂನ ಸ್ಟೇಶನಲ್ಲಿ, ಅರ್ಧ ದಾರಿಯಲ್ಲಿ ಇಳಿದು ಬಿಟ್ಟಿದ್ದೆ. ಉಸಿರುಗಟ್ಟಿಸುವಂತಹ, ನರಕದಂತಹ ಆ ಜೆನರಲ್ ಕೋಚ್ ನನಗೆ ಸಹಿಸಲು ಆಗಲೇ ಇಲ್ಲ.

ಇದೇನಕ್ಕೆ ಹೇಳ್ತಿದ್ದೀನಿ ಅಂದ್ರೆ ನಿನ್ನೆ ಕಲಬುರಗಿಗೆ ಹೊರಡಬೇಕೆಂದು ನನ್ನೂರಿನ ರೈಲು ಹತ್ತಿದೆ, ಯಥಾವತ್ತಾಗಿ AC ಕೋಚ್ ಬುಕ್ ಆಗಿತ್ತು. ಯಶವಂತಪುರದಿಂದ ಹೊರಡೋ ರೈಲು ಹತ್ತಿದೆ. ಬೆಚ್ಚನೆಯ ಹೊದಿಕೆ, ತಣ್ಣನೆಯ ಗಾಳಿ.. ನಡುರಾತ್ರಿ ಎಲ್ಲೋ ರೈಲು ಓಡುತ್ತಿತ್ತು. ವಾಶ್ರೂಮ್‌ಗೆ ಅಂತ ಎದ್ದು, ಆ ಎಸಿ ಕೋಚ್‌ನ ಬಾಗಿಲು ತೆಗೆದು ನೋಡಿದರೆ ವಾಶ್ರೂಮ್ ಅಕ್ಕ ಪಕ್ಕ, ಆ ಗಲೀಜು ಜಾಗದಲ್ಲಿ ಯಾರೋದೋ ತಾಯಿ, ಯಾರೋದೋ ತಂಗಿ, ಯಾರದೋ ಅಕ್ಕ, ಯಾರದೋ ಮಗಳು… ನೆಲದ ಮೇಲೆ ಮುದುರಿಕೊಂಡು ಕೂತಿದ್ದರು. ಅವರ ಮುಖದಲ್ಲಿ ಆಯಾಸ, ಕೈಯಲ್ಲಿ ಹರಿದ ಬ್ಯಾಗುಗಳು, ಆ ಅಸಹಾಯಕತೆ… ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲವೋ, ಸೀಟ್ ಸಿಕ್ಕಿರಲಿಲ್ಲವೋ, ದುಡ್ಡಿರಲಿಲ್ಲವೋ ಏನೋ ಗೊತ್ತಿಲ್ಲ.. ಆದರೆ ನನಗೆ ಯಾಕೋ ತುಂಬಾ ಬೇಜಾರಾಯ್ತು. ಏನೋ ಕಸಿವಿಸಿ. ಮುಂಚೆಯೆಲ್ಲಾ ಹೀಗೆ ಕೂರುವವರನ್ನು ನೋಡಿದಾಗ ಸಿಟ್ಟು ಬರ್ತಿತ್ತು.. ಎಂತಹ ಜನ ಇವರು ಇಲ್ಲಿ ಬಂದು ಕೂಡ್ತಾರೆ ಟಿಕೆಟ್ ಇಲ್ಲದೇ ಅಂತ.. ಆದರೆ ಈಗ ಅವರನ್ನು ನೋಡಿದಾಗ ಪಾಪ ಅನ್ಸುತ್ತೆ.. ಇತ್ತೀಚೆಗೆ ಯಾಕೋ ಸ್ವಲ್ಪ ಸ್ವಲ್ಪವೇ ಮನುಷ್ಯನಾಗ್ತಿದ್ದೀನಿ ಅನ್ನಿಸ್ತು. ಅವರ ಆ ಸ್ಥಿತಿಗೆ ಕಾರಣ ಏನೇ ಇರಬಹುದು ಆದರೆ ಮನೆಯಲ್ಲಿ ಒಬ್ಬ ಸ್ಟಾಂಡರ್ಡ್ ಗಂಡಸಿರಬೇಕು, ಮನೆಯ ಹೆಣ್ಣುಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಜವಾಬ್ದಾರಿಯವನಾಗಿರಬೇಕು. ಹೀಗೆ ಹೇಗೆಂದರೆ ಹಾಗೆ ಪ್ರಯಾಣಿಸಲು ಬಿಡಬಾರದು.

