
India
oi-Manohara M
ನವದೆಹಲಿ: ಜಾಗತಿಕವಾಗಿ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತು ಪೂರೈಕೆ ಸರಪಳಿಯಲ್ಲಿನ ಏರುಪೇರುಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಕೋವಿಡ್ ಸಮಯದಂತೆ ಲಾಕ್ಡೌನ್ ಜಾರಿಯಾಗಲಿದೆ ಎಂಬ ವದಂತಿಗಳು ಹರಡಿದ್ದವು. ಇದಕ್ಕೆ ಕೇಂದ್ರ ಸರ್ಕಾರ ಕೊನೆಗೂ ತೆರೆ ಎಳೆದಿದೆ. ಯಾವುದೇ ರೀತಿಯ ಲಾಕ್ಡೌನ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ, ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಮತ್ತು ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದೆ.
ಇಂಧನ ಬಿಕ್ಕಟ್ಟು ಅಥವಾ ಜಾಗತಿಕ ರಾಜಕೀಯ ವಿದ್ಯಮಾನಗಳ ಕಾರಣ ನೀಡಿ ದೇಶದಲ್ಲಿ ಲಾಕ್ಡೌನ್ ಹೇರುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ನಾಗರಿಕರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಅಭಯ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರುತ್ತಿದ್ದರೂ, ಜನಸಾಮಾನ್ಯರ ಮೇಲೆ ಹೊರೆಯಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 10 ರೂಪಾಯಿ ಕಡಿತಗೊಳಿಸಿದೆ.

ದೇಶದ ಒಳಗಡೆ ಇಂಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ರಫ್ತು ಸುಂಕವನ್ನು ವಿಧಿಸಿದೆ. ಅಂದರೆ, ದೇಶದ ತೈಲ ಕಂಪನಿಗಳು ಮೊದಲು ದೇಶೀಯ ಮಾರುಕಟ್ಟೆಗೆ ಇಂಧನ ಪೂರೈಸಬೇಕು, ಆನಂತರವಷ್ಟೇ ವಿದೇಶಕ್ಕೆ ರಫ್ತು ಮಾಡಲು ಅವಕಾಶ ನೀಡಲಾಗಿದೆ. ತೈಲ ಬೆಲೆ ಏರಿಕೆಯ ಭಾರಿ ಆರ್ಥಿಕ ಹೊರೆಯನ್ನ ಗ್ರಾಹಕರಿಗೆ ವರ್ಗಾಯಿಸುವ ಬದಲು, ಸರ್ಕಾರವೇ ಅದನ್ನು ಭರಿಸುವ ಮೂಲಕ ಜನರಿಗೆ ರಕ್ಷಣೆ ನೀಡುತ್ತಿದೆ.
ವದಂತಿಗಳಿಗೆ ಕಿವಿಗೊಡಬೇಡಿ
ಪಶ್ಚಿಮ ಏಷ್ಯಾದಲ್ಲಿನ ಇರಾನ್-ಇಸ್ರೇಲ್ ಯುದ್ಧದ ಭೀತಿಯಿಂದಾಗಿ ಭಾರತದಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗಬಹುದು ಅಥವಾ ಲಾಕ್ಡೌನ್ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಎಲ್ಲ ಆತಂಕಗಳಿಗೆ ಈಗ ಸರ್ಕಾರದ ಅಧಿಕೃತ ಪ್ರಕಟಣೆ ಪೂರ್ಣವಿರಾಮ ಹಾಕಿದೆ. ಸರ್ಕಾರದ ಈ ಭರವಸೆಯು ಗ್ರಾಹಕರಿಗೆ ಮತ್ತು ವ್ಯಾಪಾರ ವರ್ಗಕ್ಕೆ ನೆಮ್ಮದಿ ತಂದಿದೆ. ಇಂಧನ ಬೆಲೆ ಇಳಿಕೆಯು ಸಾರಿಗೆ ವೆಚ್ಚವನ್ನು ತಗ್ಗಿಸಲು ಮತ್ತು ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿಡಲು ಇದು ಸಹಕಾರಿಯಾಗಲಿದೆ.
ವಿಶ್ವದ ಪ್ರಮುಖ ರಾಷ್ಟ್ರಗಳು ಇಂಧನ ಉಳಿತಾಯಕ್ಕಾಗಿ ಬೆಲೆ ಏರಿಕೆ, ವಾರಕ್ಕೆ 4 ದಿನಗಳ ಕೆಲಸದ ಅವಧಿ ಮತ್ತು ಶಾಲಾ-ಕಾಲೇಜುಗಳ ರಜೆಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತವು ಇಂಧನ ಲಭ್ಯತೆ ಮತ್ತು ಕೈಗೆಟುಕುವ ದರದಲ್ಲಿ ಜಗತ್ತಿಗೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಹೇಳಿದ್ದಾರೆ.
ವಾಣಿಜ್ಯ ಎಲ್ಪಿಜಿ ಹಂಚಿಕೆ ಶೇ.70ಕ್ಕೆ ಏರಿಕೆ
ಇತ್ತೀಚೆಗೆ ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗಿದ್ದ ವ್ಯತ್ಯಯ ಮತ್ತು ಹೋಟೆಲ್ ಉದ್ಯಮ ಎದುರಿಸುತ್ತಿದ್ದ ಸಂಕಷ್ಟಕ್ಕೆ ಮುಕ್ತಿ ನೀಡಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯಗಳಿಗೆ ನೀಡಲಾಗುವ ವಾಣಿಜ್ಯ ಎಲ್ಪಿಜಿ ಹಂಚಿಕೆಯನ್ನು ಶೇ. 70ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಇದು ಹೋಟೆಲ್ ಮತ್ತು ಸಣ್ಣ ಉದ್ದಿಮೆದಾರರಿಗೆ ದೊಡ್ಡ ನೆಮ್ಮದಿ ನೀಡಲಿದೆ. ಯಾವ ಕೈಗಾರಿಕೆಗಳಲ್ಲಿ ಪೈಪ್ಡ್ ಗ್ಯಾಸ್ ಪರ್ಯಾಯವಾಗಿ ಬಳಸಲು ಸಾಧ್ಯವಿಲ್ಲವೋ ಅಂತಹ ಉದ್ದಿಮೆಗಳಿಗೆ ಪೂರೈಕೆಯಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದಾರೆ.
ಜಾಗತಿಕವಾಗಿ ಇಂಧನ ಬೆಲೆಗಳು ಶೇ.20ರಿಂದ 30ರಷ್ಟು ಏರಿಕೆಯಾಗಿದ್ದು, ಹಲವೆಡೆ ‘ಆಡ್-ಈವನ್’ (Odd-Even) ಸಂಚಾರ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿಯೂ ಭಾರತವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 10 ರೂಪಾಯಿ ಕಡಿತಗೊಳಿಸಿರುವುದು ಮತ್ತು ಎಲ್ಪಿಜಿ ಪೂರೈಕೆಯನ್ನು ಹೆಚ್ಚಿಸಿರುವುದು ಭಾರತದ ಇಂಧನ ಭದ್ರತೆಯನ್ನು ಎತ್ತಿ ತೋರಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಉತ್ಪಾದನಾ ವೆಚ್ಚ ತಗ್ಗಲಿದ್ದು, ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳಲಿವೆ. ವಿಶೇಷವಾಗಿ ವಾಣಿಜ್ಯ ಸಿಲಿಂಡರ್ ಅವಲಂಬಿತ ಹೋಟೆಲ್ ಮತ್ತು ಸಣ್ಣ ಕೈಗಾರಿಕೆಗಳಿಗೆ ಈ ನಿರ್ಧಾರವು ಸಂಜೀವಿನಿಯಾಗಲಿದೆ ಎಂದು ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/no-lockdown-in-india-central-government-clarifies-amid-global-fuel-crisis-rumours-excise-duty-reduce-448543.html. xn--babytilbehr-pgb.com does not claim ownership of this content. All rights remain with the original publisher.
