
Karnataka
oi-Shankrappa Parangi
ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು 36 ತಿಂಗಳ ವೇತನ ಹಿಂಬಾಕಿ, ವೇತನ ಪರಿಷ್ಕರಣೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಕೊನೆಗೂ ಅವರ ಬೇಡಿಕೆ ಈಡೇರುವ ಕಾಲ ಹತ್ತಿರ ಬಂದಿದೆ. ‘ಸಾರಿಗೆ ನೌಕರರ 26 ತಿಂಗಳ ಹಿಂಬಾಕಿ ಬಿಡುಗಡೆ ಮಾಡಲಾಗುವುದು. ಶೇ.3 ಹಾಗೂ ಶೇ.5ರಷ್ಟು ವೇತನ ಹೆಚ್ಚಳ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಕೆಎಸ್ಆರ್ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ತಿಳಿಸಿದರು. ಈ ಮೂಲಕ ಸಾರಿಗೆ ಸಿಬ್ಬಂದಿಗೆ ಗುಡ್ನ್ಯೂಸ್ ಸಿಕ್ಕಂತಾಗಿದೆ.
ರಾಜ್ಯದ ನಾಲ್ಕು ಸಾರಿಗೆ ನಿಮಗಳ ಕಾರ್ಮಿಕ ಸಂಘಟನೆಗಳು ಜಂಟಿ ಕ್ರಿಯಾ ಸಮಿತಿ ಮುಖಂಡರೊಂದಿಗೆ ಸೋಮವಾರ (ಏ.6) ಅಕ್ರಂ ಪಾಷಾ ಅವರು ವೇತನ ಹೆಚ್ಚಳ, ವೇತನ ಹಿಂಬಾಕಿ ಸೇರಿ ವಿವಿಧ ಬೇಡಿಕೆಗಳ ಕುರಿತು ಮಹತ್ವದ ಚರ್ಚೆ ರ್ಚಿಸಿದರು.

ಹಿಂಬಾಕಿ ಬಿಡುಗಡೆ, ವೇತನ ಹೆಚ್ಚಳ ಕುರಿತು ಮತ್ತೆ ಸಭೆ
2021ರ ಜ.1ರಿಂದ 2023ರ ಫೆ. 28ರವರೆಗೆ 26 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡಲಾಗುವುದು ಎಂದು ತಿಲಿಸಿದ್ದಾರೆ. ಮಾತ್ರವಲ್ಲದೇ 2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬಿಎಂಟಿಸಿ ನೌಕರರಿಗೆ ಶೇ.3 ಹಾಗೂ ಎನ್ಡಬ್ಲುಕೆಆರ್ಟಿಸಿ, ಕೆಎಸ್ಆರ್ಟಿಸಿ ಮತ್ತು ಕೆಕೆಆರ್ಟಿಸಿ ಸೇರಿ ಉಳಿದ ಮೂರು ನಿಗಮದ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಳ ಮಾಡುವ ಬಗ್ಗೆ ಅಕ್ರಂ ಪಾಷಾ ಅವರು ಸಮಿತಿ ಮುಖಂಡರ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ. ಇದರ ಕುರಿತು ಚರ್ಚಿಸಲು ಇದೇ ತಿಂಗಳ ಏಪ್ರಿಲ್ 17ರಂದು ದಿನಾಂಕ ನಿಗದಿ ಮಾಡಿದ್ದಾರೆ.
1271 ಕೋಟಿ ರೂ. ಬಿಡುಗಡೆ ಸರ್ಕಾರ ಒಪ್ಪಿಗೆ
ಈ ಮೂಲಕ ಕೆಲವು ವರ್ಷಗಳಿಂದ ಹೋರಾಟ ನಡೆಸಿದ್ದ ಸಾರಿಗೆ ನೌಕರರಗೆ ಒಂದು ಹಂತಕ್ಕೆ ಜಯ ಸಿಕ್ಕಂತಾಗಿದೆ. ಅವರ ಒಂದೊಂದೇ ಬೇಡಿಕೆಗಳು ಈಡೇರಿವು ಕಾಲ ಸನ್ನಿಹಿತವಾಗಿದೆ. ಸರ್ಕಾರ ಈ ಹಿಂದೆ ಹಿಂಬಾಕಿ ಬಿಡುಗಡೆ ಕುರಿತು ಆದೇಶಿಸಿತು. ಅದರಂತೆ ಸಭೆಯಲ್ಲಿ ಎಂಡಿ ಅವರು ತಿಳಿಸಿದ್ದು, ಅವರೇ ಹೇಳಿದಂತೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಒಟ್ಟು 1271 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ನಂತರ ಉಳಿದ ವೇತನ ಹಿಂಬಾಕಿ ಪಾವತಿಸಲಾಗುವುದು ಎಂದರು ಭರವಸೆ ನೀಡಿದ್ದಾರೆ.
36 ತಿಂಗಳ ವೇತನ ಹಿಂಬಾಕಿ ಕೊಡಿ, ಶಿಸ್ತು ಕ್ರಮ ರದ್ದುಗೊಳಿಸಿ
ಅಕ್ರಂ ಪಾಷಾ ಅವರ ನಿರ್ಧಾರಕ್ಕೆ ಆಕ್ಷೇಪ ಎತ್ತಿದ ಸಮಿತಿ ಮುಖಂಡರು 26 ತಿಂಗಳ ವೇತನ ಹಿಂಬಾಕಿ ಜೊತೆಗೆ 2020 ಜನವರಿ 1ರಿಂದ ಡಿಸೆಂಬರ್ 31ರವರೆಗಿನ 12 ತಿಂಗಳದ್ದು ಸೇರಿ ಎಲ್ಲ ತಿಂಗಳ ವೇತನ ಹಿಂಬಾಕಿ ಪಾವತಿಸುವಂತೆ ಆಗ್ರಹಿಸಿದರು. ಇದರೊಂದಿಗೆ ವೇತನ ಹೆಚ್ಚಳವನ್ನು ಸಭೆಯಲ್ಲಿ ಪ್ರಕಟಿಸುವಂತೆ ಅವರು ಮನವಿ ಮಾಡಿದರು. ಮಾತ್ರವಲ್ಲದೇ ಹಿಂದಿನ ವರ್ಷ ಮುಷ್ಕರದ ವೇಳೆ ಪಾಲ್ಗೊಂಡಿದ್ದ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಆ ಶಿಸ್ತು ಕ್ರಮ ರದ್ದುಗೊಳಿಸುವುದು ಸೇರಿದಂತೆ ಕೆಲವು ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು.
ಈಗಾಗಲೇ ತಿಳಿಸಿದಂತೆ ನಾಲ್ಕು ನಿಗಮಗಳ ನೌಕರರಿಗೆ ವೇತನ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು. ಅದನ್ನು ಮತ್ತೊಮ್ಮೆ ನಿಮ್ಮೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು. ಅಲ್ಲದೇ ಮುಷ್ಕರದ ವೇಳೆ ನಿಯಮ 23ರಡಿ ಮುಷ್ಕರ ನಿರತ ನೌಕರರ ಮೇಲೆ ಕೈಗೊಳ್ಳಲಾದ ಕ್ರಮವನ್ನು ನಿಯಮ 22ಕ್ಕೆ ಬದಲಾಯಿಸಲಾಗುವುದು. 26 ತಿಂಗಳ ಹಿಂಬಾಕಿ ಬಳಿಕ ಉಳಿದ ಬಾಕಿ ವೇತನ ಹಿಂಬಾಕಿಗೆ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಅಕ್ರಂ ಪಾಷಾ ತಿಳಿಸಿದರು. ಈ ಮೇಲಿನ ವಿಷಯಗಳ ಚರ್ಚೆ, ಒತ್ತಾಯ, ಮನವಿ ಕುರಿತು ಏಪ್ರಿಲ್ 17ರಂದು ಅಧಿಕಾರಿಗಳು ಮತ್ತು ಸಾರಿಗೆ ನೌಕರರ ಮುಖಂಡರು ಮತ್ತೊಮ್ಮೆ ಸಭೆ ಸೇರಲಿದ್ದಾರೆ. ಅಂದು ಸಹ ಮಹತ್ವದ ಘೋಷಣೆ ಹೊರ ಬೀಳುವ ನಿರೀಕ್ಷೆಗಳು ಇವೆ.
ಬಸ್ ಟಿಕೆಟ್ ದರ ಏರಿಕೆ ಆಗಲ್ಲ, ಚಿಂತೆ ಬೇಡ; ರಾಮಲಿಂಗಾ ರೆಡ್ಡಿ
ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದಾಗಿ ತೈಲ ಪೂರೈಕೆ ಕೊರತೆ ಉಂಟಾಗಿದೆ. ಇದರಿಂದ ಇಂಧನ ಬೆಲೆ ಏರಿಕೆ ಆಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿವೆ. ಸದ್ಯಕ್ಕೆ ಕೆಎಸ್ಆರ್ಟಿಸಿ ಸೇರಿ ಸಾರಿಗೆ ಬಸ್ಗಳ ಪ್ರಯಾಣ ದರ ಹೆಚ್ಚಿಸುವುದಿಲ್ಲ ಎನ್ನುವ ಮೂಲಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜ್ಯ ಜನರಿಗೆ ಗುಡ್ನ್ಯೂಸ್ ನೀಡಿದ್ದಾರೆ.
ಯುದ್ಧದಿಂದಾಗಿ ರಾಜ್ಯದಲ್ಲಿ ಇಂಧನ ಸಮಸ್ಯೆ ತಲೆದೂರದಂತೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದೇವೆ. ಅಡುಗೆ ಅನಿಲ ಸಮಸ್ಯೆ, ಪೂರೈಕೆ ಕೊರತೆ ಆಗದಂತೆ ನಮ್ಮ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಕ್ರಮ ವಹಿಸಿದೆ. ಇಂಧನ, ಗ್ಯಾಸ್ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರ, ಕೇಂದ್ರ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಯುದ್ಧ ಪರಿಸ್ಥಿತಿ ನಮ್ಮ ಕೈಯಲಿಲ್ಲ. ಯುದ್ಧ ನಿಂತರೆ ಎಲ್ಲ ಸಮಸ್ಯೆಗಳಿಗೆ ತ್ವರಿತ ಪರಿಹಾರ ಸಿಗುತ್ತದೆ ಎಂದು ಅವರು ವಿವರಿಸಿದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/ksrtc-employees-26-months-arrears-worth-rs-1271-cr-to-be-released-salary-hike-meeting-on-april-17-449657.html. xn--babytilbehr-pgb.com does not claim ownership of this content. All rights remain with the original publisher.
