Mahakavi Film: ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹೊಸ ಚಲನಚಿತ್ರ ‘ಮಹಾಕವಿ’: ಪುರುಷೋತ್ತಮ ಬಿಳಿಮಲೆ ಬರಹ | Mahakavi: Kishore as Pampa in Baraguru Ramachandrappa’s 25th Landmark Film on Kannada’s Adi Kavi

Karnataka

oi-Shankrappa Parangi

ಬೆಂಗಳೂರು: ಚಂಪೂ ಶೈಲಿಯಲ್ಲಿ ಕೃತಿಗಳನ್ನು ರಚಿಸಿ ರತ್ನತ್ರಯರಲ್ಲಿ ಒಬ್ಬರಾದ ಮಹಾಕವಿ ‘ಪಂಪ’ ಕನ್ನಡ ಸಾಹಿತ್ಯ ಅತ್ಯಂತ ಶ್ರೇಷ್ಠ ಕವಿಯೂ ಹೌದು. ಅವರ ಬಗ್ಗೆ ಕನ್ನಡದಲ್ಲಿ ಸಿನಿಮಾ ಮಾಡಲಾಗಿದೆ. ಚಿಂತಕ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ 25ನೇ ಸಿನಿಮಾ ಆಗಿ ‘ಮಹಾಕವಿ’ ಮೂಡಿ ಬಂದಿದೆ. ನಟ ಕಿಶೋರ್ ಅವರು ಇದರಲ್ಲಿ ಪಂಪನಾಗಿ ಬಣ್ಣ ಹಚ್ಚಿಸಿದ್ದಾರೆ. ಇದರ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಬರೆದುಕೊಂಡ ಫೇಸ್‌ಬುಕ್ ಬರಹ ಇಲ್ಲಿದೆ.

”ಕನ್ನಡದ ಓದುಗರಿಗೆ ‘ಮಹಾಕವಿ’ ಎಂದರೆ ಪಂಪ, ಆದಿಕವಿ ಎಂದರೂ ಅವನೇ. ಸಂಸ್ಕೃತದಲ್ಲಿ ಈ ಕೀರ್ತಿಗೆ ಭಾಜನನಾದವನು ಮಹಾಕವಿ ವಾಲ್ಮೀಕಿ. ಬೇರಾವ ಭಾರತೀಯ ಭಾಷೆಗಳಲ್ಲೂ ಇಂಥದ್ದೊಂದು ವಿಸ್ಮಯ ನಡೆದಿಲ್ಲ. ಕನ್ನಡದ ಘನತೆಯನ್ನು ನಿರ್ವಿವಾದವಾಗಿ ಹೆಚ್ಚಿಸಿದ ಕವಿ ಪಂಪನಾದುದರಿಂದಲೇ ‘ಪಸರಿಪ ಕನ್ನಡಕ್ಕೊಡೆಯನೋರ್ವನೆ ಪಂಪನಾವಗಂ’ ( ನಾಗರಾಜ ಕವಿ, 14ನೇ ಶತಮಾನ), ಎಂಬ ಮಾತು ಇವತ್ತಿನವರೆಗೆ ಮಸುಕಾಗದೆ ಹಾಗೇಯೇ ಉಳಿದಿದೆ. ವ್ಯಾಸನ ಸಂಸ್ಕೃತ ಭಾರತವನ್ನು (ಕ್ರಿಸ್ತಪೂರ್ವ ಸುಮಾರು 07ನೇ ಶತಮಾನ) ಭಾರತದ ದೇಸೀ ಭಾಷೆಯೊಂದರಲ್ಲಿ ಮೊದಲು ಬರೆದ ಶ್ರೇಯಸ್ಸು ಇವನಿಗೆ.