ನಾವೆಲ್ಲ ಮಾತೆತ್ತಿದರೆ… ಎಐ ಅಂತೆ, ಅಭಿವೃದ್ಧಿ ಅಂತೆ, ಮೂರನೇ ಮಹಾಯುದ್ಧ ಅಂತೆ, ರಾಜಕೀಯದ ಚದುರಂಗದಾಟ ಅಂತೆ, ಭಾಷೆಯ ಅಭಿಮಾನ ಅಂತೆ. ದೊಡ್ಡ ದೊಡ್ಡ ಮಾತಾಡ್ತೀವಿ. ಆದರೆ ನಮ್ಮ ಕಣ್ಣ ಮುಂದೆಯೇ ವ್ಯವಸ್ಥೆಯ ಈ ತಾರತಮ್ಯವನ್ನು, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ನರಕದಂಥ ಸ್ಥಿತಿಯಲ್ಲಿ ನೋಡುವುದನ್ನು ಹೇಗೆ ನೆಮ್ಮದಿಯಾಗಿ ಸಹಿಸಿಕೊಳ್ತಾ ಇದ್ದೀವಿ? ಶೌಚಾಲಯದ ವಾಸನೆಯಲ್ಲಿ ಅವರು ಕೂತಿದ್ದರೆ, ಆ ಬಾಗಿಲು ಮುಚ್ಚಿ, ಎಸಿ ಕೋಚ್‌ನ ಬೆಡ್ ಮೇಲೆ ಬಂದು ನಾವೆಲ್ಲ ಹೇಗೆ ನೆಮ್ಮದಿಯಾಗಿ ನಿದ್ದೆ ಮಾಡ್ತಾ ಇದ್ದೀವಿ ಅನ್ನೋದು ವಿಪರ್ಯಾಸ ಮತ್ತು ಅಸಹಾಯಕತೆಯೆನ್ನಿಸಿತು..

Too be honest ನನಗೆ ನಿದ್ದೆ ಬರಲಿಲ್ಲ. ಎಸಿ ಕೋಚ್‌ನ ತಣ್ಣನೆಯ ಗಾಳಿ ನನ್ನ ಮೈಗೇನೋ ತಂಪೆರೆಯುತ್ತಿತ್ತು. ಆದರೆ, ನನ್ನೊಳಗಿದ್ದ ಮನುಷ್ಯ ಮಾತ್ರ ಆ ಬಾಗಿಲಾಚೆಗಿನ ಅಸಹಾಯಕತೆಯ ನಡುವೆ ನಿಂತು ನಡುಗುತ್ತಿದ್ದ.. ಅವರಲ್ಲೊಬ್ಬರಿಗೆ ಬಾರಮ್ಮ ನನ್ನ ಸೀಟಲ್ಲಿ ಕೂತ್ಕೊ ಅಂತ ಹೇಳಬೆಕೆನ್ನಿಸಿದರೂ ಹೇಳಲಾಗದಂತಹ, ನನ್ನದೆಂತಾ ಅಸಾಹಯಕತೆ!

ಬರಹ: ಸಿದ್ದು ಮಠಪತಿ

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-train-passenger-struggles-expose-harsh-reality-of-rail-travel-in-kalyana-karnataka-450241.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo