
Karnataka
oi-Manohara M
ಗದಗ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನಿಂದ 11 ಲಕ್ಷ ಲಂಚದ ಹಣ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಶಾಸಕ ಹಾಗೂ ಅವರೊಂದಿಗೆ ಇಬ್ಬರು ವೈಯಕ್ತಿಕ ಸಹಾಯಕರನ್ನೂ ವಶಕ್ಕೆ ಪಡೆದಿದ್ದಾರೆ. ಚಿಂಚಿಲಿ ಮೂಲದ ಪ್ರಥಮ ದರ್ಜೆ ಗುತ್ತಿಗೆದಾರ ವಿಜಯ ಪುಜಾರ್ ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.
ಮೊದಲ ಹಂತದಲ್ಲಿ ₹5 ಲಕ್ಷಕ್ಕೆ ಬೇಡಿಕೆ
ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳಿಗೆ ಅನುಮೋದನೆ ನೀಡುವ ಹಾಗೂ ರಸ್ತೆ ಎರಡೂ ಬದಿಗಳಲ್ಲಿ ರಿಟೈನಿಂಗ್ ವಾಲ್ ನಿರ್ಮಾಣಕ್ಕೆ ಸಹಕರಿಸುವ ಹೆಸರಿನಲ್ಲಿ ₹11 ಲಕ್ಷ ಲಂಚಕ್ಕೆ ಶಾಸಕ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಪ್ರಾಥಮಿಕ ಕಂತುವಾಗಿ ₹5 ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಶಾಸಕ ಚಂದ್ರು ಲಮಾಣಿ, ಅವರ ಆಪ್ತ ಸಹಾಯಕರಾದ ಮಂಜುನಾಥ್ ವಾಲ್ಮೀಕಿ ಹಾಗೂ ಗುರುನಾಯಕ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಗುತ್ತಿಗೆದಾರರಿಂದ ಹಣ ಪಡೆಯುತ್ತಿದ್ದಾಗ ಶಾಸಕರ ಜೊತೆಗೆ ಇಬ್ಬರು ಪಿಎಗಳು ಕೂಡ ಸಿಕ್ಕಿಬಿದ್ದಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕ್ಲಾಸ್-1 ಗುತ್ತಿಗೆದಾರ ವಿಜಯ್ ಅವರಿಗೆ ರಸ್ತೆ ಬದಿ ತಡೆಗೋಡೆ ನಿರ್ಮಾಣ ಕಾಮಗಾರಿ ವಹಿಸಲು ಒಟ್ಟು ₹11 ಲಕ್ಷ ಲಂಚ ನೀಡುವಂತೆ ಕೇಳಲಾಗಿತ್ತು ಎನ್ನಲಾಗಿದೆ. ಈ ಕುರಿತು ದೂರು ದಾಖಲಾದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಕಾರ್ಯಾಚರಣೆ ನಡೆಸಿದ್ದಾರೆ.
ಮೊದಲ ಹಂತದಲ್ಲಿ ₹5 ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರಿಬ್ಬರು ವೈಯಕ್ತಿಕ ಸಹಾಯಕರನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿಯಲಾಗಿದೆ. ಸದ್ಯ ಮೂವರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.
ವೃತ್ತಿಯಲ್ಲಿ ವೈದ್ಯ
2023ರ ಕರ್ನಾಟಕ ವಿಧಾನಸಭಾ ಚುನಾವಣೆ 2023 ವೇಳೆ ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸಿ ಶಿರಹಟ್ಟಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಮಾಣಿ ಅವರು 74,489 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಅವರ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದ ಸ್ವತಂತ್ರ ಅಭ್ಯರ್ಥಿ ರಾಮಕೃಷ್ಣ ಶಿದ್ಲಿಂಗಪ್ಪ ದೊಡ್ಡಮನಿ ಅವರನ್ನು 28,520 ಮತಗಳ ಅಂತರದಿಂದ ಸೋಲಿಸಿದ್ದರು. ಇದಾದ ಬಳಿಕ ವಿಧಾನಸಭೆಯಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಲಮಾಣಿ ಸುದ್ದಿಯಾಗಿದ್ದರು. ಸಚಿವರು ಮತ್ತು ಇತರ ರಾಜಕಾರಣಿಗಳನ್ನು ಒಳಗೊಂಡಿದ್ದ ಎಂದು ಹೇಳಲಾದ “ಹನಿ ಟ್ರ್ಯಾಪ್” ಪ್ರಕರಣದ ತನಿಖೆಗೆ ಒತ್ತಾಯಿಸುವ ವೇಳೆ ಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿದರು ಎಂಬ ಆರೋಪ ಕೇಳಿಬಂದಿತ್ತು.
ಕಳೆದ ಮಾರ್ಚ್ ಬಜೆಟ್ ಅಧಿವೇಶನದ ಕೊನೆಯ ದಿನ ಸ್ಪೀಕರ್ ಕುರ್ಚಿಗೆ ಕಾಗದಗಳನ್ನು ಎಸೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಚಂದ್ರು ಲಮಾಣಿ ಸೇರಿದಂತೆ 17 ಬಿಜೆಪಿ ಶಾಸಕರನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಿದ್ದರು. ಈ ಬೆಳವಣಿಗೆಗಳು ಲಮಾಣಿ ಅವರ ರಾಜಕೀಯ ಜೀವನದಲ್ಲಿ ಪ್ರಮುಖ ತಿರುವುಗಳಾಗಿ ಗುರುತಿಸಲ್ಪಟ್ಟಿವೆ. ಈಗ ಲೋಕಾಯುಕ್ತ ಬಲೆಗೂ ಬಿದ್ದು ವಿವಾದಕ್ಕೆ ಗುರಿಯಾಗಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/lokayukta-raid-bjp-mla-chandru-lamani-caught-in-11-lakh-rupees-bribery-case-in-gadag-444587.html. xn--babytilbehr-pgb.com does not claim ownership of this content. All rights remain with the original publisher.