Mahakavi Film Baraguru Ramachandrappa

ಭಾರತದ ಇತರ ಅಭಿಜಾತ ಭಾಷೆಗಳಾದ ಒಡಿಯಾ, ತಮಿಳು, ಅಸ್ಸಾಮೀ, ತೆಲುಗು, ಮಲೆಯಾಳಂಗಳಲ್ಲಿ ಮಹಾಭಾರತ ಕಾಣಿಸಿಕೊಂಡದ್ದು ಆಮೇಲೆ. ಅಸಾಮಾನ್ಯ ಪ್ರತಿಭೆಯ ಪಂಪನು ಸಂಸ್ಕೃತ ಭಾರತವನ್ನು ಕನ್ನಡವಾಗಿಸುವಾಗ ಕೃಷ್ಣನನ್ನೂ ಗೌಣವಾಗಿಸಿದ, ಭಗವದ್ಗೀತೆಯನ್ನೂ ಬದಿಗೆ ಸರಿಸಿದ. ಅರ್ಜುನನ್ನು ಬನವಾಸಿಯಲ್ಲಿ ಓಡಾಡಿಸಿ, ಮತ್ತೆ ಹುಟ್ಟುವುದಾದರೆ ಹಸ್ತಿನಾವತಿಯಲ್ಲಿ ಅಲ್ಲ, ಬನವಾಸಿಯಲ್ಲಿ ಎಂದು ಘೋಷಿಸಿದ. ಜಾತಿಯೇ ಪ್ರಧಾನವಾಗಿರುವ ದೇಶದಲ್ಲಿ ʼಮಾನವ ಜಾತಿ ಒಂದೆ ವಲಂʼ ಎಂದು ದಿಟ್ಟವಾಗಿ ಘೋಷಿಸಿದ.

ಈ ಅರ್ಥದಲ್ಲಿ ಕನ್ನಡಕ್ಕೊಂದು ವೈಚಾರಿಕ ನೆಲೆಗಟ್ಟನ್ನು ರೂಪಿಸಿದ ಕೀರ್ತಿ ಪಂಪನದ್ದು. ಇಂಥ ಪಂಪನ ಬದುಕನ್ನು ಆಧರಿಸಿ ಬರಗೂರು ರಾಮಚಂದ್ರಪ್ಪನವರು ತಯಾರಿಸಿದ ಚಲನಚಿತ್ರವೇ ‘ಮಹಾಕವಿ’ ಇಷ್ಟಿದ್ದರೂ ಪಂಪನೆಂಬ ಮಹಾಕವಿಯ ಬದುಕನ್ನು ಆಧರಿಸಿ ಒಂದು ಸಿನೇಮಾ ಮಾಡುವಷ್ಟು ಮಾಹಿತಿಗಳು ನಮಗೆ ದೊರಕಿಲ್ಲ. ಅವನ ಎರಡು ಕೃತಿಗಳಾದ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯಗಳಲ್ಲಿ ಸಿಕ್ಕ ಮಾಹಿತಿಗಳು ಅತ್ಯಲ್ಪ. ಪಂಪನ ತಮ್ಮನಾದ ಜಿನವಲ್ಲಭ ಬರೆಯಿಸಿದ ಶಾಸನದಿಂದಾಗಿ ಪಂಪನ ಬಗ್ಗೆ ಒಂದಷ್ಟು ವಿವರಗಳು ದೊರಕಿದವು.

ಎರಡು ಕಾವ್ಯ ಆಧರಿಸಿ ‘ಮಹಾಕವಿ’ ಸಿನಿಮಾ

ಈ ಮಿತಿಗಳ ನಡುವೆಯೂ ನಾಡಿನ ಶ್ರೇಷ್ಠ ಚಿಂತಕರೂ ಲೇಖಕರೂ ಆಗಿರುವ ಬರಗೂರು ರಾಮಚಂದ್ರಪ್ಪನವರು ಪಂಪನ ಬಗ್ಗೆ ಹೆಚ್ಚು ಮಾಹಿತಿ ಇಲ್ಲವೆಂಬ ಮಾತನ್ನು ಒಪ್ಪದೆ, ಪಂಪನ ಎರಡು ಕಾವ್ಯಗಳ ಮೂಲಕವೇ ಸಿನೇಮಾಕ್ಕೆ ಬೇಕಾದಷ್ಟು ಮಾಹಿತಿಗಳನ್ನು ಸೃಷ್ಟಿಸಿಕೊಂಡರು. ಈ ನವೀನ ತಂತ್ರದ ಮೂಲಕ ಅವರು ಜೀವನ ಚರಿತ್ರೆಯ ಚಲನಚಿತ್ರಗಳು ಹೇಗೆ ಕತೆಯನ್ನು ಹೇಳಬಹುದು ಎಂಬುದನ್ನು ನಿರೂಪಿಸಿದ್ದಾರೆ. ಇತಿಹಾಸವೆಂದರೆ, ಯುದ್ಧ, ಆರ್ಭಟಗಳು, ಕಿವಿ ಗಡಚಿಕ್ಕುವ ಸಂಗೀತ ಇತ್ಯಾದಿ ನಂಬಿಕೆಗಳನ್ನು ತಿರಸ್ಕರಿಸಿ, ನಾವು ಚರಿತ್ರೆಯನ್ನು ನೋಡಬೇಕಾದ ಕ್ರಮವೊಂದನ್ನು ಬರಗೂರು ಮಹಾಕವಿ ಚಿತ್ರದ ಮೂಲಕ ನಮಗೆ ತೋರಿಸಿದ್ದಾರೆ.

ಚಿತ್ರದ ಬಹಳ ಮುಖ್ಯವಾದ ಕೆಲವು ಅಂಶಗಳು ಈ ಕೆಳಗಿನಂತಿವೆ

1. ಕವಿಯಾಗಿದ್ದ ಪಂಪನು ಕಲಿಯೂ ಆಗಿದ್ದ ಎಂಬುದನ್ನು ಕನ್ನಡ ಸಾಹಿತ್ಯದ ಓದುಗರು ಬಲ್ಲರು. ಈ ಅಂಶವನ್ನು ಆಧರಿಸಿ ಬರಗೂರರು ಕವಿ ಪ್ರತಿಭೆಯೊಂದು ಅರಸೊತ್ತಿಗೆಗೆ ಅಡಿಯಾಳಾಗಿರಬೇಕೇ ಎಂಬ ಸಮಕಾಲೀನ ಪ್ರಶ್ನೆಯನ್ನೆತ್ತಿಕೊಂಡು ಪಂಪನ ದ್ವಂದ್ವಗಳನ್ನು ಪರಿಶೀಲಿಸುತ್ತಾರೆ. ಇಲ್ಲಿ ಸಹಜವಾಗಿ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಅದು ಕಲಿಯಾದಾಗ ಉಂಟಾಗುವ ಯುದ್ಧಗಳು ಮತ್ತು ಅದರಿಂದ ಹುಟ್ಟುವ ಹಿಂಸೆಯ ಪ್ರಶ್ನೆ. ಈ ಸಮಸ್ಯೆಯನ್ನು ಬರಗೂರು ಪಂಪನ ಆದಿಪುರಾಣವನ್ನು ಕೇಂದ್ರದಲ್ಲಿರಿಸಿಕೊಂಡು ಚರ್ಚಿಸುತ್ತಾರೆ. ಕೈಯಲ್ಲಿ ಖಡ್ಗ ಹಿಡಿದ ಪಂಪನಿಗೆ ಅದರೊಳಗೆ ಓಲೆಗರಿ ಕಾಣಿಸುತ್ತದೆ.

ಓಲೆಗರಿಯೊಳಗೆ ಖಡ್ಗ ಮೂಡುತ್ತದೆ. ಅಂತಿಮವಾಗಿ ನೀಲಾಂಜನೆಯ ಪ್ರತಿಭೆ ಸಾವಿನಲ್ಲಿ ಕೊನೆಯಾದರೆ, ಭರತನ ಯುದ್ಧವು ತ್ಯಾಗದಲ್ಲಿ ಮುಗಿಯುತ್ತದೆ. ಕಾವ್ಯಧರ್ಮ ಮತ್ತು ಧರ್ಮದ ಸಮಸ್ಯೆಯೂ ಇಲ್ಲಿ ಮುನ್ನೆಲೆಗೆ ಬರುತ್ತದೆ. ಕವಿಯ ದ್ವಂದ್ವಗಳನ್ನು ಸಿನೇಮಾವು ಕಾವ್ಯದಷ್ಟೇ ಪರಿಣಾಮಕಾರಿಯಾಗಿ ಹಿಡಿದಿಟ್ಟಿದೆ.

