LPG ಕೊರತೆಯಿಂದ ಮರಗಳಿಗೆ ಕೊಡಲಿ ಭೀತಿ: ಅಕ್ರಮ ಮರ ಕಡಿತ ತಡೆಯಲು ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಖಡಕ್ ಸೂಚನೆ | LPG Shortage in Karnataka: Forest Minister Warns Officials Against Illegal Tree Cutting for Fuel

Karnataka

oi-Pragathi S

ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದ ನೇರ ಪರಿಣಾಮ ಇದೀಗ ಕರ್ನಾಟಕದ ಮೇಲೂ ಬೀರಲಾರಂಭಿಸಿದೆ. ರಾಜ್ಯದಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಿದ್ದು, ಹೋಟೆಲ್ ಉದ್ಯಮ ಸೇರಿದಂತೆ ಜನಸಾಮಾನ್ಯರು ಪರ್ಯಾಯ ವ್ಯವಸ್ಥೆಯ ಮೊರೆ ಹೋಗುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಹಳ್ಳಿಗಳು, ಅರೆ-ನಗರ ಪ್ರದೇಶಗಳು ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಏಕಾಏಕಿ ಸೌದೆ (ಕಟ್ಟಿಗೆ) ಬೇಡಿಕೆ ತೀವ್ರವಾಗಿ ಹೆಚ್ಚಾಗಿದೆ. ಸೌದೆಯ ಈ ದಿಢೀರ್ ಬೇಡಿಕೆಯು ರಾಜ್ಯದ ಅರಣ್ಯ ಸಂಪತ್ತಿಗೆ ದೊಡ್ಡ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಅಕ್ರಮ ಮರ ಕಡಿತದ ಭೀತಿ ಎದುರಾಗಿದೆ.

ಈ ಗಂಭೀರ ಪರಿಸ್ಥಿತಿಯನ್ನು ಅರಿತಿರುವ ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಇಲಾಖೆಗೆ ಹೈ-ಅಲರ್ಟ್ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಡು, ಕಾಡಿನ ಅಂಚು ಹಾಗೂ ಸರ್ಕಾರಿ ಜಮೀನುಗಳಲ್ಲಿರುವ ಮರಗಳಿಗೆ ಕೊಡಲಿ ಏಟು ಬೀಳಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

LPG Shortage

ಅಧಿಕಾರಿಗಳೇ ನೇರ ಹೊಣೆ

ಗ್ಯಾಸ್ ಸಿಗುತ್ತಿಲ್ಲ ಎಂಬ ನೆಪವೊಡ್ಡಿ, ಅರಣ್ಯ ಪ್ರದೇಶ ಅಥವಾ ಸರ್ಕಾರಿ ಭೂಮಿಯಲ್ಲಿ ಮರಗಳನ್ನು ಅಕ್ರಮವಾಗಿ ಕಡಿದರೆ, ಆಯಾ ವ್ಯಾಪ್ತಿಯ ಅರಣ್ಯ ವಲಯಾಧಿಕಾರಿಗಳು (ಆರ್‌ಎಫ್‌ಒ) ಮತ್ತು ಸಂಬಂಧಪಟ್ಟ ಸಿಬ್ಬಂದಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಹಾಗೂ ಅರಣ್ಯ ಪಡೆ ಮುಖ್ಯಸ್ಥರಿಗೆ ಅಧಿಕೃತ ಲಿಖಿತ ನಿರ್ದೇಶನವನ್ನೂ ರವಾನಿಸಲಾಗಿದೆ.

ಹೋಟೆಲ್, ರೆಸಾರ್ಟ್, ಹೋಂಸ್ಟೇ ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ಸಂಪೂರ್ಣ ವ್ಯತ್ಯಯವಾಗಿರುವುದರಿಂದ ಅವರೆಲ್ಲರೂ ಲಾರಿಗಟ್ಟಲೆ ಸೌದೆ ಖರೀದಿಸುತ್ತಿರುವ ವರದಿಗಳಿವೆ. ಈ ಬೇಡಿಕೆಯನ್ನು ಪೂರೈಸಲು ಕೆಲ ಕಿಡಿಗೇಡಿಗಳು ರಾತ್ರೋರಾತ್ರಿ ಅರಣ್ಯ ಪ್ರದೇಶಗಳಲ್ಲಿ ಮರಗಳನ್ನು ಕಡಿಯುವ ಕುತಂತ್ರ ಮಾಡುವ ಸಾಧ್ಯತೆ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಅರಣ್ಯ ವಲಯಗಳಲ್ಲಿ ತಕ್ಷಣವೇ ಜಾರಿಗೆ ಬರುವಂತೆ ದಿನದ 24 ಗಂಟೆಯೂ ‘ಸೂಕ್ತ ಗಸ್ತು’ (Patrolling) ಹೆಚ್ಚಿಸುವಂತೆ ಆದೇಶಿಸಲಾಗಿದೆ.

ಅರಣ್ಯ ಇಲಾಖೆಯ ನಡುತೋಪುಗಳು, ಸರ್ಕಾರಿ ಜಮೀನುಗಳು ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ರಸ್ತೆ ಬದಿಯಲ್ಲಿ ಬೆಳೆಸಿರುವ ಮರಗಳ ರಕ್ಷಣೆಗೆ ಇದೀಗ ಅರಣ್ಯ ಇಲಾಖೆ ಪ್ರಮುಖ ಆದ್ಯತೆ ನೀಡಬೇಕಿದೆ. ಅನುಮಾನಾಸ್ಪದ ಚಟುವಟಿಕೆಗಳು, ಅರಣ್ಯದಂಚಿನ ಗ್ರಾಮಗಳಲ್ಲಿನ ಸಾಗಾಟ ವಾಹನಗಳ ಮೇಲೆ ನಿರಂತರ ನಿಗಾ ಇರಿಸಲು ಸೂಚಿಸಲಾಗಿದೆ.

ಒಟ್ಟಾರೆಯಾಗಿ, ಜಾಗತಿಕ ವಿದ್ಯಮಾನಗಳಿಂದ ಸೃಷ್ಟಿಯಾಗಿರುವ ಈ ಅನಿಲ ಬಿಕ್ಕಟ್ಟು ತಾತ್ಕಾಲಿಕವಾಗಿದ್ದರೂ, ಸಾವಿರಾರು ವರ್ಷಗಳಿಂದ ಬೆಳೆದು ನಿಂತಿರುವ ಅರಣ್ಯ ಸಂಪತ್ತನ್ನು ಈ ನೆಪದಲ್ಲಿ ನಾಶ ಮಾಡಲು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ರವಾನಿಸಿದೆ. ಸಾರ್ವಜನಿಕರೂ ಕೂಡ ಪರಿಸರ ಸಂರಕ್ಷಣೆಯ ಈ ಕಾರ್ಯದಲ್ಲಿ ಕೈಜೋಡಿಸಬೇಕಿದ್ದು, ಎಲ್ಲೆಂದರಲ್ಲಿ ಅಕ್ರಮವಾಗಿ ಮರ ಕಡಿಯುವುದು ಕಂಡುಬಂದರೆ ತಕ್ಷಣವೇ ಅರಣ್ಯ ಇಲಾಖೆಯ ಗಮನಕ್ಕೆ ತರಲು ಕೋರಲಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/lpg-shortage-in-karnataka-forest-minister-warns-officials-against-illegal-tree-cutting-for-fuel-447023.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo