
Karnataka
oi-Manohara M
ಬೆಂಗಳೂರು: ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಎಚ್ಚರಿಸಿದ್ದಾರೆ. ಶುಕ್ರವಾರ ವಿವಿಧ ತೈಲ ಕಂಪನಿಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ಅಡುಗೆ ಅನಿಲ ವಿತರಣಾ ವ್ಯವಸ್ಥೆಯ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
ಸಭೆಯ ನಂತರ ಮಾತನಾಡಿದ ಸಚಿವರು, ಸರ್ಕಾರ ನಿಗದಿಪಡಿಸಿರುವ ದರದಲ್ಲೇ ಗ್ರಾಹಕರಿಗೆ ಸಿಲಿಂಡರ್ ವಿತರಿಸಬೇಕು. ನಿಯಮ ಉಲ್ಲಂಘಿಸಿ ಹೆಚ್ಚಿನ ಹಣ ವಸೂಲಿ ಮಾಡುವ ಏಜೆನ್ಸಿಗಳು ಅಥವಾ ಕಂಪನಿಗಳ ಪರವಾನಗಿ ರದ್ದುಪಡಿಸಿ, ಅಂತಹ ಸಂಸ್ಥೆಗಳಿಗೆ ಬೀಗ ಹಾಕಲು ಹಿಂಜರಿಯುವುದಿಲ್ಲ ಎಂದು ಗುಡುಗಿದ್ದಾರೆ. ಸರ್ಕಾರಿ ಸ್ವಾಮ್ಯದ ಕಂಪನಿಗಳೂ ಸೇರಿದಂತೆ ಎಲ್ಲ ವಿತರಕರು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

ಅಕ್ರಮ ಸಿಲಿಂಡರ್ ವಶ
ಇದೇ ವೇಳೆ ಕಾಳಸಂತೆಯಲ್ಲಿ ಎಲ್ಪಿಜಿ ಸಿಲಿಂಡರ್ಗಳ ಅಕ್ರಮ ಮಾರಾಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, “ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಮತ್ತು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಚುರುಕುಗೊಂಡಿದೆ. ಗ್ರಾಹಕರಿಗೆ ತೊಂದರೆ ನೀಡುವ ಯಾವುದೇ ಅಕ್ರಮ ದಂಧೆಯನ್ನು ಸಹಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಸಾರ್ವಜನಿಕರು ಸಿಲಿಂಡರ್ ದರಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ಗಮನಕ್ಕೆ ತರಬಹುದಾಗಿದ್ದು, ಅಕ್ರಮ ತಡೆಗೆ ಸರ್ಕಾರವು ಹದ್ದಿನ ಕಣ್ಣಿಟ್ಟಿದೆ.
ರಾಜ್ಯಕ್ಕೆ ಅಗತ್ಯವಿರುವಷ್ಟು ಎಲ್ಪಿಜಿ ಪೂರೈಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರದಿಂದ ಎಷ್ಟು ಪ್ರಮಾಣದಲ್ಲಿ ಸಿಲಿಂಡರ್ಗಳು ಪೂರೈಕೆಯಾಗುತ್ತವೆಯೋ ಅಷ್ಟನ್ನೇ ನಾವು ಜನರಿಗೆ ವಿತರಿಸುತ್ತಿದ್ದೇವೆ, ಹೀಗಾಗಿ ಯಾವುದೇ ಕೊರತೆ ಉಂಟಾದಲ್ಲಿ ಅದಕ್ಕೆ ಕೇಂದ್ರವೇ ಜವಾಬ್ದಾರಿ ಹೊರಬೇಕು ಎಂದು ಅವರು ತಿಳಿಸಿದರು.
ಹೆಚ್ಚಿನ ಪೂರೈಕೆಗೆ ಒತ್ತಡ
ಪೂರೈಕೆಯಲ್ಲಿನ ಕಡಿತಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ. ನಾವು ಈಗಾಗಲೇ ಕೇಂದ್ರದ ಮೇಲೆ ಹೆಚ್ಚಿನ ಪ್ರಮಾಣದ ಸಿಲಿಂಡರ್ ಪೂರೈಸುವಂತೆ ಒತ್ತಡ ಹೇರುತ್ತಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು. ಪ್ರಸ್ತುತ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ವಿತರಣಾ ವ್ಯವಸ್ಥೆಯನ್ನು ಸುಗಮವಾಗಿಡಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು. ಸದ್ಯದ ಪೂರೈಕೆಯ ನಡುವೆಯೂ ರಾಜ್ಯದಲ್ಲಿ ಅಡುಗೆ ಅನಿಲ ವಿತರಣೆಯ ಅಂಕಿಅಂಶಗಳನ್ನು ಸಚಿವರು ಬಿಡುಗಡೆ ಮಾಡಿದರು.
ಗೃಹ ಬಳಕೆ ಸಿಲಿಂಡರ್ಗಳು ಈವರೆಗೆ ಒಟ್ಟು 88,99,796 ಸಿಲಿಂಡರ್ಗಳನ್ನು ಜನರಿಗೆ ತಲುಪಿಸಲಾಗಿದೆ. ಸುಮಾರು 5,30,426 ವಾಣಿಜ್ಯ ಸಿಲಿಂಡರ್ಗಳ ವಿತರಣೆಯಾಗಿದೆ. ಒಟ್ಟು 1,17,522 ಸಿಲಿಂಡರ್ಗಳನ್ನು ವಿತರಿಸಲಾಗಿದ್ದು, ಇದರ ಪೂರೈಕೆ ದರವು ಶೇ. 98ರಷ್ಟು ಸ್ಥಿರವಾಗಿದೆ. ಗೃಹ ಬಳಕೆಯ ಸಿಲಿಂಡರ್ಗಳ ಸರಬರಾಜಿನಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಿಲ್ಲ ಎಂದು ಮಾಹಿತಿ ನೀಡಿದ ಸಚಿವರು, ಕೇಂದ್ರದಿಂದ ಬರುವ ಕೋಟಾವನ್ನು ಸರಿಯಾಗಿ ಹಂಚಿಕೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/lpg-overpricing-strict-action-against-companies-above-fixed-price-warns-minister-kh-muniyappa-450067.html. xn--babytilbehr-pgb.com does not claim ownership of this content. All rights remain with the original publisher.
