
Karnataka
oi-Manohara M
ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ (KMF) ಹೆಮ್ಮೆಯ ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾ ರಾಣಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ಸುಧಾ ರಾಣಿ ಅವರನ್ನು ನಂದಿನಿ ಬ್ರ್ಯಾಂಡ್‌ನ ಮುಖವಾಗಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಡಿ.ಕೆ. ಸುರೇಶ್, “ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಸುಧಾ ರಾಣಿ ಅವರನ್ನು ಆಯ್ಕೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯ. ಬಮೂಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಅಭಿನಯದಿಂದ ಜನಮನ ಗೆದ್ದಿರುವ ಸುಧಾ ರಾಣಿ, ಸರಳತೆ, ನಂಬಿಕೆ ಮತ್ತು ಕುಟುಂಬ ಮೌಲ್ಯಗಳ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ. ಇದೇ ಗುಣಗಳು ನಂದಿನಿ ಬ್ರ್ಯಾಂಡ್‌ನ ಮೂಲ ತತ್ವಗಳಿಗೂ ಹೊಂದಿಕೆಯಾಗುತ್ತವೆ ಎಂಬ ಕಾರಣದಿಂದ ಅವರನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಬಮೂಲ್ ಮೂಲಗಳು ತಿಳಿಸಿವೆ.
ನಂದಿನಿ ಉತ್ಪನ್ನಗಳು ಶುದ್ಧತೆ, ಗುಣಮಟ್ಟ ಮತ್ತು ರೈತಪರ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದು, ಸುಧಾ ರಾಣಿ ಅವರ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆ ಬ್ರ್ಯಾಂಡ್‌ಗೆ ಇನ್ನಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳ ಜಾಹೀರಾತು ಹಾಗೂ ಸಾರ್ವಜನಿಕ ಅಭಿಯಾನಗಳಲ್ಲಿ ಸುಧಾ ರಾಣಿ ಕಾಣಿಸಿಕೊಳ್ಳಲಿದ್ದಾರೆ. ಈ ನೇಮಕಾತಿಯ ಮೂಲಕ ನಂದಿನಿ ಬ್ರ್ಯಾಂಡ್‌ನ್ನು ರಾಜ್ಯದಾದ್ಯಂತ ಮತ್ತಷ್ಟು ಜನಪ್ರಿಯಗೊಳಿಸುವುದು ಮತ್ತು ಗ್ರಾಹಕರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಬಲಪಡಿಸುವುದು ಬಮೂಲ್‌ನ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಶ್ರೀಮತಿ ಸುಧಾ ರಾಣಿ ಅವರು ಆಯ್ಕೆಯಾಗಿದ್ದು, ಬಮೂಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ. #Nandini #BAMUL #KMF pic.twitter.com/xIVaFDJwKP
— DK Suresh (@DKSureshINC) February 9, 2026
ಸಂಭಾವನೆ ಕೇಳದೆ ರಾಯಭಾರಿಗಳಾಗಿದ್ದ ರಾಜ್ ಕುಟುಂಬ
ನಂದಿನಿ ಬ್ರ್ಯಾಂಡ್ ಮತ್ತು ಕನ್ನಡ ಚಿತ್ರರಂಗದ ನಂಟು ದಶಕಗಳ ಇತಿಹಾಸ ಹೊಂದಿದೆ. 1996ರಲ್ಲಿ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರು ಮೊದಲ ಬಾರಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ನಂದಿನಿ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಅವರು, ಈ ಜಾಹೀರಾತುಗಳಿಗೆ ಯಾವುದೇ ರೀತಿಯ ಸಂಭಾವನೆಯನ್ನು ಪಡೆಯದೆ, ಸಂಪೂರ್ಣ ಉಚಿತವಾಗಿ ಸೇವೆ ಸಲ್ಲಿಸಿದ್ದರು ಎಂಬುದು ವಿಶೇಷ.
ನಂತರ ರಾಜ್‌ಕುಮಾರ್ ಅವರ ಪುತ್ರ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕೂಡ ತಂದೆಯ ಹಾದಿಯಲ್ಲೇ ನಡೆದು, ನಂದಿನಿ ಉತ್ಪನ್ನಗಳ ಜಾಹೀರಾತುಗಳಲ್ಲಿ ಯಾವುದೇ ಸಂಭಾವನೆ ಪಡೆಯದೇ ಭಾಗವಹಿಸಿದ್ದರು. ನಂದಿನಿ ಬ್ರ್ಯಾಂಡ್ ಮೇಲೆ ಇದ್ದ ನಂಬಿಕೆ, ರೈತಪರ ಮೌಲ್ಯಗಳು ಮತ್ತು ಕನ್ನಡ ನಾಡಿನ ಹಿತದೃಷ್ಟಿಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದರು.
ಇದಾದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಕಾರ್ಯನಿರ್ವಹಿಸಿದರು. ಕನ್ನಡ ಸಂಸ್ಕೃತಿ, ರೈತರು ಮತ್ತು ಸ್ಥಳೀಯ ಉತ್ಪನ್ನಗಳ ಪರವಾಗಿ ನಿಲ್ಲುವ ನಂದಿನಿ ಬ್ರ್ಯಾಂಡ್‌ಗೆ ಕನ್ನಡದ ಅಗ್ರ ತಾರೆಯರ ಬೆಂಬಲ ಸದಾ ದೊರಕಿರುವುದು ನಂದಿನಿಯ ವಿಶ್ವಾಸಾರ್ಹತೆಗೆ ಮತ್ತಷ್ಟು ಬಲ ನೀಡಿದೆ.
ರಾಜ್‌ಕುಮಾರ್ ಕುಟುಂಬದ ಈ ಸೇವಾಭಾವ ಮತ್ತು ನಂದಿನಿಯೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧ ಇಂದು ಕೂಡ ಜನರಲ್ಲಿ ವಿಶೇಷ ಗೌರವ ಮತ್ತು ಅಭಿಮಾನವನ್ನು ಮೂಡಿಸುತ್ತಿದೆ. ಇದೀಗ ನಟಿ ಸುಧಾರಾಣಿ ಅವರು ನಂದಿನಿ ರಾಯಭಾರಿಯಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/kannada-actress-sudha-rani-appointed-as-nandini-new-brand-ambassador-by-karnataka-milk-federation-443129.html. xn--babytilbehr-pgb.com does not claim ownership of this content. All rights remain with the original publisher.