2. ಚಲನಚಿತ್ರದ ಎರಡನೆಯ ಮುಖ್ಯ ಅಂಶವೆಂದರೆ- ಜಾತಿಯ ಪ್ರಶ್ನೆ. ಇದನ್ನು ಬರಗೂರು ವಿಕ್ರಮಾರ್ಜುನ ವಿಜಯವನ್ನು ಆಧರಿಸಿ ಚರ್ಚಿಸುತ್ತಾರೆ. ʼಮಾನವಜಾತಿ ತಾನೊಂದೆ ವಲಂʼ ಎಂದು ಸಾರಿದ ಪಂಪನ ಮುಂದೆ ಇದೀಗ ಕರ್ಣ ನಿಂತಿದ್ದಾನೆ. ಆತ ʼಕುಲವಿಹೀನʼ ಎಂಬ ಮಾತನ್ನು ಆಗಾಗ ಕೇಳಬೇಕಾಗುತ್ತದೆ. ಅಂತ ಸಂದರ್ಭದಲ್ಲಿ ಪಂಪನು ಕರ್ಣನ ಪರವಾಗಿ ನಿಲ್ಲುತ್ತಾನೆ.

ʼಕರ್ಣ ರಸಾಯನಮಲ್ತೆ ಭಾರತಂʼ ಎಂಬ ಮಾತನ್ನೂ ಹೇಳುತ್ತಾನೆ. ಇಲ್ಲಿ ಪಂಪನ ಮುಂದಿದ್ದ ಸಮಸ್ಯೆ ಅನ್ನ ಮತ್ತು ಆಶ್ರಯಕೊಟ್ಟ ಅರಿಕೇಸರಿಯನ್ನು ಹೇಗೆ ಸಂಭಾಳಿಸುವುದು ಎಂಬುದು. ಆದರೆ ಪಂಪ ಅರಸೊತ್ತಿಗೆಯನ್ನೇ ಅಂತಿಮ ಎಂದು ಭಾವಿಸದೆ, ನಿರ್ಭಿಡೆಯಿಂದ “ಪೆರರೀವುದೇಂ ಪೆರರಿಂದಪ್ಪುದೇಂ” ಎಂದು ಸವಾಲು ಹಾಕಿ ಮುಂದುವರೆಯುತ್ತಾನೆ. ಸಿನೇಮಾದ ಈ ಭಾಗ ಮನೋಜ್ಞವಾಗಿದೆ.

3. ಮಹಾಕವಿಯ ಪತ್ನಿಯಾದ ಜಕ್ಕಲೆಯು ಆಗಾಗ ಪ್ರೇಕ್ಷಕರ ಪರವಾಗಿ ಕೆಲವು ಪ್ರಶ್ನೆಗಳನ್ನು ಎತ್ತುತ್ತಾ, ಅರಮನೆ ಮತ್ತು ಕವಿಮನೆಗಳ ನಡುವೆ ಸಮನ್ವಯ ಸಾಧಿಸುತ್ತಾಳೆ. ಪಂಪನ ಗುರುಗಳಾದ ದೇವೇಂದ್ರ ಮುನಿಗಳೂ ಬಹುಮಟ್ಟಿಗೆ ಇದುವೇ ಕೆಲಸವನ್ನು ಮಾಡುತ್ತಾರೆ. ಈ ಎರಡೂ ಪಾತ್ರಗಳು ಚೇತೋಹಾರಿಯಾಗಿವೆ.

4. ಸಿನೇಮಾ ಕೊನೆಯಾದಾಗ ಅರಮನೆಯ ಭವ್ಯ ಮೆರವಣಿಗೆಯನ್ನು ತಿರಸ್ಕರಿಸಿದ ಮಹಾಕವಿ, ಯಾವುದೋ ಬೆಟ್ಟದಂಚಿನಲ್ಲಿ ನಿಂತು ನಿಸರ್ಗವನ್ನೂ ಆಕಾಶವನ್ನೂ ಒಂಟಿಯಾಗಿ ದಿಟ್ಟಿಸುವ ಚಿತ್ರ ಮೂಡುತ್ತದೆ. ಈ ದೃಶ್ಯವು ಪಂಪ ಮತ್ತು ಅವನ ಕಾವ್ಯಗಳು ಯಾವುದೇ ಗಡಿಗಳಿಲ್ಲದೆ ನೋಡುಗರ ಮನಸಿನಲ್ಲಿ ಅಜರಾಮರವಾಗಿ ಉಳಿಯುವಂತೆ ಮಾಡುತ್ತದೆ. ಇದು ಚಿತ್ರದ ನಿಜವಾದ ಯಶಸ್ಸು. ಪಂಪನ ಪಾತ್ರಧಾರಿ ನಟ ಕಿಶೋರ್ ಮಹಾಕವಿಯ ಪ್ರತಿಷ್ಠೆಗೆ ಧಕ್ಕೆ ಬಾರದಂತೆ ನಟಿಸಿದ್ದಾರೆ.‌

ಮಹಾಕವಿಯು ಬನವಾಸಿಯನ್ನು ಇಷ್ಟಪಟ್ಟಿದ್ದ. ಸಿನೇಮಾವು ಬನವಾಸಿಯ ಸೌಂದರ್ಯವನ್ನು ಅದ್ಭುತವಾಗಿ ಹಿಡಿದಿಟ್ಟಿದೆ. ಛಾಯಾಚಿತ್ರಗ್ರಹಣ ಮೋಹಕವಾಗಿದೆ. ಅಭಿಜಾತ ಕಾವ್ಯಗಳನ್ನು ಚಲಚಿತ್ರವಾಗಿಸುವಾಗ, ಮಹಾಕಾವ್ಯಗಳ ಭವ್ಯತೆಗೆ ಕುಂದಾಗದಂತೆ ಸಂಗೀತವನ್ನು ಹೇಗೆ ಬಳಸಬೇಕೆಂಬುದು ಅರ್ಥವಾಗಬೇಕಾದರೆ, ಮಹಾಕವಿ ಸಿನೇಮಾ ನೋಡಬೇಕು.

ವಿದ್ಯಾರ್ಥಿಗಳು ಈ ಸಿನಿಮಾ ನೋಡಬೇಕು..

ನಮ್ಮ ಅಭಿಜಾತ ಕಾವ್ಯಗಳನ್ನು ಹೊಸಬಗೆಯಿಂದ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವ ಮಹಾಕವಿ ಚಲನಚಿತ್ರವನ್ನು ಎಲ್ಲ ಕನ್ನಡಿಗರೂ ನೋಡಬೇಕು. ಅದರಲ್ಲೂ ಮುಖ್ಯವಾಗಿ ಕಾವ್ಯ ಪರಂಪರೆಯಿಂದ ದೂರ ಸರಿಯುತ್ತಿರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ಚಲನಚಿತ್ರವನ್ನು ನೋಡಲೇಬೇಕು. ಅಥವಾ ನೋಡಲು ಸಾಧ್ಯವಾಗುವಂಥ ವಾತಾವರಣ ನಿರ್ಮಾಣವಾಗಬೇಕು. ಅಭಿಜಾತ ಪರಂಪರೆಯೊಡನೆ ಶಾಲಾ ಕಾಲೇಜಿನ ಮಕ್ಕಳು ಸಂಬಂಧ ಸಾಧಿಸಿಕೊಳ್ಳಲು ಮಹಾಕವಿ ಚಲನಚಿತ್ರವು ಖಂಡಿತಾ ಸಹಕರಿಸುತ್ತದೆ ಎಂಬ ವಿಶ್ವಾಸ ನನ್ನದು” ಎಂದು ಸಿನಿಮಾ ಕುರಿತು ಮಹತ್ವದ ಸಾಲುಗಳನ್ನು ಅವರು ಬರೆದಿಕೊಂಡಿದ್ದಾರೆ. ಅವರ ಬಹರ ನೋಡಿದ ನೆಟ್ಟಿಗರು ಸಿನಿಮಾ ಬಿಡುಗಡೆ ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ. ನೋಡುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/mahakavi-kishore-as-pampa-in-baraguru-ramachandrappa-s-25th-landmark-film-on-kannadas-adi-kavi-443303.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo